ಹಾಸನ

ಅಕ್ರಮ ಮರಳು ಸಾಗಿಸುತ್ತಿದ್ದ 6 ಲಾರಿ, ಜೆಸಿಬಿ ವಶ

Published On :

ನಾಗಮಂಗಲ: ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಿಸುತ್ತಿದ್ದ 6 ಲಾರಿಗಳು ಹಾಗೂ ಒಂದು ಜೆಸಿಬಿ ಯಂತ್ರವನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕೆ.ಆರ್.ಪೇಟೆ ರಸ್ತೆಯ ಕೆಸುವಿನಕಟ್ಟೆ ಸಮೀಪದ ನಡೆದಿದೆ. ಖಚಿತ ಮಾಹಿತಿ ಅರಿತು ತಡರಾತ್ರಿ ವೇಳೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಕೆ.ಎನ್. ಹರೀಶ್ ನೇತೃತ್ವದ ಪೊಲೀಸರ ತಂಡ, ಮರಳು ತುಂಬುತ್ತಿದ್ದ ಜೆಸಿಬಿ ಯಂತ್ರ ಹಾಗೂ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಶಪಡಿಸಿಕೊಂಡ ಎಲ್ಲ ಲಾರಿಗಳಲ್ಲಿ ತುಂಬಿದ್ದ ಮರಳನ್ನು ಖಾಲಿ ಮಾಡಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮ ಮರಳು ಲಾರಿಗಳು ಮತ್ತು ಜೆಸಿಬಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ
ಮಂಡ್ಯ: ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಶೌಚಾಲಯದ ಮಹತ್ವ  ಕುರಿತು ಬೀದಿ ನಾಟಕದ ಮೂಲಕ ಜನರಲ್ಲಿ  ಜಾಗೃತಿ ಮೂಡಿಸಲಾಯಿತು. ವಾರ್ತಾ ಇಲಾಖೆ, ಕೊತ್ತತ್ತಿ ಗ್ರಾಮ ಪಂಚಾಯ್ತಿ, ಸರ್ಮಣ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಜಿ. ಶ್ರೀನಿವಾಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಶೌಚಾಲಯದ ಮಹತ್ವದ ಬಗ್ಗೆ ತಿಳಿದುಕೊಂಡು ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಂಡು ಗ್ರಾಮದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಶೌಚಾಲಯ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗದವರಿಗೆ ಸರ್ಕಾರ 10,100 ರು., ಪರಿಶಿಷ್ಟ ಜಾತಿಯವರಿಗೆ 15 ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದನ್ನು ಪಡೆದು ಶೌಚಾಲಯ ನಿರ್ಮಿಸಿ ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ನಂತರ ಶೌಚಾಲಯದ ಬಗ್ಗೆ ಹಾಡುಗಳು, ಬೀದಿ ನಾಟಕದ ಮೂಲಕ ಗ್ರಾಮೀಣ ಜನರಿಗೆ ಅರಿವು ಮೂಡಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಕಾರ್ಯದರ್ಶಿ ಡಿ.ಪುಟ್ಟಸ್ವಾಮಿ, ಸದಸ್ಯ ನಿಂಗು, ಮುಖ್ಯ ಶಿಕ್ಷಕಿ ಪ್ರೇಮಲತಾ, ಅಂಗನವಾಡಿ ಕಾರ್ಯಕರ್ತೆಯರಾದ ವಸಂತ, ಸುನಂದ, ಲತಾ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯರಹಳ್ಳಿ ಪುಟ್ಟಸ್ವಾಮಿ, ಕಲಾವಿದರಾದ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಹನಿಯಂಬಾಡಿ ಎನ್. ಶೇಖರ್, ಸಂತೆಕಸಲಗೆರೆ ಎಸ್.ಬಸವರಾಜು ಉಪಸ್ಥಿತರಿದ್ದರು.

