ಹಾಸನ

'ಇಡೀ ಮನುಕುಲಕ್ಕೆ ಸಲ್ಲುವ ಅಂಬೇಡ್ಕರ್ ಸಂದೇಶ'

Published On :

ಬೇಲೂರು: ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂದೇಶ ಇಡೀ ಮನುಕುಲಕ್ಕೆ ಒಳಪಡುತ್ತದೆ. ಆದರೆ ಇವರ ತತ್ವಗಳನ್ನು ಒಂದು ಸಮುದಾಯಕ್ಕೆ ಮೀಸಲು ಎಂದು ಹೇಳುವುದು ತಪ್ಪು. ಆದ್ದರಿಂದ ಜನರು ಸಂಕುಚಿತ ಮನೋಭಾವನೆ ಬಿಡಬೇಕು  ಎಂದು ಹೆಬ್ಬಾಳು ಗ್ರಾಮ ಪಂಚಾಯ್ತಿ ಸದಸ್ಯ ಗೋಪಾಲ್ ತಿಳಿಸಿದರು.
ತಾಲ್ಲೂಕಿನ ಹೆಬ್ಬಾಳು ಗ್ರಾಮ
ದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವದ ಮಹಾನ್ ಪುರುಷರು ಬೋಧಿಸಿದ ತತ್ವ ಹಾಗೂ ಚಿಂತನೆ ಇಂದು ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತ ವಾಗಿದೆ. ಅವರಲ್ಲಿ ಇದ್ದ ಆದರ್ಶದ ಗುಣಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಅಳಿಸಿ ಹಾಕಿವೆ ಎಂದು ವಿಷಾದಿಸಿದರು.
ಮನು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ತಾಂತ್ರಿಕತೆ ಹೆಚ್ಚಿದಂತೆ ಮೇಲು-ಕೀಳು ಭಾವನೆ ದಟ್ಟವಾಗಿದೆ. ಅದರಲ್ಲೂ ಶಿಕ್ಷಣ ವಂತರು ಜಾತೀಯತೆಯ ವಿಷ ಬೀಜವನ್ನು ಸಮಾಜದಲ್ಲಿ ಭಿತ್ತಿ ಸದೃಢ ಸಮಾಜಕ್ಕೆ ಮಾರಕ ಉಂಟು ಮಾಡುತ್ತಿದ್ದಾರೆ ಎಂದ ಅವರು ಕೇವಲ ನುಡಿ ಯಲ್ಲಿ ಮಾತ್ರ ರಾಜಕಾರಣಿಗಳು ಶುದ್ಧತೆ ಸಾಧನೆ ಮಾಡದೆ, ತಮ್ಮ ನೈಜ ಬದುಕಿನಲ್ಲಿ ಕೂಡ ಶುದ್ಧರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹೆಬ್ಬಾಳು ಸೊಸೈಟಿ ಗುಮಾಸ್ತರಾದ ಯೋಗೀಶ್, ವರ್ತಕ ನಾಗರಾಜು, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ಸುರೇಶ, ಮಾಳಿಶಂಕರ, ಶೇಖರ್ ಇತರರು ಇದ್ದರು.
ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು
ಸಕಲೇಶಪುರ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದ ಮರಡಿಕೆರೆ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರ ಆಶ್ವಾಸನೆಯಿಂದಾಗಿ ಪ್ರತಿಭಟನೆ ಹಿಂದೆ ಪಡೆದಿದ್ದಾರೆ.
