ಬಾಲ ಕಾರ್ಮಿಕರ ನಿಯೋಜನೆ ಶಿಕ್ಷಾರ್ಹ ಅಪರಾಧ
ಹಾಸನ: ಬಾಲ ಕಾರ್ಮಿಕ 1986ರ ಕಲಂ 3ರನ್ವಯ 14 ವರ್ಷದೊಳಗಿನ ಬಾಲಕರನ್ನು, ಬಾಲಕಿಯರನ್ನು ಮನೆ ಕೆಲಸ, ಪ್ಲಾಂಟೇಷನ್ಗಳಲ್ಲಿ, ಕಾರ್ಖಾನೆ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು, ಬೇಕರಿಗಳು, ಕಾರು ಅಥವಾ ಸ್ಕೂಟರ್ ಗ್ಯಾರೇಜ್ಗಳು, ಅಂಗಡಿ ಅಥವಾ ಇತರೆ ವಾಣಿಜ್ಯ ಸಂಸ್ಥೆಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳು, ಇಟ್ಟಿಗೆ ಗೂಡುಗಳು, ಕ್ರಷರ್ಗಳು ಮತ್ತು ಕಲ್ಲು, ಕ್ವಾರೆಗಳಲ್ಲಿ ಹಾಗೂ ಸದರಿ ಕ್ವಾರೆಯಲ್ಲಿ ಅಪಾಯಕಾರಿ ಕೆಲಸಗಳು ಎಂದು ಗುರುತಿಸಿರುವ ಎಲ್ಲಾ ಪ್ರಕ್ರಿಯೆಗಳು ಹಾಗೂ ಉದ್ಯೋಗಗಳಲ್ಲಿ ನಿಯೋಜಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರು. 20,000 ದಂಡ ವಿಧಿಸಬಹುದಾಗಿದೆ.
ಕಾನೂನು ಕ್ರಮ: ಸೂಚನೆ ಮೀರಿ 14 ವರ್ಷದೊಳಗಿನ ಅಥವಾ ಶಾಲಾ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮೇಲೆ ತಿಳಿಸಿರುವ ಪ್ರಕ್ರಿಯೆಗಳು ಮತ್ತು ಉದ್ಯೋಗಗಳಲ್ಲಿ ನಿಯೋಜಿಸಿಕೊಂಡಲ್ಲಿ, ಕಾರ್ಮಿಕ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳ ಸಹಯೋಗದೊಂದಿಗೆ ಅನಿರೀಕ್ಷಿತ ದಾಳಿ ನಡೆಸಿ ತಪ್ಪ್ಪಿತಸ್ಥ ನಿಯೋಜಕರ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. 14 ವರ್ಷದೊಳಗಿನ ಬಾಲ ಕಾರ್ಮಿಕರು ಉದ್ಯೋಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಟೋಲ್ ಫ್ರೀ ಸಂಖ್ಯೆ 1098 ಅಥವಾ ಜಿಲ್ಲಾ ಬಾಲ ಕಾರ್ಮಿಕ ಸಹಾಯಕ ವಾಣಿ ಯೋಜನಾ ಸಂಘದ ಕಚೇರಿ ಸಂಖ್ಯೆ 08172-235447ಗೆ ಮಾಹಿತಿ ನೀಡಿ ಸಾರ್ವಜನಿಕರು ಬಾಲ ಕಾರ್ಮಿಕ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಹಕರಿಸುವಂತೆ ಚಿಕ್ಕಮಗಳೂರು ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತರು ಕೋರಿದ್ದಾರೆ.
ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ
ಹಾಸನ: ತಾಲೂಕಿನ ಕಂದಲಿಯ ಹಾಸನ ಕ್ಯಾನ್ಸರ್ ಸೆಂಟರ್ನಲ್ಲಿ ಏ. 22ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕ್ಯಾನ್ಸರ್ ಪತ್ತೆಯಾದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 72040 59259ಯನ್ನು ಸಂಪರ್ಕಿಸಬಹುದು.
