ಹಾಸನ

ಗೌಡ್ರನ್ನ ಬಯ್ಕಂಡ್ ತಿರ್ಗೋದೇ ಕಾಂಗ್ರೆಸ್ ನಾಯಕರ ಕೆಲಸ

Published On :

ಹೊಳೆನರಸೀಪುರ: ಸುಳ್ಳು ಹೇಳ್ಕಂಡು ಎಷ್ಟು ದಿನ ರಾಜಕೀಯ ಮಾಡಕಾಯ್ತದೆ ಸ್ವಾಮೀ, ಕಾಂಗ್ರೆಸ್‌ನವ್ರಿಗೆ ಬರಿ ದೇವೇಗೌಡ್ರು ಮತ್ತೆ ಅವ್ರ ಮಕ್ಕಳನ್ನ ಬಯ್ಕಂಡ್ ತಿರ್ಗೋದೇ ಗೊತ್ತೇ ಹೊರ್ತು ಅವ್ರ ಕ್ಷೇತ್ರಾನ ಅಭಿವದ್ಧಿ ಮಾಡವ್ರ ಜನರ ಮುಂದೆ ಸಾಬೀತು ಮಾಡ್ಲೀ ನೋಡಾನ...
ಹೀಗೆ ತಮ್ಮ ಗ್ರಾಮೀಣ ಶೈಲಿಯ ಮಾತಿನಿಂದಲೇ ಕಾಂಗ್ರೆಸ್‌ನವರ ಆರೋಪಗಳಿಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಇಲ್ಲಿ ತಿರುಗೇಟು ನೀಡಿದರು. ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು  ಮತ್ತು ನಾನು ಪರಿಶಿಷ್ಟ ಸಮಾಜಕ್ಕೆ ಏನೂ ಮಾಡಿಲ್ಲ, ಹರದನಹಳ್ಳಿಯಲ್ಲಿನ ದಲಿತರಿಗೆ ಮನೆ ಕೊಟ್ಟಿಲ್ಲ, ಕುಡಿಯೋಕೆ ನೀರು ಕೊಟ್ಟಿಲ್ಲ, ಯಾರನ್ನೂ ಬೆಳೆಯೋಕೆ ಬಿಡಲ್ಲ, ಪ್ರಧಾನಿಯಾದಾಗ ದೇವೇಗೌಡರ ಜೊತೆಗಿದ್ದವರು ಇವತ್ತು ಯಾರೂ ಅವರ ಜೊತೆಗಿಲ್ಲ ಎಂದೆಲ್ಲಾ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅವರು ಹೇಳಿದರು.  ದೇವೇಗೌಡರು ರಾಜಕೀಯವಾಗಿ ನಾಯಕರುಗಳನ್ನು ಹುಟ್ಟು ಹಾಕುವ ಕಾರ್ಖಾನೆ ಇದ್ದಂತೆ, ಇದುವರೆಗೂ ಅವರು ಎಷ್ಟೋ ನಾಯಕರುಗಳನ್ನು ಹುಟ್ಟು ಹಾಕಿದ್ದಾರೆ. ಬಹುತೇಕ ನಾಯಕರು ತಾವು ರಾಜಕೀಯವಾಗಿ ಬೆಳೆದ ನಂತರ ಎಲ್ಲರೂ ಗೌಡರನ್ನು ಬಿಟ್ಟು ಬೇರೆ ಹೋದರು. ಆದರೆ, ದೇವೇಗೌಡರನ್ನು ಬಿಟ್ಟು ಹೋದ ನಾಯಕರುಗಳೆಲ್ಲಾ ಇಂದು ಏನಾಗಿದ್ದಾರೆ ಎಂಬುದನ್ನು ರಾಜ್ಯದ ಜನರೇ ನೋಡುತ್ತಿದ್ದಾರೆ ಎಂದರು. ಹರದನಹಳ್ಳಿಯಲ್ಲಿನ ದಲಿತರಿಗಾಗಿಯೇ ಈ ಹಿಂದೆಯೇ ಮನೆಗಳನ್ನು ಕಟ್ಟಿಸಿಕೊಟ್ಟಿರುವುದಲ್ಲದೇ, ರಸ್ತೆ, ಚರಂಡಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣದಲ್ಲಿನ ಪ್ರಚಾರ ಸಭೆಯಲ್ಲಿ ಮಾಡಿದ ಆರೋಪಕ್ಕೆ ಪ್ರತ್ಯುತ್ತರಿಸಿದರು. ಹಾಸನದಲ್ಲಿನ ಅಂಬೇಡ್ಕರ್ ಭವನಕ್ಕೆ ದೇವೇಗೌಡರು 1994ರಲ್ಲಿ ಶಂಕುಸ್ಥಾಪನೆ ನೆರವೇರಿಸಿದರು, ನಂತರದಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಿಲ್ಲವೇಕೆ, ನಾನು ಮಂತ್ರಿಯಾದಾಗ ರು. 80 ಲಕ್ಷ ಖರ್ಚು ಮಾಡಿ ಭವನವನ್ನು ಪೂರ್ಣಗೊಳಿಸಬೇಕಾಯಿತು ಎಂದರು.  ಹೊಳೆನರಸೀಪುರದಲ್ಲಿ 3 ಅಂಬೇಡ್ಕರ್  ಭವನವನ್ನು ನಿರ್ಮಿಸಿದ್ದರೂ, ಸುಮಾರು ರು. 1ಕೋಟಿ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾದಾಗ ನಿವೇಶನದ ಮೂಲಕ ತಕರಾರು ಹಾಕಿ ತಡೆಯೊಡ್ಡಿದವರು ಯಾರು? ಎಂಬುದನ್ನು ಜನರ ಮುಂದೆ ಕಾಂಗ್ರೆಸ್‌ನವರು ಹೇಳಲಿ ಎಂದು ಕಾಂಗ್ರೆಸ್ ನಾಯಕರುಗಳ ಟೀಕೆಗೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.