ಹಾಸನ

ಗ್ರಾಮಸ್ಥರ ಮೇಲಿರುವ ಕೇಸ್ ಹಿಂಪಡೆಯಲು ಆಗ್ರಹ

Published On :

ಹಾಸನ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇಲೂರು ತಾಲೂಕಿನ ಕಸಬಾ ಹೋಬಳಿ ಮುದಿಗೆರೆಗೆ ಮೂಲ ಸೌಕರ್ಯ ನೀಡಲು ಆಗ್ರಹಿಸಿ ಚುನಾವಣೆ ಬಹಿಷ್ಕಾರ ಮಾಡಿದ ಹಿನ್ನೆಲೆಯಲ್ಲಿ ಕೆಲ ಗ್ರಾಮಸ್ಥರ ಮೇಲೆ ನೀತಿ ಸಂಹಿತೆ ಕೇಸು ದಾಖಲಿಸಲಾಗಿದ್ದು, ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ನೀಡಿದರು.
ಬೇಲೂರು ತಾಲೂಕಿನ ಮುದಿಗೆರೆ ಗ್ರಾಮ ಹಲವು ವರ್ಷಗಳಿಂದ ರಸ್ತೆ ಡಾಂಬರಿಕರಣ ಕಂಡಿಲ್ಲ. ಕುಡಿಯುವ ನೀರಿಗೆ ಹಾಹಾಕಾರ, ನೂರು ಎಕರೆಯಲ್ಲಿ ಇರುವ ದೊಡ್ಡ ಕೆರೆ ದುರಸ್ತಿ ಮಾಡದೆ ನೀರು ಬತ್ತಿ ಹೋಗಿದೆ ಹಾಗೂ ಗ್ರಾಮದಲ್ಲಿ ಶೌಚಾಲಯವಿಲ್ಲ. ಮಿನಿ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಬಳಲಿದ್ದಾರೆ. ಅದಕ್ಕಾಗಿ ಗ್ರಾಮಕ್ಕೆ ಮೂಲ ಸೌಕರ್ಯ ನೀಡುವಂತೆ ಲೋಕಸಭಾ ಚುನಾವಣೆಯನ್ನು ಗ್ರಾಮಸ್ಥರು ಎಲ್ಲಾ ಸೇರಿ ಬಹಿಷ್ಕಾರ ಮಾಡಲಾಗಿತ್ತು.
ಚುನಾವಣೆ ನೀತಿ ಸಂಹಿತೆ ಅಧಿಕಾರಿಗಳು ಹಾಗೂ ಆರಕ್ಷಕ ಉಪ ನಿರೀಕ್ಷಕರು ಸೇರಿ ಗ್ರಾಮ ಮುಖಂಡರ ಮೇಲೆ ಕೇಸು ದಾಖಲಿಸಿದ್ದಾರೆ. ಚುನಾವಣೆ ನಡೆಯುವ ದಿನಾಂಕದಂದು ಜಿಲ್ಲಾಧಿಕಾರಿಯವರು ಗ್ರಾಮಕ್ಕೆ ಬಂದು ಚರ್ಚಿಸಿ ಎಲ್ಲಾ ಕೇಸುಗಳನ್ನು ವಜಾಗೊಳಿಸಿ ನಿಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ಮನವರಿಕೆ ಮಾಡಿದಂತೆ ನಾವುಗಳು ಮತ ಚುಲಾಯಿಸಿದ್ದೇವೆ. ಆದರೆ ಈವರೆಗೂ ಯಾವ ಕೇಸುಗಳು ವಜಾ ಮಾಡಿಲ್ಲ. ಇನ್ನು ಕೇಸುಗಳು ಚಾಲ್ತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುವ ರಾಜಕಾರಣಿಗಳು ಉಳಿದ ವೇಳೆ ಈ ಭಾಗಕ್ಕೆ ಯಾರು ತಿರುಗಿ ನೋಡುವುದಿಲ್ಲ. ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಗ್ರಾಮಸ್ಥರ ಬೇಡಿಕೆ ಇನ್ನು ಈಡೇರಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಗ್ರಾಮಸ್ಥರ ಮೇಲಿನ ಕೇಸುಗಳನ್ನು ವಜಾಗೊಳಿಸಿ ನಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ತುರ್ತಾಗಿ ಮಾಡಲು ಆದೇಶಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹನುಮಂತಪ್ಪ, ಕೃಷ್ಣಯ್ಯ, ಮಂಜಶೆಟ್ಟಿ, ಪಾಪಣ್ಣ, ಸ್ವಾಮಿ, ಪುಟ್ಟಣ್ಣಯ್ಯ, ಬಸವರಾಜ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.