ಫಲಾನುಭವಿ ಮೀನುಗಾರರಿಗೆ ಸೈಕಲ್, ಬುಟ್ಟಿ ವಿತರಣೆ
ಬೇಲೂರು: ಸರ್ಕಾರ ಮೀನುಗಾರರ ಅಭಿವೃದ್ದಿಗೆ ಹಲವಾರು ಯೋಜನೆ ರೂಪಿಸಿದ್ದು ಮೀನುಗಾರರು ಇದರ ಸದುಪಯೋಗ ಪಡೆದು ಅರ್ಥಿಕವಾಗಿ ಮುಂದೆ ಬರುವಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ಸುಭಾನ್ ತಿಳಿಸಿದರು. ಮೀನುಗಾರಿಕೆ ಇಲಾಖೆ ವತಿಯಿಂದ ಸ್ಥಳೀಯ ಮೀನುಗಾರರಿಗೆ ಸೈಕಲ್ ವಿತರಿಸಿ ಮಾತನಾಡಿ, ತಾಲೂಕು ಪಂಚಾಯ್ತಿಯಲ್ಲಿ ನಾನಾ ಯೋಜನೆಯಡಿ ಫಲಾನುಭವಿಗಳನ್ನು ಗುರುತುಪಡಿಸಿದ್ದು ಅದರಂತೆ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ಸೈಕಲ್ ಹಾಗು ಮೀನಿನ ಬುಟ್ಟಿ ವಿತರಿಸಲಾಗಿದೆ ಎಂದದರು.
ಭದ್ರತೆ ಒದಗಿಸಿ: ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಸರ್ಕಾರ ಮೀನುಗಾರಿಕೆ ನಡೆಸುವ ಪರಿಶಿಷ್ಟಜಾತಿ ಫಲನುಭವಿಗಳಿಗೆ ಭದ್ರತೆ ನೀಡಬೇಕು ಸ್ಥಳೀಯ ಜಲಾಶಯಗಳಾದ ಯಗಚಿ ಮತ್ತು ವಾಟೆಹೊಳೆ ಜಲಾಶಯಗಳಲ್ಲಿ ಸ್ಥಳಿಯ ಮೀನುಗಾರರಿಗೆ ಪ್ರಭಾವಿ ಮೀನುಗಾರರು ತೊಂದರೆ ನೀಡುತ್ತಿದ್ದು ಈ ಬಗ್ಗೆ ಇಲಾಖೆ ಗಮನಹರಿಸಬೇಕು ಎಂದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಮೃತ್ ಮಾತನಾಡಿ, ತಾಲೂಕಿನಲ್ಲಿ 2013-14ನೇ ಸಾಲಿನಲ್ಲಿ 10 ಮೀನುಗಾರರಿಗೆ ಸೈಕಲ್ ವಿತರಿಸುವ ಯೋಜನೆ ರೂಪಿಸಿ ಪ್ರತಿ ಮೀನುಗಾರರಿಗೆ 5 ಸಾವಿರ ರುಗಳಲ್ಲಿ ಸೈಕಲ್ ಮತ್ತು ಮೀನಿನ ಬುಟ್ಟಿ ನೀಡಿದ್ದೇವೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣೆ
ಸಕಲೇಶಪುರ: ಪಟ್ಟಣದ ರೋಟರಿ ಸಂಸ್ಥೆ, ಹಾಸನ ವಾಸನ್ ಐ ಕೇರ್ ಆಶ್ರಯದಲ್ಲಿ ತಾಲೂಕಿನ ಕುಂಬರಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುತ್ತಮುತ್ತಲಿನ ಶಾಲೆಗಳಾದ ನಡಹಳ್ಳಿ, ದೇಖಲ, ಕಲ್ಲಾರಳ್ಳಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಸೇರಿ ಒಟ್ಟು 300ಕ್ಕು ಹೆಚ್ಚು ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು. ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಪಿ. ಮಲ್ಲೇಶ್, ಸಮುದಾಯ ಸೇವಾ ನಿರ್ದೇಶಕ ಕೆ.ಬಿ. ಸುಬ್ರಹ್ಮಣ್ಯ, ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಸುಬ್ರಹ್ಮಣಂ ರೋಟರಿ ಸಂಸ್ಥೆ ಕಾರ್ಯದರ್ಶಿ ಡಾ. ಲೀಲಾವತಿ ಜನಾರ್ದನ್ ಮತ್ತು ಸಂಸ್ಥೆಯ ಇತರ ಸದಸ್ಯರು ಇದ್ದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಬಿಡಿಎ ನಿವೇಶನ: ಪರಿಶೀಲನೆ
ಹಾಸನ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತು ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಉಪಸಮಿತಿಯನ್ನು ರಚಿಸುವ ಬಗ್ಗೆ ಪ್ರಾಧಿಕಾರದ ಸಭೆ ತೀರ್ಮಾನಿಸಿದೆ. ವಿಧಾನ ಪರಿಷತ್ನಲ್ಲಿ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ರಚನೆಗೊಳ್ಳಲಿರುವ ಉಪಸಮಿತಿಯ ವರದಿಯಂತೆ ಖಾಲಿ ಇರುವ ಬಿಡಿ ನಿವೇಶನಗಳನ್ನು ಗುರುತಿಸಿಕೊಂಡ ನಂತರ ಅರ್ಹ ಸ್ವಾತಂತ್ರ್ಯ ಹೋರಾಟಗಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು. ರಾಜ್ಯದಲ್ಲಿ ಒಟ್ಟು 1,10,699 ಬಿಸಿಯೂಟ ಅಡುಗೆ ಸಿಬ್ಬಂದಿಯವರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಮಾಹೆಯಾನ ಮುಖ್ಯ ಅಡುಗೆಯವರಿಗೆ 1600 ರು. ನೀಡಲಾಗುತ್ತಿದೆ. ಗೌರವ ಸಂಭಾವನೆಯಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಸೇವಾ ನಿಯಮಾವಳಿಗಳು ಅನ್ವಯಿಸುವುದಿಲ್ಲವೆಂದು ಪಟೇಲ್ ಶಿವರಾಂ ಕೇಳಿದ ಪ್ರಶ್ನೆಯೊಂದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ಉತ್ತರಿಸಿದರು.
ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ಆ.11 ರಿಂದ
ಅರಸೀಕೆರೆ: ಪಟ್ಟಣದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಆ. 11,12,13, ರಂದು ಶ್ರೀಗುರು ರಾಘವೇಂದ್ರ ಸಾರ್ವಭೌಮರ 343 ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿರುವುದಾಗಿ ಕೊಂಡಿರುವುದಾಗಿ ರಾಘವೇಂದ್ರ ಮಠದ ವ್ಯವಸ್ಥಾಪಕ ಜಿ.ವಿ. ಗುರುರುರಾಜ್ ತಿಳಿಸಿದ್ದಾರೆ. ಮೂರು ದಿನಗಳೂ, ಬೆಳಗ್ಗೆ ಉಷಾ ಪೂಜೆ,108 ಲೀ.ಹಾಲು ಮತ್ತು ಪಂಚಾಮೃತ ಅಭಿಷೇಕ, ಭಕ್ತರ ಮೂಲಕ ರಾಯರ ಪಾದಪೂಜೆ, ಅರ್ಚನೆ, ಅಲಂಕಾರ ಪೂಜೆ ಮಂಗಳಾರತಿ, ನಡೆಯಲಿದೆ ಎಂದು ಪತ್ರಿಕೆಗೆ ತಿಳಿಸಿದರು. ಆ.11ರಂದು ಸಂಜೆ6-8 ರವರೆಗೆ ಮಂಗಳಾಮೂರ್ತಿ ಮತ್ತು ಗಾಯತ್ರಿ ವಿಶ್ವನಾಥ್ ಇವರುಗಳಿಂದ ಸಂಗೀತ ಕಾರ್ಯಕ್ರಮವಿರುತ್ತದೆ, ಆ12 ರಂದು ಸಂಜೆ 6 -8ರವರೆಗೆ ಧಾರವಾಡದ ವಿದ್ವಾನ್ ಹರ್ಷ ಮತ್ತು ತಂಡದವರಿಮದ ದಾಸರಪದಗಳ ಕಾರ್ಯಕ್ರಮವಿದೆ. ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ಮಹಾ ಮಂಗಳಾರತಿ,ಪ್ರಸಾದ ವಿಯೋಗವಿದೆ ಎಂದು ಅವರು ತಿಳಿಸಿದರು.
ಹುಲಿ ಸಂರಕ್ಷಣೆಗಾಗಿ ಸಹಿ ಸಂಗ್ರಹಣೆ ಚಳವಳಿ
ಹಾಸನ: ವಿಶ್ವ ಹುಲಿ ದಿನದ ಅಂಗವಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ಹುಲಿ ಸಂರಕ್ಷಣೆಗಾಗಿ ರೋಟರಿ ಕ್ವಾಂಟ ಸಂಸ್ಥೆ ವತಿಯಿಂದ ಮಂಗಳವಾರ ಸಹಿ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಟರಿ ಕ್ವಾಂಟ ಸಂಸ್ಥೆ ಅಧ್ಯಕ್ಷ ರವಿ ಕುಮಾರ್ ಸಹಿ ಸಂಗ್ರಹಣೆ ಮಾಡುವ ಮೂಲಕ ಜನರಿಗೆ ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ದೇಶದಲ್ಲಿ ಹುಲಿಗಳ ಸಂತತಿ ಕ್ಷೀಣಿಸುತ್ತಿದ್ದು, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕಾದ ಜವಬ್ದಾರಿ ನಮ್ಮೇಲ್ಲರ ಮೇಲಿದೆ. ಹುಲಿ ಸಂರಕ್ಷಣೆಯ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಿ ಸಂಗ್ರಹಿಸಿದ ಬ್ಯಾನರ್ಗಳನ್ನು ಬೆಂಗಳೂರಿನ ಡಬ್ಲ್ಯೂಡಬ್ಲ್ಯೂಎಫ್ ಸಂಸ್ಥೆಗೆ ಕಳುಹಿಸಿಕೊಡಲಾಯಿತು. ರೋಟರಿ ಕ್ವಾಂಟ ಸಂಸ್ಥೆಯ ಶಿವಶಂಕರ್ ಹಾಗೂ ಇತರರು ಇದ್ದರು.