ಖಾಲಿಕೊಡ ಪ್ರದರ್ಶನ: ಗ್ರಾಮದಲ್ಲಿ ಕುಡಿಯುವ ನೀರಿನ ಮೋಟರ್ ದುರಸ್ತಿಗೀಡಾಗಿರುವ ಪರಿಣಾಮ ಕಳೆದೊಂದು ತಿಂಗಳಿನಿಂದ ಗ್ರಾಮದ ಸುಮಾರು 50 ಕ್ಕೂ ಹೆಚ್ಚಿನ ಕುಟುಂಬಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ ಹಲವು ಬಾರಿ ಗ್ರಾ.ಪಂ ಅದಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ  ಪ್ರಯೋಜನವಾಗಿಲ್ಲ. ಆದ್ದರಿಂದ ಕುಡಿಯುವ ನೀರು ಒದಗಿಸುವ ಮೋಟರ್ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ನೂರಾರು ಗ್ರಾಮಸ್ಥರು ಖಾಲಿಕೊಡಗಳೊಂದಿಗೆ ಯಸಳೂರು ಗ್ರಾಮ ಪಂಚಾಯ್ತಿ ಕಚೇರಿಗೆ ತೆರಳಿದ್ದರು. ಈ ವಿಷಯ ತಿಳಿದ ಗ್ರಾಪಂ ಅಧ್ಯಕ್ಷ ದೇವೇಂದ್ರ ಅತಿ ಶೀಘ್ರವೇ ಕುಡಿಯುವ ನೀರಿನ ಮೋಟಾರ್ ದುರಸ್ತಿ ಪಡಿಸುವ ಭರವಸೆ ನೀಡಿ ಪ್ರತಿಭಟನೆ ಮಾಡದಂತೆ ಮನವೊಲಿಸಿದ ಪರಿಣಾಮ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮರಡಿಕೆರೆ ನಾಗೇಶ್,ಮರಡಿಕೆರೆ ಕುಮಾರ್ ಇತರರು ಇದ್ದರು.
ಜೈವಿಕ ತಂತ್ರಾಂಶಗಳ ಮಾಹಿತಿ ಕಾರ್ಯಾಗಾರ
ಹಾಸನ: ಪ್ರೋಟಿಯಾಮಿಕ್ಸ್, ಮ್ಯೂಟಿಶನ್, ಡ್ರಗ್ ಡಿಸೈನ್, ಜೀವ ತಂತ್ರಜ್ಞಾನದ ಪಾತ್ರ, ಮತ್ತು ವೈಜ್ಞಾನಿಕ ತಂತ್ರಾಂಶಗಳ ಕುರಿತ ಸಂಪೂರ್ಣ ಮಾಹಿತಿಯನ್ನು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಶಂಕರೇಗೌಡ ವಿದ್ಯಾರ್ಥ್ಥಿಗಳಿಗೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಯುಜಿಸಿ ಸಮಾನ ಅವಕಾಶ ಕೇಂದ್ರದ ಆಶ್ರಯದಲ್ಲಿ ವಿಜ್ಞಾನ ವೇದಿಕೆ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದಿಂದ ಆಯೋಜಿಸಿದ್ದ ಬಯೋ ಇನ್ಫೊಮೆಟಿಕ್ಸ್ ಮತ್ತು ತಂತ್ರಾಂಶಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಾಂಶಗಳ ಅರಿವು ಹೆಚ್ಚಾಗಿ ತಿಳಿಯುವಂತಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸಂಶೋಧನೆಗಳು ಹೆಚ್ಚಾಗಿ ನಡೆಯುವುದರಿಂದ ವಿದ್ಯಾರ್ಥಿಗಳು ಅವುಗಳಿಗೆ ಸ್ಪರ್ಧೆ ನೀಡಬೇಕೆಂದು ಕರೆ ನೀಡಿದರು.
ಕೇಂದ್ರದ ಸಹಾಯದಿಂದ ಅರಿವು: ಯುಜಿಸಿ ಸಮಾನ ಅವಕಾಶ ಕೇಂದ್ರದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಮಾತನಾಡಿ, ಯುಜಿಸಿ ಸಮಾನ ಅವಕಾಶ ಕೇಂದ್ರದ ಕಾರ್ಯ ವೈಖರಿಯಾಗಿದ್ದು, ಈ ಕೇಂದ್ರದ ಸಹಾಯದಿಂದ ವಿದ್ಯಾರ್ಥಿಗಳಿಗೆ ಇನ್ನಿತರ ತಂತ್ರಜ್ಞಾನದ ವಿಷಯಗಳ ಅರಿವನ್ನು ನೀಡಲಾಗುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ. ಲಕ್ಷ್ಮೀ ಸಿ.ಎಂ. ವಿದ್ಯಾರ್ಥಿಗಳಿಗೆ ಬಯೋ ಇನ್ಫೋಮೆಟಿಕ್ಸ್ ಕುರಿತು ಮಾಹಿತಿ ನೀಡುತ್ತಾ ಬಯೋ ಇನ್ಫೋಮೇಟಿಕ್ಸ್ ಎಂಬುದು ಜೀವವಿಜ್ಞಾನ ಮತ್ತು ತಂತ್ರಜ್ಞಾನ ಒಂದುಗೂಡಿ ಆದ ಮಂಚೂಣಿಯ ತಂತ್ರಜ್ಞಾನ ಎಂದರು. ಪ್ರೊ. ನಾರಾಯಣಪ್ಪ ಎಂ. ಸ್ವಾಗತಿಸಿದರು. ಕಾವ್ಯಶ್ರೀ ವಂದಿಸಿದರು. ಕಾಲೇಜಿನ ಡಾ. ತೋಯಜಾಷ, ಪ್ರೊ. ಜಯಪ್ರಕಾಶ್ ಇನ್ನಿತರರು ಇದ್ದರು.
