ಹಾಸನ

ದಲಿತರು ಪ್ರವೇಶಿಸಿದ್ದಕ್ಕೆ ದೇಗುಲಕ್ಕೇ ಬೀಗ

Published On :

ಅರಸೀಕೆರೆ: ದಲಿತರು ದೇವಾಲಯ ಪ್ರವೇಶ ಮಾಡಿದರು ಎಂಬ ಕಾರಣಕ್ಕೆ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೇ ಬೀಗ ಜಡಿದಿರುವ ವಿಚಿತ್ರ ಘಟನೆ ಅರಸೀಕೆರೆ ತಾಲೂಕು ಬಾಗೀವಾಳು ಗ್ರಾಮದಲ್ಲಿ ನಡೆದಿದೆ.
ಇದಾದ ಬಳಿಕ ದೇವಾಲಯ ಪ್ರವೇಶ ಮಾಡಿದ ಯುವಕ ಮತ್ತವನ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆಯನ್ನೂ ಗ್ರಾಮದ ಕೆಲವರು ಒಡ್ಡಿದ್ದಾರೆ. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಖಾಕಿ ಪಡೆ ಮೊಕ್ಕಾಂ ಹೂಡಿದೆ.
ಬಾಗೀವಾಳು ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮುಜರಾಯಿ ಇಲಾಖೆಗೆ ಸೇರಿದ ಉಡುಸಲಮ್ಮ ದೇವಾಲಯವವಿದೆ. ವಿಪರ್ಯಾಸ ಎಂದ್ರೆ ಆಗಿನಿಂದಲೂ ದಲಿತರು ಈ ದೇವಾಲಯ ಪ್ರವೇಶ ಮಾಡದಂತೆ ನಿರ್ಬಂಧ ಹಾಕಲಾಗಿತ್ತು. ಆದ್ರೆ ಗ್ರಾಮದ ಚಿಕ್ಕಮ್ಮ ದೇವಾಲಯದ ಅರ್ಚಕನೂ ಆಗಿರುವ ದಲಿತ ಯುವಕ ಮೋಹನ್‌ಕುಮಾರ್, ತನ್ನ ಕುಟುಂಬದವರೊಂದಿಗೆ ಜೂ.10 ರಂದು ಉಡುಸಲಮ್ಮ ದೇವಾಲಯ ಪ್ರವೇಶ ಮಾಡಿದ.
ಇದಕ್ಕೆ ದಲಿತರು ಇಲ್ಲಿಗೆ ಬರುವಂತಿಲ್ಲ ಎಂದು ಕೊಂಕು ತೆಗೆದ ಪೂಜಾರಿ, ಊರಿನ ಸವರ್ಣೀಯ ಕೋಮಿನ ಕೆಲವರಿಗೆ ಫೋನ್ ಮಾಡಿ ಕರೆಸಿ ಮೋಹನ್‌ಕುಮಾರ್‌ಗೆ ಆವಾಜ್ ಮಾಡಿಸಿದ. ಅದಾದ ಬಳಿಕ ದಲಿತರ ಪ್ರವೇಶದಿಂದ ಪಾಪ ಸುತ್ತಿಕೊಂಡಿದೆ ಎಂದು ಭ್ರಮಿಸಿ, ಅಂದು ಸಂಜೆಯೇ ದೇವಾಲಯಕ್ಕೆ ಬೀಗ ಜಡಿಯಲಾಗಿದ್ದು, ಈವರೆಗೂ ಬಾಗಿಲು ತೆಗಿದಿಲ್ಲ. ಈ ಮೂಲಕ ದೇವರಿಗೇ ಗೃಹಬಂಧನ ವಿಧಿಸಿದ್ದಾರೆ.
ಮುಜರಾಯಿ ಇಲಾಖೆ ದೇವಾಲಯಕ್ಕೂ ನಾವು ಪ್ರವೇಶ ಮಾಡಬಾರದೇ, ನಾವು ಈ ಜಾತಿಯಲ್ಲೇ ಹುಟ್ಟಿದ್ದೇ ತಪ್ಪೇ ಈ ಸಂಕೋಲೆ ಹೋಗಲಾಡಿಸಲು ನಾನು ದೇವಾಲಯ ಪ್ರವೇಶ ಮಾಡಿದೆ. ದೇವರು ನನಗೆ ಏನೂ ಮಾಡಿಲ್ಲ ಅನ್ನೋದು ಮೋಹನ್‌ಕುಮಾರ್ ವಾದ. ಆದ್ರೆ ಮೇಲ್ಜಾತಿಯವರ ಒಡೆದು ಆಳುವ ನೀತಿ ಇಷ್ಟಕ್ಕೇ ನಿಂತಿಲ್ಲ. ಮೋಹನ್‌ಕುಮಾರ್‌ಗೆ ಕಾಟ ಕೊಡಲು ಶುರು ಮಾಡಿಕೊಂಡಿರುವ ಅವರು, ನಿಂದಿಸಿ ಬಹಿಷ್ಕಾರದ ಬೆದರಿಕೆಯನ್ನೂ ಹಾಕಿದ್ದಾರೆ.
ಅಷ್ಟೇ ಅಲ್ಲ, ಮೋಹನ್‌ಕುಮಾರ್ ಜೊತೆ ವ್ಯವಹರಿಸುವವರಿಗೂ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸರಕಾರ, ಪೊಲೀಸರು ಕಾನೂನು ಪ್ರಕಾರ ದೇಗುಲಕ್ಕೆ ಹೋಗಲು ಅವಕಾಶ ನೀಡಬೇಕು ಅನ್ನೋದು ಮೋಹನ್‌ಕುಮಾರ್ ಮನವಿಯಾಗಿದೆ.
ದುರಂತ ಎಂದ್ರೆ ಘಟನೆ ನಡೆದು 3 ದಿನ ಕಳೆದಿದ್ದರೂ, ಪೊಲೀಸರು ಸ್ಥಳಕ್ಕೆ ತೆರಳಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವುದನ್ನು ಬಿಟ್ಟರೆ, ಮುಜರಾಯಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ. ಮೂಲಗಳ ಪ್ರಕಾರ ಉಡುಸಲಮ್ಮನಿಗೆ ಪುಣ್ಯ ಮಾಡಿಸುವವರೆಗೂ ದೇಗುಲದ ಬಾಗಿಲು ತೆಗೆಯುದಿಲ್ಲವಂತೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಇಡೀ ಗ್ರಾಮದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಬೇಲೂರು ತಾಲೂಕು ಗಂಗೂರಿನಲ್ಲಿ ದಲಿತರು ಬಲವಂತವಾಗಿ ದೇವಾಲಯ ಪ್ರವೇಶ ಮಾಡಿದ್ದು ಕೆಲ ಕಹಿ ಘಟನೆಗಳಿಗೆ ಕಾರಣವಾಗಿತ್ತು. ಅದು ಮಾಸುವ ಮುನ್ನವೇ ಅದೇ ರೀತಿಯ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.