ರಾಜ್ಯಮಟ್ಟಕ್ಕೆ ಕೋಡಿಹಳ್ಳಿ ವಿದ್ಯಾರ್ಥಿಗಳು
ಅರಸೀಕೆರೆ: ತಾಲೂಕಿನ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ ಗಾಳಿ ಬಂದ ಕಡೆ ಮುಖ ಮಾಡುವ ಕಿಟಕಿ ಮತ್ತು ಬಿಸಿಲಿಗೆ ತೆರೆದುಕೊಳ್ಳುವ ನೆರಳಿಗೆ ಮುಚ್ಚಿಕೊಳ್ಳುವ ಮನೆಯ ಛಾವಣಿ ಉಪಕರಣ ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದೆ. ಇತ್ತೀಚಿಗೆ ಹಾಸನದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಸ್ಫೈರ್ ಅವಾರ್ಡ್ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕ ಆನಂದ್ ಮಾರ್ಗದರ್ಶನದಲ್ಲಿ 7ನೇ ತರಗತಿಯ ಕೆ.ಟಿ.ಅರ್ಚನಾ ಹಾಗೂ ದಿನೇಶ್ ಜೆ.ಕೆ. ಎಂಬ ವಿದ್ಯಾರ್ಥಿಗಳು ಈ ಮಾದರಿಗಳನ್ನು ತಯಾರಿಸಿ, ಪ್ರದರ್ಶಿಸಿದರು. ಇವುಗಳು ಅತ್ಯುತ್ತಮ ಪ್ರಶಸ್ತಿ ಗಳಿಸಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ.
ಹೈನುಗಾರಿಕೆಯಿಂದ ಆರ್ಥಿಕ ಸಲಬತೆ ಸಾಧಿಸಿ
ಹಾರನಹಳ್ಳಿ: ಇಲ್ಲಿನ ಜೇನುಶ್ರೀ ವಿವಿಧೋದ್ಧೇಶ ಸಹಕಾರ ಸಂಘದ 5ನೇ ವಾರ್ಷಿಕ ವಹಾ ಸಭೆಯ ಕಾರ್ಯಕ್ರಮವನ್ನು ಕೋಡಮ್ಮದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಗ್ರಾಮಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದಿಂದ ಸಾಲ ಪಡೆದು ಹೈನುಗಾರಿಕೆ ಮೂಲಕ ಅರ್ಥಿಕವಾಗಿ ಸಬಲರಾಗಬೇಕೇಂದು ತಿಳಿಸಿದರು.
ಸಾಲ ಮರುಪಾವತಿಸಿ: ತಾಪಂ ಮಾಜಿ ಅಧ್ಯಕ್ಷ ಹೆಚ್. ಟಿ. ಶಿವಮೂರ್ತಿ ಮಾತನಾಡಿ, ಸಂಘ ಬಲವಾಗಬೇಕಾದರೆ ಸದಸ್ಯರ ಸಹಕಾರ ಮುಖ್ಯ. ಸಾಲಪಡೆದ ಸದಸ್ಯರು ಸರಿಯಾಗಿ ಮರುಪಾವತಿ ಮಾಡಿ ಸಂಘದ ಲಾಭಂಶ ಪಡೆಯಬಹುದಾಗಿದೆಂದರು. ಜೇನುಶ್ರೀ ಸಹಕಾರ ಸಂಘದ ಅಧ್ಯಕ್ಷ ಹೆಚ್.ಬಿ. ರಾಜಣ್ಣ ಮಾತನಾಡಿ, 5ವರ್ಷದಲ್ಲಿ ನಮ್ಮ ಸಹಕಾರ ಸಂಘ 9,31,611 ಲಾಭ ಗಳಿಸಿದೆ ಎಂದರು. ಸಮಾರಂಭದಲ್ಲಿ ಜಗದೀಶ್, ಮೋಹನ್ ಕುಮಾರ್, ಶ್ರೀಧರಾಚಾರ್, ಮಲ್ಲಿಕಾರ್ಜುನಯ್ಯ, ದೇವರಾಜ್, ಅಶೋಕ ಕುಮಾರ್, ಸಿದ್ದಪ್ಪ. ಬನವಜ್ಜ, ಕಾರ್ಯದರ್ಶಿ ಪರಮೇಶ, ಈಶ್ವರಾಚಾರ್, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

