ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ
ಹೊಳೆನರಸೀಪುರ: ರಾಜ್ಯದಲ್ಲಿನ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಎಬಿವಿಪಿ ಸಂಘಟನೆ ಗುರುವಾರ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅತಿಥಿ ಉಪನ್ಯಾಸಕರು ತಿಂಗಳಿಗೆ ಕೇವಲ 8 ಸಾವಿರ ರು. ಗಳ ವೇತನಕ್ಕೆ ಅತಂತ್ರ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರೂ, ಇವರ ವೇತನವನ್ನೂ ವರ್ಷಕ್ಕೊಮ್ಮೆ, ಇಲ್ಲವೇ ಆರು ತಿಂಗಳಿಗೊಮ್ಮೆ ನೀಡುತ್ತಿರುವ ಸರ್ಕಾರದ ಧೋರಣೆಯಿಂದಾಗಿ ಅತಿಥಿ ಉಪನ್ಯಾಸಕರ ಪಾಡು ಕೇಳ ತೀರದಂತಾಗಿದೆ ಎಂದು ಎಬಿವಿಪಿ ಸಂಘಟನೆಯ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸರ್ಕಾರದ ಧೋರಣೆಗಳನ್ನು ಖಂಡಿಸಿದರು.
ಖಂಡನೆ: ರಾಜ್ಯದಲ್ಲಿನ ಎಲ್ಲಾ ಪದವಿ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ನೇಮಕವಾಗದೇ, ಅತಿಥಿ ಉಪನ್ಯಾಸಕರ ಮೂಲಕವೇ ಪಾಠ ಪ್ರವಚನಗಳು ನಡೆಯುತ್ತಿದ್ದರೂ ಅತಿಥಿ ಉಪನ್ಯಾಸಕರಿಗೆ ಸಮರ್ಪಕವಾದ ವೇತನವನ್ನು ನೀಡುವಲ್ಲಿ ತಾತ್ಸಾರ ನೀತಿ ಅನುಸರಿಸುತ್ತಿರುವ ಸರ್ಕಾರದ ನೀತಿಯನ್ನು ವಿದ್ಯಾರ್ಥಿಗಳು ಖಂಡಿಸಿದರು.
ಒತ್ತಾಯ: ಪದವಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಖಾಯಂ ಉಪನ್ಯಾಸಕರ ನೇಮಕಾತಿಯನ್ನು ಶೀಘ್ರವಾಗಿ ನಡೆಸಿ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮೂಲಭೂತ ಸೌಕರ್ಯಗಳಾದ ಕೊಠಡಿ, ಶೌಚಾಲಯ, ಕಂಪ್ಯೂಟರ ಲ್ಯಾಬ್, ಅಂತರ್ಜಾಲ ಸಂಪರ್ಕ, ಗ್ರಂಥಾಲಯ, ಕೌಶಲ್ಯ ವೃದ್ಧಿಯಂತಹ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಜಾರಿಗೆ ತರಬೇಕು ಎಂದು ಎಬಿವಿಪಿ ಸಂಘಟನೆಯು ಸರ್ಕಾರವನ್ನು ಒತ್ತಾಯಿಸಿತು.
ಘೋಷಣೆ: ಅತಿಥಿ ಉಪನ್ಯಾಸಕರ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿಬಂದು ಪಟ್ಟಣದ ಗಾಂಧಿವೃತ್ತ, ಸುಭಾಷ್ ವೃತ್ತದಲ್ಲಿ ಕೆಲಕಾಲ ಸರ್ಕಾರದ ಧೋರಣೆಗಳ ವಿರುದ್ಧ ಘೋಷನೆಗಳನ್ನು ಕೂಗಿದರು.
ನಂತರ ತಾಲೂಕು ಕಚೇರಿಗೆ ತೆರಳಿದ ಎಬಿವಿಪಿ ಬೆಂಬಲಿತ ಸಂಘಟನೆಯ ವಿದ್ಯಾರ್ಥಿಗಳು ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ಜಿಲ್ಲಾ ಸಂಚಾಲಕ ಅಮಿತ್, ತಾಲೂಕು ಪ್ರಮುಖ ಯೋಗಾನರಸಿಂಹ, ನಗರ ಕಾರ್ಯದರ್ಶಿ ಅಭಿಷೇಕ್ ಹಾಗೂ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