ಡರ್ಟ್ ಟ್ರ್ಯಾಕ್ ರೇಸ್ ಇಂದು
ಹಾಸನ: ಸಹರಾ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಏ. 20ರಂದು ಭಾನುವಾರ ಸತ್ಯಮಂಗಲ ಬಡಾವಣೆ, ಸತ್ಯಮಂಗಲ ಕೆರೆಯ ಅಂಗಳದಲ್ಲಿ ಬೆಳಗ್ಗೆ 9ಕ್ಕೆ ರಾಷ್ಟ್ರಮಟ್ಟದ ಡರ್ಟ್ ಟ್ರ್ಯಾಕ್ ರೇಸ್ ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಇಂದು ಕೃಷಿ ವಿವಿ ಘಟಿಕೋತ್ಸವ
ಹಾಸನ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 48ನೇ ಘಟಿಕೋತ್ಸವವನ್ನು ಏ.20 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಲಾಗಿದೆ. ಘಟಿಕೋತ್ಸವದಲ್ಲಿ 566 ಸ್ನಾತಕ ಪದವಿ, 222 ಸ್ನಾತಕೋತ್ತರ ಪದವಿ ಹಾಗೂ 59 ಡಾಕ್ಟರೇಟ್ ಪದವಿಗಳು ಸೇರಿದಂತೆ ಒಟ್ಟು 847 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಸಮಾರಂಭದಲ್ಲಿ ವಿಶ್ವವಿದ್ಯಾಲಯ ವತಿಯಿಂದ 41 ಚಿನ್ನದ ಪದಕ ಹಾಗೂ ದಾನಿಗಳ ವತಿಯಿಂದ 88 ಚಿನ್ನದ ಪದಕಗಳು ಸೇರಿ, ಒಟ್ಟು 129 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ.ಕೆ. ನಾರಾಯಣಗೌಡ ತಿಳಿಸಿದ್ದಾರೆ. ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್ ಅಭ್ಯರ್ಥಿಗಳಿಗೆ ಪದವಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
27ರಂದು ಕ್ರೀಡಾಕೂಟ
ಹಾಸನ: ಜಿಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿದಾರರ ಸಂಘದ ಆಶ್ರಯದಲ್ಲಿ ಏ. 27ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಏ. 20ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ನಗರ ಸಭಾ ಸದಸ್ಯ ಎಂ.ಕೆ. ರಾಜೇಶ್ ಉದ್ಘಾಟಿಸಲಿದ್ದಾರೆ.
ಆಸ್ಪತ್ರೆಗೆ ಕಲ್ಲು ತೂರಿ ಗ್ರಾಮಸ್ಥರ ಪ್ರತಿಭಟನೆ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಭೀಕರ ಬಿರುಗಾಳಿ ಮಳೆಯಿಂದ ಸಿಡಿಲು ಬಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹೇಶ (14) ನನ್ನು ಚಿಕಿತ್ಸೆಗೆಂದು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ತಂದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದರಿಂದ ಆಕ್ರೋಶಕ್ಕೊಳಗಾದ ಗ್ರಾಮಸ್ಥರು ಆಸ್ಪತ್ರೆಗೆ ಕಲ್ಲು ತೂರಿ ಆಸ್ಪತ್ರೆಯ ಮುಂಭಾಗ ಶವವಿಟ್ಟು ಧರಣಿ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ಕಣಕಟ್ಟೆ ಗ್ರಾಮದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವಸತಿ ಗೃಹಗಳು ದುರಸ್ತಿಯಾಗಿ ಸುಸ್ಥಿತಿಯಲ್ಲಿದ್ದರೂ ವೈದ್ಯರು ವಾಸ್ತವ್ಯ ಹೂಡದೆ ನಗರ ಪ್ರದೇಶದಿಂದ ಓಡಾಡುತ್ತಿದ್ದು ಇಂತಹ ಅನೇಕ ಅವಘಡಗಳು ಸಂಭವಿಸುತ್ತಿವೆ. ಇದಕ್ಕೆ ತಾಲ್ಲೂಕಿನ ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತಾಪಂ ಸದಸ್ಯ ಪುಟ್ಟನಕಟ್ಟೆ ದಿನೇಶ್ ದೂರಿದರು.
ಆಕ್ರೋಶ: ಈ ಅವಘಡ ಸಂಭವಿಸಿದಾಗ 108ರ ವಾಹನಕ್ಕೆ ದೂರವಾಣಿ ಮಾಡಲಾಗಿತ್ತು. ಘಟನೆ ಸಂಭವಿಸಿ ಅನೇಕ ಗಂಟೆಗಳೇ ಕಳೆದರೂ ಸ್ಥಳಕ್ಕೆ ಧಾವಿಸದಿರುವುದು ಬಾಲಕನ ಸಾವಿಗೆ ಮತ್ತೊಂದು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಾದರೂ ಈ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕೆಂದು ಆಗ್ರಹಿಸಿದರು. ಶಾಸಕರ ಭೇಟಿ: ಸುದ್ದಿ ತಿಳಿದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಥಳಕ್ಕೆ ಧಾವಿಸಿ ಧರಣಿ ನಿರತರ ಮನಮೊಲಿಸಿ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ ಶವಪರೀಕ್ಷೆ ನಡೆಸಲಾಯಿತು. ಬಾಣಾವರ ಸಬ್ ಇನ್ಸ್ಪೆಕ್ಟರ್ ಬಾನು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದು ಪರಿಸ್ಥಿತಿ ನಿಭಾಯಿಸಿದರು.
