'ವೈಜ್ಞಾನಿಕ ಮುನ್ನಡೆ ಸಾಧಿಸಿದ್ದರೂ ಶಾಂತಿ ಇಲ್ಲ'
ಅರಸೀಕೆರೆ: ವೈಜ್ಞಾನಿಕವಾಗಿ ಮನುಷ್ಯ ಏನೆಲ್ಲಾ ಕಂಡುಹಿಡಿದು ವಿಜ್ಞಾನದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದರೂ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ತಿಪಟೂರು ತಾಲ್ಲೂಕು ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಪರದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿವಿಧಾನಸೌಧದ ಸಮೀಪದಲ್ಲಿರುವ ಶ್ರೀ ಕೆಂಗಲ್ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ನಡೆದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯೆ, ಸಂಪತ್ತು, ಎಲ್ಲ ಇದ್ದರೂ ದೇವರ ಕೃಪೆ ಗುರುವಿನ ಆಶೀರ್ವಾದವಿಲ್ಲದೆ ಶಾಂತಿ ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದರು.
ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಶ್ರೇಷ್ಠ. ವಿದೇಶಿಯರು ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಇಲ್ಲಿನ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಭಾರತೀಯರು ವಿದೇಶಿ ಸಂಸ್ಕತಿಗೆ ಮಾರುಹೋಗಿ ದುಶ್ಚಟಗಳ ದಾಸರಾಗಿ ತಮ್ಮ ಬದುಕನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಸಂಶಯವಿಲ್ಲ: ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಿದ್ದು, ಇದು ಮಾನವನ ಅವನತಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎಂದರು. ಯಾರು ತಂದೆ-ತಾಯಿಗಳನ್ನು, ಗುರುಹಿರಿಯರನ್ನು ಪ್ರೀತಿ ಮತ್ತು ಭಕ್ತಿಯಿಂದ ನೋಡಿಕೊಳ್ಳುತ್ತಾರೋ ಅಂತಹವರು ಬದುಕಿನಲ್ಲಿ ನೆಮ್ಮದಿಯಾಗಿರಲು ಸಾಧ್ಯ ಎಂದು ಹೇಳಿದರು.
ವಿಷಾದ: ಕೋಡಿಮಠ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಡಿ. ಕುಮಾರ್ ಮಾತನಾಡಿ, 5 ಸಾವಿರ ವರ್ಷಗಳ ಇತಿಹಾಸವುಳ್ಳ ನಮ್ಮ ಧರ್ಮ ಸನಾತನವಾದದ್ದು, ಸಂಸ್ಕತಿ, ಏಕಾತ್ಮತೆ, ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಈ ರಾಷ್ಟ್ರ ವಸುದೈವ ಕುಟುಂಬವಿದ್ದಂತೆ. ಆದರೆ ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವವರ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ಪ್ರತಿಭಾ ಪ. ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಂ. ಜಯದೇವ್ ಮಾತನಾಡಿ, ನಾಡಿನ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆಪಾರ. ಮಠಮಾನ್ಯಗಳು ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸದಿದ್ದಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಅನಕ್ಷರಸ್ಥರ ನಾಡು ನಮ್ಮದಾಗುತ್ತಿತ್ತು.
ಸುತ್ತೂರು, ಸಿದ್ಧಗಂಗ, ಆದಿಚುಂಚನಗಿರಿ, ಕೆರಗೋಡಿ ರಂಗಾಪುರ ಮಠದ ಶ್ರೀಗಳು ಗ್ರಾಮ-ಗ್ರಾಮಗಳಲ್ಲಿ ಭಿಕ್ಷೆ ನೀಡಿ ಲಕ್ಷಾಂತರ ಮಕ್ಕಳಿಗೆ ಯಾವುದೇ ಜಾತಿಬೇಧವಿಲ್ಲದೆ ಅನ್ನದಾನ, ವಿದ್ಯಾದಾನ, ಜ್ಞಾನದಾಸೋಹದ ಮೂಲಕ ನಾಡಿನ ಜನರ ಸೇವೆಯಲ್ಲಿ ತೊಡಗುವ ಮೂಲಕ ಅಪಾರ ಸೇವೆ ಸಲ್ಲಿಸಿದೆ ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಪುರಸಭಾಧ್ಯಕ್ಷ ಮೋಹನ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಜಿ.ಟಿ. ಗಣೇಶ್, ಪುರಸಭಾ ಸದಸ್ಯೆ ಕ್ಷ್ಮಿಬಾಯಿಸ್ವಾಮಿ ನಾಯ್ಕ, ಕೆ.ಟಿ.ಪಿ.ನಾಗರಾಜ್, ಬಸಪ್ಪ ಜಿ. ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