ಆಧುನಿಕ ಯುಗದಲ್ಲಿ ವಿಷಸಮಾನ ಆಹಾರ
ಹಾಸನ: ತಂತ್ರಜ್ಞಾನದ ನಾಗಾಲೋಟದಲ್ಲಿ ಸಾಗುತ್ತಿರುವ ಮನುಜರು ಆಧುನಿಕ ಮತ್ತು ಕೃತಕ ಜೀವನ ಶೈಲಿಗೆ ಮೊರೆ ಹೋಗಿದ್ದಾರೆ. ಇದರ ಪರಿಣಾಮವಾಗಿ ಆಹಾರದ ಹೆಸರಲ್ಲಿ ವಿಷಸಮಾನ ಪದಾರ್ಥಗಳನ್ನು ದೇಹಕ್ಕೆ ಸೇರಿಸುತ್ತಿದ್ದೇವೆ ಎಂದು ಉಸ್ಮಾನಾಬಾದ್‌ನ ಖ್ಯಾತ ಆಯುರ್ವೇದ ತಜ್ಞ ಡಾ. ಚಾರು.ವಿ. ಸಾವ್ರೇಕರ್ ತಿಳಿಸಿದರು.
ನಗರದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದ ಅಗದ ತಂತ್ರ ಸ್ನಾತಕೋತ್ತರ ವಿಭಾಗದಿಂದ ಏ. 19, 20ರಂದು ಆಯೋಜಿಸಲಾಗಿರುವ ಅಮೃತಕಲಾ-2014 ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ, ಅದರ ಸ್ಮರಣಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕತ, ಸಿ.ಎಸ್‌ಐ.ಆರ್‌ನ ಖ್ಯಾತ ವಿಜ್ಞಾನಿ ಡಾ. ವಿ. ಪ್ರಕಾಶ್ ಅತಿಥಿ ಉಪನ್ಯಾಕರಾಗಿ ಭಾಗವಹಿಸಿದ್ದರು. ಪುಣೆಯ ಡಾ. ವಿ. ಪಿ ಜೋಗಳಕರ್, ಕೇರಳದ ಪರಿಶಿನಕಡವಿನಿಂದ ಡಾ.ಸಿ.ಎಂ.ಶ್ರೀಕೃಷ್ಣನ್ ಹಾಗೂ ಬೆಳಗಾವಿಯ ಡಾ. ಮಹೇಶ್ ವಿ. ಎಸ್, ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಇದ್ದರು. ಪುಷ್ಯಾಂಬುಜ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಎಲ್ ಹೆಗಡೆ ಸ್ವಾಗತಿಸಿದರು. ಉಡುಪಿಯ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎನ್. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಗದ ತಂತ್ರ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಭರಾಟೆ ವಂದಿಸಿದರು. ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಡೆಹರಾಡೂನ್ ಮತ್ತು ಕರ್ನಾಟಕದ ಒಟ್ಟು 138 ಆಯುರ್ವೇದ ಯುವ ವೈದ್ಯರು- ಪ್ರಾಧ್ಯಾಪಕರು- ತಜ್ಞವೈದ್ಯರು ಚರ್ಚೆ,  ಪ್ರಬಂಧ ಮಂಡನೆ, ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಿದರು. 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.