ಹೆಚ್ಚು ಕೀಟನಾಶಕ ಬಳಸಬೇಡಿ
ಹೊಳೆನರಸೀಪುರ: ಕೀಟನಾಶಕಗಳನ್ನು ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳಿಗೆ ಬಳಸುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮ ಜೀವಿಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹಾಸನದ ಕೃಷಿ ಕಾಲೇಜಿನ ಸಸ್ಯ ರೋಗ ತಜ್ಞ ಡಾ.ಎಂ.ಎಸ್.ನಾಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೃಷಿ ಇಲಾಖೆಯ ವತಿಯಿಂದ ಹಳ್ಳಿಮೈಸೂರು ಹೋಬಳಿಯ ಕೆರೆಗೋಡು ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ರೈತರಿಗೆ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಬೆಳೆಗೆ ರೋಗ ಅಥವಾ ಕೀಟ ಬಾಧೆ ಕಂಡುಬಂದಲ್ಲಿ ತಜ್ಞರು ಶಿಫಾರಸು ಮಾಡಿರುವ ಔಷಧಿಗಳಿಂದಲೇ ಉಪಚಾರ ಮಾಡಬೇಕಾಗಿ ತಿಳಿಸಿದರು.
ಕೀಟನಾಶಕ ಹೆಚ್ಚು ಬಳಸಬೇಡಿ: ಕೆಲವು ಸಂದರ್ಭದಲ್ಲಿ ರೈತರು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತಿದೆ. ಕೀಟನಾಶಕ ಬಳಕೆ ನಂತರ ಅವುಗಳ ಪೊಟ್ಟಣ ಮತ್ತು ಮುಚ್ಚಳವನ್ನು ಮಣ್ಣಿನಲ್ಲಿ ಗುಂಡಿ ಮಾಡಿ ಮುಚ್ಚಬೇಕು ಎಂದು ತಿಳಿಸಿದರು.
ಔಷದೋಪಚಾರ: ಮುಸುಕಿನ ಜೋಳ, ಆಲೂಗಡ್ಡೆ, ಶುಂಠಿ ಹಾಗೂ ಬತ್ತದ ಬೆಳೆಗಳಲ್ಲಿ ಬರುವಂತಹ ರೋಗ ಹಾಗೂ ಕೀಟ ಬಾಧೆಗಳಿಗೆ ಔಷದೋಪಚಾರಗಳ ಬಗ್ಗೆ ತಿಳಿಸಿದರಲ್ಲದೇ, ರೈತರು ತಂದಿದ್ದ ಪೀಡಿತ ಗಿಡಗಳಲ್ಲಿ ರೋಗ ಕೀಟ ಬಾಧೆಯನ್ನು ಗುರುತಿಸಿ ಅವುಗಳ ಉಪಚಾರ ಕ್ರಮಗಳನ್ನು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ. ಯು.ಹೆಚ್. ಭಾನುಪ್ರಕಾಶ್ ಮಾತನಾಡಿ, ಬೆಳೆಗಳಲ್ಲಿ ಪೋಷಕಾಂಶ ಕೊರತೆಯಿಂದ ಕಂಡುಬರುವ ಲಕ್ಷಣಗಳನ್ನು ರೈತರು ತಪ್ಪುಗ್ರಹಿಕೆ ಮಾಡಿ ಅದನ್ನು ರೋಗವೆಂದು ತಿಳಿದು ಔಷಧಿಗಳನ್ನು ಅವಶ್ಯಕತೆಗಿಂತ ಹೆಚ್ಚು ಬಳಸುತ್ತಿರುವುದು ಕಂಡು ಬಂದಿದೆ. ಆದುದರಿಂದ ಎಲ್ಲಾ ಬೆಳೆಗಳಿಗೆ ಸಾರಜನಕ ಯುಕ್ತ ರಸಗೊಬ್ಬರ ಕಡಿಮೆ ಮಾಡಿ ಪೊಟ್ಯಾಷ್ಯುಕ್ತ ರಸಗೊಬ್ಬರಗಳನ್ನು ಮತ್ತು ಲಘು ಪೋಷಕಾಂಶಗಳನ್ನು ಬಳಸಬೇಕೆಂದರು.
ಜಾಗರೂಕತೆ ಅಗತ್ಯ: ಕೆರೆಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಬೆಳೆಗಳಿಗೆ ಜಾಗರೂಕತೆಯಿಂದ ರೈತರು ಔಷಧಿಯನ್ನು ಸಿಂಪಡಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿ ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷರಾದ ಸೋಮಶೇಖರ್, ಪ್ರಗತಿ ಪರ ರೈತ ಮಾದೇಗೌಡ, ಕೃಷಿ ಅಧಿಕಾರಿ ಸೋಮಶೇಖರ್, ಗ್ರಾಮದ ರೈತರು, ಕೃಷಿ ಇಲಾಖೆ ಅನುವುಗಾರರು ಇದ್ದರು. ಪುಟ್ಟಸ್ವಾಮಿ ಸ್ವಾಗತಿಸಿದರು ಹಾಗೂ ಅಶೋಕ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

