ಹಾಸನ

ಉದ್ಯಾವನಕ್ಕೆಂದು ಮೀಸಲಿಟ್ಟ ನಿವೇಶನವೀಗ ಕಸದ ತೊಟ್ಟಿ

Published On :

-ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಬಡಾವಣೆಗಳ ನಿರ್ಮಾಣದ ವೇಳೆ ಸರ್ಕಾರದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಹೇಳುವ ಸ್ಥಳೀಯ ಸಂಸ್ಥೆಗಳು, ಸರ್ಕಾರವೇ ನಿರ್ಮಿಸಿದ ಬಡಾವಣೆಗಳಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉದ್ಯಾನವನಕ್ಕೆಂದು ಬಿಡಲಾದ ನಿವೇಶನವನ್ನು ಮಾತ್ರ ಅಭಿವೃದ್ಧಿಗೊಳಿಸದೇ ಪಾಳು ಬಿಟ್ಟು ಯಾವುದೇ ಕಾಳಜಿ ವಹಿಸದ ಕಾರಣ ಬಡಾವಣೆಯ ಜನರಿಗೆ ಉದ್ಯಾನವನಗಳ ಲಭ್ಯತೆ ಮರೀಚಿಕೆಯಾಗಿದೆ.
ಪಟ್ಟಣದಲ್ಲಿನ ಹೌಸಿಂಗ್ ಬೋರ್ಡ್ ಬಡಾವಣೆ, ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆ ಮೊದಲಾದ ಸ್ಥಳಗಳಲ್ಲಿ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯು ಅಲ್ಲಲ್ಲಿ ಸಾರ್ವಜನಿಕ ಉಪಯುಕ್ತತೆಗಾಗಿ ಉದ್ಯಾನವನಕ್ಕೆಂದು ಬಿಡಲಾಗಿದ್ದ ನಿವೇಶನಗಳು ದಶಕಗಳೇ ಕಳೆದರೂ ಯಾವುದೇ ಅಭಿವೃದ್ಧಿ ಕಾಣದೆ ಪಾಳು ಬಿದ್ದಿವೆ. ಖಾಸಗಿ ಬಡಾವಣೆಗಳಿಗಾದರೆ ಕಡ್ಡಾಯವಾಗಿ ಉದ್ಯಾನವನ, ಶಾಲೆ, ದೇವಾಲಯ ಮೊದಲಾದ ಉದ್ದೇಶಕ್ಕಾಗಿ ಇಂತಿಷ್ಟು ಸ್ಥಳವನ್ನು ಬಿಡುವಂತೆ ಕಾನೂನು ವಿಧಿಸುವ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು, ಸರ್ಕಾರವೇ ರೂಪಿಸಿದ ಬಡಾವಣೆಗಳಲ್ಲಿನ ಉದ್ಯಾನವನಗಳನ್ನೇಕೆ ಅಭಿವೃದ್ಧಿಪಡಿಸುತ್ತಿಲ್ಲ ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಪಟ್ಟಣದಲ್ಲಿನ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನವನ್ನು ಮಾತ್ರ ಅಭಿವೃದ್ಧಿ ಪಡಿಸಿರುವ ಮತ್ತು ಇಂದಿಗೂ ಅಭಿವೃದ್ಧಿಪಡಿಸುತ್ತಲೇ ಇರುವ ಇಲ್ಲಿನ ಪುರಸಭೆಗೆ, ಈ ಉದ್ಯಾನವನಕ್ಕೆ ನೀಡಿದಷ್ಟೇ ಕಾಳಜಿ, ಇದರಲ್ಲಿ ಅರ್ಧದಷ್ಟು ಕಾಳಜಿಯನ್ನಾದರೂ ಬಡಾವಣೆಗಳಲ್ಲಿನ ಉದ್ಯಾನಗಳ ಅಭಿವೃದ್ಧಿಗೆ ನೀಡಿದ್ದರೆ, ಇಷ್ಟು ಹೊತ್ತಿಗಾಗಲೇ ಪಟ್ಟಣದ ಬಡಾವಣೆಗಳಲ್ಲಿನ ಉದ್ಯಾನಗಳು ಹಸಿರಿನಿಂದ, ಮಕ್ಕಳ ಆಟಿಕೆಗಳಿಂದ ತುಂಬಿ ನಳನಳಿಸುತ್ತಿದ್ದವು. ಆದರೆ, ಪುರಸಭೆಗೆ ಈ ಕುರಿತು ಎಳ್ಳಷ್ಟೂ ಕಾಳಜಿ ಇಲ್ಲದ ಕಾರಣದಿಂದಾಗಿ ಉದ್ಯಾನವನಕ್ಕೆಂದು ಮೀಸಲಿರಿಸಿದ ನಿವೇಶನಗಳು ಅಲ್ಲಲ್ಲಿ ಒತ್ತುವರಿಯ ಭೀತಿಯಲ್ಲಿ, ಅಲ್ಲಲ್ಲಿ ಪಾಳು ಬಿದ್ದ ಸ್ಥಳಗಳಾಗಿ ಮಾರ್ಪಾಟಾಗಿದೆ.
13ನೇ ಹಣಕಾಸು ಯೋಜನೆಯಡಿ ಪುರಸಭೆಯ ಒಟ್ಟು ಅನುದಾನದಲ್ಲಿ ಶೇ.10ರಷ್ಟನ್ನು ಉದ್ಯಾನವನಗಳ ಅಭಿವೃದ್ಧಿಗಾಗಿ ಪ್ರತಿ ವರ್ಷವೂ ಮೀಸಲಿರಿಸಲಾಗುತ್ತದೆ. ಆದರೆ, ರಾಜ್ಯ ಹಣಕಾಸು ಅನುದಾನದಲ್ಲಿ ಉದ್ಯಾನವನಗಳ ಅಭಿವೃದ್ಧಿಗಾಗಿ ಅನುದಾನ ನೀಡುವುದು ಕಡಿಮೆಯೇ. ಆದರೂ 13ನೇ ಹಣಕಾಸು ಯೋಜನೆಯಡಿಯಲ್ಲಿ ಲಭ್ಯವಾಗುವ ಅನುದಾನದಲ್ಲಿ ಪ್ರತೀ ವರ್ಷವೂ ಒಂದೊಂದು ಉದ್ಯಾನವನಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಂಡರೂ, ಪಟ್ಟಣದ ಬಡಾವಣೆಗಳಲ್ಲಿನ ಎಲ್ಲ ಉದ್ಯಾನಗಳನ್ನೂ ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಇಲ್ಲಿನ ಪುರಸಭೆಯು ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಉದ್ಯಾನವನದ ಸುತ್ತಲೂ ಕಬ್ಬಿಣದ ಬೇಲಿ ನಿರ್ಮಿಸುವ ಕಾಮಗಾರಿಯನ್ನು ಮಾಡಿ ಕೈತೊಳೆದು ಕೊಂಡಿರುವುದನ್ನು ಹೊರತುಪಡಿಸಿ ಇನ್ನಾವುದೇ ಅಭಿವೃದ್ಧಿ ಕಾಮಗಾರಿಗಳೂ ಆಗಿಲ್ಲ. ಅಲ್ಲದೇ ಇಲ್ಲಿನ ಕಾರಂಜಿಕಟ್ಟೆಯ ಬಳಿಯಲ್ಲಿ ಉದ್ಯಾನವನಕ್ಕಾಗಿ ಬಿಟ್ಟಿರುವ ಖಾಲಿ ನಿವೇಶನವು ಇಂದು ಕಸದ ರಾಶಿ ಹಾಗೂ ಮಣ್ಣಿನ ರಾಶಿಯಿಂದ ತುಂಬಿದೆ. ಇದು ಮುಂದೊಂದು ದಿನ ಬಲಾಢ್ಯ ಜನಪ್ರತಿನಿಧಿಗಳ ಕೈವಶವಾದರೂ ಅಚ್ಚರಿಯಿಲ್ಲ. ಲಭ್ಯವಿರುವ ಅನುದಾನದಲ್ಲಿಯೇ ಪುರಸಭೆಯು ವರ್ಷಕ್ಕೊಂದು ಉದ್ಯಾನವನದ ಅಭಿವೃದ್ಧಿಗೆ ಮುಂದಾದರೂ ಪಟ್ಟಣದ ಸೌಂದರ್ಯಕ್ಕೆ ಮೆರುಗು ನೀಡಬಲ್ಲ ಉದ್ಯಾನವನಗಳ ಅಭಿವೃದ್ಧಿ ಸಾಧ್ಯವಿದೆ, ಆದರೆ, ಈ ನಿಟ್ಟಿನಲ್ಲಿ ಇಲ್ಲಿನ ಪುರಸಭೆಯ ಆಡಳಿತ ಹಾಗೂ ಜನಪ್ರತಿನಿಧಿಗಳು ಪ್ರಜ್ಞಾಪೂರ್ವಕವಾಗಿ ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.