ಹಾಸನ

23ರಿಂದ ಅರಣ್ಯ ಇಲಾಖೆ ದಿನಗೂಲಿ ನೌಕರರ ಮುಷ್ಕರ

Published On :

ಹಾಸನ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಇಲಾಖೆ  ದಿನಗೂಲಿ ನೌಕರರ ಸಂಘ ಹಾಗೂ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ವರ್ಗಗಳ ದಿನಗೂಲಿ ನೌಕರರ ಸಂಘದ ವತಿಯಿಂದ ಏ.23 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಹಾಸನ ವೃತ್ತ ವ್ಯಾಪ್ತಿಗೆ ಬರುವ ತುಮಕೂರು ವಿಭಾಗ, ಹಾಸನ ವಿಭಾಗ, ನಾನಾ ವಲಯ  ಕಚೇರಿಗಳಲ್ಲಿ ದಿನಗೂಲಿ, ಪಿಸಿಪಿ ನೌಕರರಿಗೆ ಸರ್ಕಾರಿ  ಸವಲತ್ತುಗಳಿಂದ ವಂಚನೆ, ಮೋಸ, ಸುಳ್ಳು ಮಾಹಿತಿ, ಕಡಿಮೆ ಮಂಜೂರು, ಸರ್ಕಾರಿ ಹಣದ ದುರುಪಯೋಗ, ನೌಕರರ ಮಂಜೂರುಗಳಲ್ಲಿ ಪಾಲು ಪಡೆಯುತ್ತಿರುವ ಬಗ್ಗೆ ಹಾಗೂ ಕಾನೂನು ಉಲ್ಲಂಘನೆ ಮಾಡಿ ನೌಕರರನ್ನು ಕೆಲಸದಿಂದ ತೆಗೆದಿರುವ ಕ್ರಮವನ್ನು ವಿರೋಧಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹರೀಶ್ ತಿಳಿಸಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ನೌಕರರ ಮಂಜೂರಿಯನ್ನು ಕಡ್ಡಾಯವಾಗಿ ಆ್ಯಕ್ಸಿಸ್ ಬ್ಯಾಂಕಿನಲ್ಲಿ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಅಂದರೆ ನೌಕರರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಪ್ರಾಣ ಹಾನಿ ಆದಲ್ಲಿ  ಈ ನೌಕರನ ಕುಟುಂಬಕ್ಕೆ ರು. 2 ಲಕ್ಷ ವಿಮೆ ಕೊಡುವ ಸೌಲಭ್ಯವಿದೆ. ಆದರೆ, ಈ ಆದೇಶ ಜಾರಿಗೊಳಿಸದೆ ನೌಕರರನ್ನು ಈ ಸೌಲಭ್ಯದಿಂದ ವಂಚಿಸಲಾಗುತ್ತಿದೆ ಎಂದು ದೂರಿದ್ದಾರೆ.
ಅರಣ್ಯ ರೋದನ: ತುಮಕೂರು ವಿಭಾಗದಲ್ಲಿ  ಕೆಲಸ ನಿರ್ವಹಿಸುತ್ತಿರುವ ನಾನಾ ವಲಯಗಳಲ್ಲಿ 15 ರಿಂದ  26 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ 6 ಜನ ಪಿಸಿಪಿ ಹಾಗೂ 5 ಜನ  ಎಂ.ಆರ್. ನೌಕರರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿಸಲಾಗಿದೆ ಹಾಗೂ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಅರಕಲಗೂಡು ವಲಯದಲ್ಲಿ 13 ನೌಕರರು ಕೆಲಸ ನಿರ್ವಹಿಸುತ್ತಿದ್ದು, 7 ನೌಕರರಿಗೆ ರು. 1000 ಹೆಚ್ಚುವರಿ ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಉಳಿದ 6 ಮಂದಿ ನೌಕರರಿಗೆ ಅನ್ಯಾಯವಾಗಿದ್ದು, ಅವರಿಗೂ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಘವು  ಹಲವು ಬಾರಿ ಮನವಿ ಮಾಡಿದ್ದರೂ  ಹಾಸನ ವೃತ್ತದ ನಾನಾ ವಲಯಗಳ ನೌಕರರಿಗೆ ನ್ಯಾಯ ಸಿಕ್ಕಿಲ್ಲ. ಆದರೆ ವಿಭಾಗ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ  ಅರ್ಹತೆ ಇಲ್ಲದ ನೌಕರರಿಗೆ  ಅನುಕೂಲ ಮಾಡಲಾಗಿದೆ. ಈ ತಾರತಮ್ಯ ನಿಲ್ಲಬೇಕು. ಎಲ್ಲಾ ನೌಕರರಿಗೂ ಸಮಾನ ನ್ಯಾಯ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಏ. 23ರಂದು ಅನಿರ್ದಿಷ್ಟ  ಅವಧಿಯವರೆಗೆ ಧರಣಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹಗಳನ್ನು ಹಮ್ಮಿಕೊಳ್ಳುವ ಮೂಲಕ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.