ಮೇ 9ರಂದು ಉಪನಯನ ಕಾರ್ಯಕ್ರಮ
ಹಾಸನ: ನಗರದ ಕಾಳಿಕಾಂಬ ದೇವಾಲಯದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಅಂಗವಾಗಿ ಸಾಮೂಹಿಕ ಉಪನಯನ ಕಾರ್ಯಕ್ರಮ ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ಮೇ 9ರಂದು ನಡೆಯಲಿದೆ. ಆಸಕ್ತ ವಟುಗಳು ದೇವಾಲಯದ ಕಚೇರಿಗೆ ಮೇ 1ರೊಳಗೆ ತಮ್ಮ ಹೆಸರುಗಳನ್ನು ನೋಂದಾವಣೆ ಮಾಡಿಸಿಕೊಳ್ಳತಕ್ಕದ್ದು. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8453362518 ಅಥವಾ ದೂರವಾಣಿ ಸಂಖ್ಯೆ08172-233 357ಗೆ ಸಂಪರ್ಕಿಸಬಹುದಾಗಿದೆ.
ಅದ್ಧೂರಿಯಾಗಿ ನಡೆದ ಕರಿಯಮ್ಮ ದೇವಿ ರಥೋತ್ಸವ
ಜಾವಗಲ್: ಜಾವಗಲ್ನ ಗ್ರಾಮ ದೇವತೆ ಕರಿಯಮ್ಮ ದೇವಿಯ ದಿವ್ಯ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಿಂದ ನಡೆಯಿತು.
ಶುಕ್ರವಾರ ಮುಂಜಾನೆಯಿಂದಲೇ ಭಕ್ತರು ಮೂಲ ಗೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಿಗೆ ಮುಳ್ಳು ಹಾವಿಗೆ, ಬೇವಿನ ಉಡುಗೆ, ಸಿಡಿ, ಬಾಯಿಗೆ ಬೀಗ ಸೇರಿದಂತೆ ಭಕ್ತಾದಿಗಳು ನಾನಾ ರೀತಿಯ ಹರಕೆಗಳನ್ನು ಒಪ್ಪಿಸಿದರು. ಚಿಕ್ಕ ಮಕ್ಕಳ ತಲೆಯ ಮೇಲೆ ಕಳಸ ಹೊತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು.
ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ: ಸೋಮನ ಕುಣಿತ ಡೊಳ್ಳು ಕುಣಿತ, ಡೋಳು ಬಡಿತ, ಸಾನಿಕ್ ಕರಡೆ ವಾದ್ಯಗಳೊಂದಿಗೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ವಿಜೃಂಭಣೆಯಿಂದ ನಡೆಸಿದರು. ಮಧ್ಯಾಹ್ನ 3.30ಕ್ಕೆ ಪುಷ್ಪಾಲಂಕೃತ ರಥದಲ್ಲಿ ಕರಿಯಮ್ಮ, ಪ್ಲೇಗಿನಮ್ಮ, ದೊಡ್ಡಮ್ಮ ದೇವಿಯರನ್ನು ರಥದಲ್ಲಿ ಕುಳ್ಳರಿಸಿ ನೆರೆದಿದ್ದ ಸಹಸ್ರಾರು ಭಕ್ತರು ತೇರಿಗೆ ಬಾಲೇ ಹಣ್ಣು ಎಸೆದು ರಥ ಎಳೆದು ಪುನೀತರಾದರು. ಇದಕ್ಕೂ ಮುನ್ನಾ ಬಿಸಿಲಿನಲ್ಲಿ ಬಳಲಿದವರಿಗೆ ಪಾನಕ ಮಜ್ಜಿಗೆ ವಿತರಿಸುತ್ತಿದ್ದರು. ಜಾತ್ರೆಯ ಅಂಗವಾಗಿ ಅನ್ನ ದಾಸೋಹ ಸಮಿತಿಯವರು ಅನ್ನ ಸಂತರ್ಪಣೆ ಮಕ್ಕಳಿಗೆ ಬಿಸಿ ಹಾಲಿನ ವ್ಯವಸ್ಥೆ ಮಾಡಿದ್ದರು. ಬೆಸಿಗೆ ರಜಾ ಮತ್ತು ಪರೀಕ್ಷೆ ಮುಗಿದಿರುವುದರಿಂದ 10 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

