ಕುಡಿವ ನೀರಿಗೆ ಆಗ್ರಹಿಸಿ 17ರಿಂದ ಅಹೋರಾತ್ರಿ ಧರಣಿ
ಅರಸೀಕೆರೆ: ಕುಡಿಯುವ ನೀರಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಫೆ. 17 ರಿಂದ ತಾಲೂಕು ಕಚೇರಿ ಮುಂಭಾಗ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು, ಬೇಡಿಕೆ ಈಡೇರದಿದ್ದರೆ ಫೆ. 21ರಿಂದ ಉಪವಾಸ ಸತ್ಯಾಗ್ರಹ ಫೆ. 22ರ ಶನಿವಾರ ಅರಸೀಕೆರೆ ಬಂದ್ಗೆ ಕರೆ ನೀಡಲಾಗುವುದೆಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಗ್ರಹ: ತಾಲ್ಲೂಕಿನೆಲ್ಲೆಡೆ ಕೆರೆ-ಕಟ್ಟೆಗಳು ಬರಿದಾಗಿ 1000ದಿಂದ 1200 ಅಡಿ ಕೊಳವೆ ಬಾವಿ ಕೊರೆದರೂ ನೀರು ಬಾರದೆ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನೀರಿಗಾಗಿ ಜನ- ಜಾನುವಾರುಗಳು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜನಪ್ರತಿನಿಧಿಗಳು ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತು ಯಾವುದಾದರೂ ನದಿ ಮೂಲದಿಂದ ಕೆರೆ ನೀರು ಹರಿಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಾಲ ಮನ್ನಾ ಮಾಡಿ: ಬರಗಾಲದಿಂದ ಆರ್ಥಿಕ ಸಂಕಷ್ಟದಲ್ಲಿರುವ ತಾಲ್ಲೂಕಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ತೇವಾಂಶ ಕೊರತೆಯಿಂದ 7 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸುಳಿ ಬಿದ್ದು ನಾಶವಾಗಿದ್ದು, ಪ್ರತಿ ತೆಂಗಿನ ಮರಕ್ಕೆ 15 ಸಾವಿರ ಪರಿಹಾರ ನೀಡಿ ಪುನಶ್ಚೇತನ ಕಾರ್ಯಕ್ಕೆ ಮುಂದಾಗಬೇಕು. ಜಾನುವಾರುಗಳಿಗೆ ಮೇವು ನೀರು ಒದಗಿಸಬೇಕು.
ಅಹೋರಾತ್ರಿ ಧರಣಿ: ರೈತರಿಗೆ 24 ಗಂಟೆ ವಿದ್ಯುತ್ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಲೋಡ್ಶೆಡ್ಡಿಂಗ್ ಮಾಡಬಾರದು. ಅನೇಕ ಕಡುಬಡವ ಕುಟುಂಬಗಳಿಗೆ ಪಡಿತರ ಚೀಟಿ ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದು ಅವರಿಗೆ ಕೂಡಲೇ ಪಡಿತರ ಚೀಟಿ ವಿತರಣೆಯಾಗಬೇಕು ಎಂದರು.
ತಾಲ್ಲೂಕಿನ ಬಹುತೇಕ ಕೆರೆಗಳು ಒತ್ತುವರಿ ಮಾಡಲಾಗಿದ್ದು ಕೆಲವೊಂದು ಕೆರೆಗಳನ್ನು ತಾಲೂಕು ಆಡಳಿತ ಪೊಲೀಸರ ಸಹಾಯದಿಂದ ತೆರವುಗೊಳಿಸಿದರೆ ಮತ್ತೆ ಕೆಲವು ಕೆರೆಗಳನ್ನು ರಾಜಕೀಯ ಪ್ರಭಾವದಿಂದ ಕೈಬಿಡಲಾಗಿದೆ. ಕೂಡಲೇ ಕೆರೆಗಳ ತೆರವಿಗೆ ಮುಂದಾಗಬೇಕು ಹಾಗೂ ಶೀಘ್ರವಾಗಿ ಕೆರೆ ಹೂಳೆತ್ತುವ ಕಾರ್ಯವನ್ನು ಬೇಗನೇ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ಫೆ. 20ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.
21ರಿಂದ ಉಪವಾಸ ಸತ್ಯಾಗ್ರಹ: ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸದಿದ್ದರೆ 21ರಿಂದ ಉಪವಾಸ ಸತ್ಯಾಗ್ರಹ 22ರಂದು ಅರಸೀಕೆರೆ ಬಂದ್ಗೆ ಕರೆ ನೀಡಲಾಗುವುದು. ನಂತರವೂ ಉಪವಾಸ ಸತ್ಯಾಗ್ರಹವನ್ನು ಬೇಡಿಕೆ ಈಡೇರುವವರೆಗೂ ಮುಂದುವರೆಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸುಕ್ಷೇತ್ರ ಕೋಡಿಮಠದ ಶಿವಾನಂದ ಶಿವಾಯೋಗಿ ರಾಜೇಂದ್ರ ಸ್ವಾಮೀಜಿ, ಮಾಡಾಳು ಕುಮಾರಾಶ್ರಮದ ತೋಂಟಾದಾರ್ಯ ಸ್ವಾಮೀಜಿ, ಮಾಡಾಳು ನಿರಂಜನ ಮಠದ ರುದ್ರಮುನಿ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ, ಹೊನವಳ್ಳಿ ಕರಿಸಿದ್ದೇಶ್ವರ ಮಠದ ಶಿವಾಚಾರ್ಯ ಶಿವಪ್ರಕಾಶ ಸ್ವಾಮೀಜಿ ಹಾಗೂ ವಿವಿಧ ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬೋರನಕೊಪ್ಪಲು ಶಿವಲಿಂಗಪ್ಪ, ಜವನಹಳ್ಳಿ ನಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ಗೀಜಿಹಳ್ಳಿ ಶಿವಪ್ರಸಾದ್, ಪಿ.ಬಿ. ನಾಗರಾಜ್, ರವೀಶ್ ಬಾಬು, ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