ಕಂಪ್ಯೂಟರ್ ಕಳವು: ಅಂತರಜಿಲ್ಲಾ ಕಳ್ಳನ ಬಂಧನ
ನಾಗಮಂಗಲ:  ಕಂಪ್ಯೂಟರ್ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ಹಬ್ಬನಕುಪ್ಪೆ ಗ್ರಾಮದ ನಾಗೇಶ್ ಅಲಿಯಾಸ್ ನಾಗೇಶ್ ಗೌಡ ಬಂಧಿತ ಆರೋಪಿ. ಬಂಧಿತನಿಂದ 6.75 ಲಕ್ಷ ರು. ಮೌಲ್ಯದ ಕಂಪ್ಯೂಟರ್ ಮಾನೀಟರ್, ಸಿಪಿಯು ಹಾಗೂ ಪ್ರೊಜೆಕ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಕೆಲ ದಿನಗಳಿಂದ ಶ್ರೀರಂಗಪಟ್ಟಣ ತಾಲೂಕಿನ  ಮೊಗರಹಳ್ಳಿ (ಮಂಟಿ) ಗ್ರಾಮದಲ್ಲಿ ನೆಲೆಸಿಮೈಸೂರು ಜಿಲ್ಲೆಯ ಬಿಳಿಕೆರೆ, ಹುಣಸೂರು, ಮೈಸೂರು ದಕ್ಷಿಣ, ಮಂಡ್ಯ ಜಿಲ್ಲೆಯ ಮಳವಳ್ಳಿ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮೇಲುಕೋಟೆ, ಬಿಂಡಿಗನವಿಲೆ, ಶಿವಳ್ಳಿ, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಕಂಪ್ಯೂಟರ್ ಕೊಠಡಿಯ ಬೀಗ ಮುರಿದು ಕಂಪ್ಯೂಟರ್ ಹಾಗೂ ಬಿಡಿ ಭಾಗಗಳನ್ನು ಕಳ್ಳತನ ಮಾಡಿ, ಅವುಗಳನ್ನು ಮೈಸೂರು ನಗರದ ಹಲವೆಡೆ ಕಡಿಮೆ ದರದಲ್ಲಿ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಮನೆಯಲ್ಲಿದ್ದ ಬಂದೂಕು ಕಳವು
ಮಳವಳ್ಳಿ:  ಮನೆಯೊಂದರ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಮನೆಯಲ್ಲಿಟ್ಟಿದ್ದ ಬಂದೂಕನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತೇಶ್ವರನಹಳ್ಳಿ ಬಳಿಯ ಗೌಡಗೆರೆ ಕಾಲೊನಿಯಲ್ಲಿ ನಡೆದಿದೆ. ಗ್ರಾಮದ ರವೀಂದ್ರ ಎಂಬುವರ ತೋಟದ ಮನೆಗೆ ರಾತ್ರಿ ವೇಳೆ ಲಗ್ಗೆ ಹಾಕಿರುವ ದುಷ್ಕರ್ಮಿಗಳು ಮನೆಯ ಬೀಗಮುರಿದು ಒಳನುಗ್ಗಿ ಮನೆಯಲ್ಲಿದ್ದ ಬಂದೂಕನ್ನು ಮಾತ್ರ ಕದ್ದೊಯ್ದಿದ್ದಾರೆ. ಆದರೆ ಮನೆಯ ಬೀಗ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು ಬೇರೇನನ್ನೂ ಅಪಹರಿಸದೆ ಕೇವಲ ಬಂದೂಕನ್ನು ಅಪಹರಿಸಿದ್ದಾರೆ. ರವೀಂದ್ರ ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ಕಳ್ಳತನ ಯಾವಾಗ ಆಗಿದೆ ಎಂಬುದು ನಿಖರವಾಗಿ ಗೊತ್ತಿಲ್ಲ. ರವೀಂದ್ರ ಊರಿಗೆ ಬಂದು ಮನೆಯ ಬಳಿ ಹೋದಾಗ ಕಳ್ಳತನವಾಗಿರುವ ವಿಷಯ ತಿಳಿದು ಮಳವಳ್ಳಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಗ್ರಾಮಾಂತರ ಪೊಲೀಸರು ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.