ಹಾಸನ

ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರು ಗರಂ

Published On :

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಜೂ 2
ಕುಸುಮಾಸಣ್ಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನ ನೀರಾವರಿ, ವಿದ್ಯುತ್ ಇಲಾಖೆ, ಸಿಡಿಪಿಒ, ಅಬಕಾರಿ ಮೊದಲಾದ ಇಲಾಖೆಗಳಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಭೆಗೆ ಹಾಜರಾಗದಿರುವ ಕುರಿತಂತೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತಲ್ಲದೇ, ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮತ್ತು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕುರಿತಂತೆಯೂ ದೂರುಗಳು ಸದಸ್ಯರಿಂದ ವ್ಯಕ್ತವಾಯಿತು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆಲ ಅಧಿಕಾರಿಗಳ ಕಾರ್ಯವೈಖರಿಯ ಕುರಿತಂತೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ತಮ್ಮ ಇಲಾಖೆಗಳ ವರದಿಯನ್ನು ಸಲ್ಲಿಸಿ ಅಧಿಕಾರಿಗಳು ಒಬ್ಬೊಬ್ಬರಾಗಿ ಸಭೆಯು ಮುಗಿಯುವ ಮೊದಲೇ ಸಭೆಯಿಂದ ಹೊರನಡೆದ ಬಗ್ಗೆ ಸದಸ್ಯರಾದ ಸಿ. ಆರ್. ಮಂಜುನಾಥ್, ಎನ್. ಆರ್. ಅನಂತಕುಮಾರ್, ಅಧಿಕಾರಿಗಳ ಈ ಧೋರಣೆ ಕುರಿತಂತೆ ಸಮರ್ಪಕ ಕ್ರಮ ಕೈಗೊಳ್ಳದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ಅವರ ವಿರುದ್ಧವೂ ಕಿಡಿಕಾರಿದ ಪ್ರಸಂಗ ನಡೆಯಿತು.
ದೇವಸ್ಥಾನಗಳಿಗಿಂತಲೂ ಮೊದಲೇ ಬೆಳಗಿನ ಜಾವಕ್ಕೆ ಗ್ರಾಮೀಣ ಭಾಗದಲ್ಲಿನ ಮದ್ಯದಂಗಡಿಗಳು ತೆರೆಯುತ್ತಿದ್ದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟಗಾರರೊಂದಿಗೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ಎನ್.ಆರ್.ಅನಂತಕುಮಾರ್ ಅಬಕಾರಿ ಇಲಾಖೆ ಅಧಿಕಾರಿ ವಿರುದ್ಧ ರೇಗಿದರಲ್ಲದೇ, ಹಂಗರಹಳ್ಳಿಯ ಮದ್ಯದಂಗಡಿಯವರು ತಮಗೆ ಯಾವುದೇ ತೊಂದರೆ ನೀಡದಂತೆ ನನಗೆ 2 ಲಕ್ಷ ರು.  ನೀಡಿರುವುದಾಗಿ ಸುಳ್ಳು ಪ್ರಚಾರ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಯನ್ನು ಒತ್ತಾಯಿಸಿದರು.
ಸದಸ್ಯ ನಂಜುಂಡಪ್ಪ, ತಾಲೂಕಿನಲಿನ ನಾನಾ ಹಾಸ್ಟೆಲ್‌ಗಳಲ್ಲಿ ಯಾವುದೇ ವಾರ್ಡನ್‌ಗಳೂ ಸ್ಥಳದಲ್ಲಿ ವಾಸವಿಲ್ಲದೇ, ಪಟ್ಟಣ ಹಾಗೂ ವಿವಿಧೆಡೆಗಳಿಂದ ಸಂಚರಿಸುತ್ತಿರುವ ಕಾರಣದಿಂದಾಗಿ ಹಾಸ್ಟೆಲ್‌ಗಳಲ್ಲಿ ಬಿಗಿ ಹಾಗೂ ಸುವ್ಯವಸ್ಥೆಯ ವಾತಾವರಣ ಇಲ್ಲದಂತಾಗಿದೆ ಎಂದು ದೂರಿದರು.
ದೊಡ್ಡಕಾಡನೂರು ತಾಪಂ ಕ್ಷೇತ್ರದ ಸದಸ್ಯೆ ಲತಾ, ವಿದ್ಯುತ್ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರಲ್ಲದೇ, ಕೇವಲ ವಿದ್ಯುತ್ ಇಲಾಖೆಯ ಅಧಿಕಾರಿಗಳ ಮುಖ ಬದಲಾಗುತ್ತಿದೆಯೇ ಹೊರತು, 3 ವರ್ಷದಿಂದ ಸತತವಾಗಿ ದೂರು ನೀಡಿದರೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ 20-30 ವರ್ಷಗಳಷ್ಟು ಹಳೆಯದಾದ ವಿದ್ಯುತ್ ಕಂಬಗಳು ಬದಲಾಗುತ್ತಿಲ್ಲ ಎಂದು ರೇಗಿದ ಘಟನೆ ನಡೆಯಿತು.

ತಾಲೂಕಿನಲ್ಲಿ ಬಿತ್ತನೆ ಬೀಜಗಳ ದಾಸ್ತಾನು ನಿಗದಿತ ಗುರಿಯಷ್ಟು ಲಭ್ಯವಿದ್ದು, ಈ ಬಾರಿ ಹೆಚ್ಚಿನದಾಗಿ ಮಕ್ಕೆಜೋಳದ ಬೀಜಗಳ ಖರೀದಿ ಹೆಚ್ಚಾಗಿದೆ ಎಂದರಲ್ಲದೇ, ತಾಲೂಕಿಗೆ ಅವಶ್ಯವಿರುವಷ್ಟು ರಸಗೊಬ್ಬರ ಲಭ್ಯತೆಯಲ್ಲಿದ್ದು, ಗೊಬ್ಬರ ಮಾರಾಟದಲ್ಲಿ ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
  ಡಾ.ಯು.ಎಚ್.ಭಾನುಪ್ರಕಾಶ್ ಸಹಾಯಕ ಕೃಷಿ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.