ಹಾಸನ

ಏಕರೂಪ ಶಿಕ್ಷಣಕ್ಕೆ ಸರ್ಕಾರ ಚಿಂತನೆ ಮಾಡಬೇಕಿದೆ

Published On :

ಕ.ಪ್ರ.ವಾರ್ತೆ ,  ಹಾಸನ ,  ಫೆ. 5
ಇಂದಿನ ಶಿಕ್ಷಣವು ಮಕ್ಕಳ ಸಣ್ಣ ವಯಸ್ಸಿನಲ್ಲಿ ಶ್ರೀಮಂತ ಬಡವ ಎಂಬ ಭೇದವನ್ನು ಸೃಷ್ಟಿ ಮಾಡುತ್ತಿದೆ, ಈ ದಿಸೆಯಲ್ಲಿ ಶಿಕ್ಷಣ ದೇಶದಲ್ಲಿ ಏಕರೂಪ ಶಿಕ್ಷಣಕ್ಕೆ ಸರ್ಕಾರಗಳು ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಬೇಕು ಎಂದು ಹಳೇಬೀಡು ಸಮೀಪದ ಶ್ರೀಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾರನಹಳ್ಳಿ ಗಡಿಯಲ್ಲಿ ಇರುವ ಉಗನೆ- ದೇವಗೋಡನಹಳ್ಳಿ ಶ್ರೀಬಸವೇಶ್ವರ ಗ್ರಾಮಾಂತರ ಫ್ರೌಢಶಾಲೆಯ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಇನ್ನಿತರ ಯೋಜನೆಯಲ್ಲಿ ಕೋಟಿ ರು. ವೆಚ್ಚ ಮಾಡುತ್ತಿದೆ.
ಆದರೆ, ಮಕ್ಕಳ ಮನೋವಿಕಾಸಕ್ಕೆ ಅನುವು ಮಾಡುವ ಹಾಗೂ ಅವರ ಸಾಮಾನ್ಯ ಜ್ಞಾನಕ್ಕೆ ಅವಕಾಶ ಮಾಡುವ ಯಾವ ವ್ಯವಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಇಲ್ಲ ಎಂದ ಅವರು ಶಿಕ್ಷಣ ವ್ಯಕ್ತಿಯ ವಿಕಾಸನದ ಜೊತೆಯಲ್ಲಿ ವ್ಯಕ್ತಿಯ ಬದುಕಿಗೆ ದಾರಿದೀಪವಾಗಬೇಕು ಎಂದು ಅಭಿಪ್ರಾಯಪಟ್ಟರು.
ನೈತಿಕತೆ ಇಲ್ಲ: ಇಂದಿನ ಸಮಾಜ ನಡೆ- ನುಡಿಯಲ್ಲಿ ಶುದ್ಧತೆ ಇಲ್ಲದ ಪರಿಣಾಮ ಜೀವನ ಕೂಡ ಡಾಂಬಿಕತೆಯಲ್ಲಿ ಇದೆ. ಕೆಲ ಕನ್ನಡ ಪರವಾದ ಹೇಳಿಕೆ ನೀಡುವ ವ್ಯಕ್ತಿಗಳ ಮಕ್ಕಳ ವಿದೇಶದಲ್ಲಿ ಹಾಗೂ ಇಂಗ್ಲೀಷ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಿಜವಾಗಿ ಇವರಿಗೆ ಕನ್ನಡ ಭಾಷೆಯ ಮೇಲೆ ಅಧಿಕಾರ ಚಲಾಯಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತಿಳಿಸಿದರು.
ಕಡಿವಾಣ ಹಾಕಬೇಕು: ಕೆಲ ಪೋಷಕರ ಮತ್ತು ಶಿಕ್ಷಕರು ಮುಗ್ದ ಮಕ್ಕಳ ಎದುರಿನಲ್ಲಿ ತಮ್ಮ ಕೆಟ್ಟ ಅಭ್ಯಾಸಗಳನ್ನು ಮಾಡುತ್ತಾ ಅವರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇಂದು ದೃಶ್ಯ ಮಾಧ್ಯಮ ಹಾಗೂ ಕಿರುತೆರೆಯಲ್ಲಿ ಮದ್ಯಪಾನ ಮತ್ತು ಬೀಡಿ ಸೇದುವ ದೃಶ್ಯಗಳನ್ನು ವೈಭವೀಕರಿಸುವ ಅಗತ್ಯವಿಲ್ಲ. ಇವರು ಯಾವ ಸದೃಢ ಸಮಾಜಕ್ಕೆ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಎಂದ ಅವರು ಸರ್ಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಕಡಿವಾಣ ಹಾಕಬೇಕು ಎಂದರು.
ಗಡಿ ರೇಖೆಯಿಲ್ಲ: ಶಾಸಕ ಎಚ್.ಎಸ್. ಪ್ರಕಾಶ ಮಾತನಾಡಿ, ಪ್ರಸ್ತುತ ಕನ್ನಡ ಮತ್ತು ಇಂಗ್ಲೀಷ್ ನಡುವಿನ ಹೋರಾಟ ತೀವ್ರವಾಗಿದೆ. ಆದರೆ, ಕನ್ನಡ ಭಾಷೆಯ ಬಗ್ಗೆ ಭಾಷಣ ಮಾಡುವ ವಾಟಾಳ್ ನಾಗರಾಜ್ ಮತ್ತು ಮುಖ್ಯಮಂತ್ರಿ ಚಂದ್ರು ಇವರ ಮಕ್ಕಳು ಎಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಜನತೆಗೆ ಉತ್ತರ ನೀಡಲಿ. ಭಾಷೆಗೆ ಗಡಿ ರೇಖೆ ಅಗತ್ಯವಿಲ್ಲ. ವ್ಯಕ್ತಿ ಯಾವುದೇ ಭಾಷೆಯಲ್ಲಿ ವ್ಯಾಸಂಗ ಮಾಡುವ ಅವಕಾಶವಿದೆ ಎಂದರು.
ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್, ಶಿವಗಂಗ ಗ್ರಾನೈಟ್ ಮಾಲೀಕ ರಾಜಶೇಖರ್, ಹಾಸನ ಯುನೈಟೆಡ್ ಅಕಾಡೆಮಿ ಅದ್ಯಕ್ಷ ಸಿ.ಎಂ.ಚಂದ್ರಶೇಖರ್, ಮೂಳೇನಹಳ್ಳಿ ರೇವಣ್ಣಯ್ಯ, ಎಸ್.ಆರ್. ಹಾಲಪ್ಪ ಸಾಣೇನಹಳ್ಳಿ, ರುದ್ರಪ್ಪ,  ಅನುಗನಾಳು ಕೃಷ್ಣಮೂರ್ತಿ ಇನ್ನೂ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕ ಬಸವರಾಜು, ನಿರೂಪಣೆಯನ್ನು ಪತ್ರಕರ್ತ ಹೆಬ್ಬಾಳು ಹಾಲಪ್ಪ ನಡೆಸಿಕೊಟ್ಟರು. ದಾನಿ ಎಚ್.ಎಸ್. ರಾಜಶೇಖರ್, ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ಹಾಲಪ್ಪ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.