ಹಾಸನ

ಕಬ್ಬು ಬಾಕಿ ಹಣ ಪಾವತಿಗೆ ಆಗ್ರಹಿಸಿ ಹೋರಾಟ ಇಂದಿನಿಂದ

Published On :

ಹಾಸನ:  ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಣವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಶ್ರೀನಿವಾಸಪುರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂದೆ  ಜೂನ್ 16ರಿಂದ   ಪ್ರತಿಭಟನೆ ಆರಂಭಿಸಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಗೇಗೌಡ ತಿಳಿಸಿದ್ದಾರೆ.
 ಚನ್ನರಾಯಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ನಿಗದಿಪಡಿಸಿದಂತೆ ಟನ್ ಕಬ್ಬಿಗೆ 2500 ಹಾಗೂ 150 ಪ್ರೋತ್ಸಾಹ ಧನ ಸೇರಿ ಒಟ್ಟು ರು. 2650 ನೀಡಬೇಕಿದೆ. ಆದರೆ ಆರು  ತಿಂಗಳಾದರೂ ಪಾವತಿಸಿಲ್ಲ. ಪ್ರೋತ್ಸಾಹ ಧನ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು ಇನ್ನೂ ರೈತರಿಗೆ ನೀಡಿಲ್ಲ ಎಂದು ತಿಳಿಸಿದರು.
ಆಡಳಿತ ಮಂಡಳಿ ಮೌನ: ಕಾರ್ಯದರ್ಶಿ ರವಿ ಮಾತನಾಡಿ, ವಾರದೊಳಗೆ ಕಬ್ಬಿನ ಬಾಕಿ ಹಣವನ್ನು ಪಾವತಿಸುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಭರವಸೆ ಕೊಟ್ಟಿದ್ದರು. ಆದರೆ ಆರು ತಿಂಗಳಾದರೂ ಭರವಸೆ ಈಡೇರಿಸಿಲ್ಲ. ರೈತರ ಹಣದಲ್ಲೇ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ಈ ಹಣಕ್ಕೆ ಬಡ್ಡಿಯೂ ಇಲ್ಲದಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾರ್ಖಾನೆಯ ಚುನಾಯಿತ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು.
 ಬಾಕಿ ಹಣವನ್ನು ಬಿಡುಗಡೆ ಮಾಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಮುಖಂಡರಾದ ನಂಜುಂಡಪ್ಪ, ಗಂಗಾಧರ್ ಇತರರು ಇದ್ದರು.

ಪ್ರಪಾತಕ್ಕೆ ಕಾರು ಉರುಳಿ ವ್ಯಕ್ತಿ ಸಾವು
ಸಕಲೇಶಪುರ: ಪ್ರಪಾತಕ್ಕೆ ಕಾರು ಉರುಳಿ ಸ್ಥಳದಲ್ಲೆ ವ್ಯಕ್ತಿ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 48 ರ ಶಿರಾಡಿಘಟ್‌ನಲ್ಲಿ ನಡೆದಿದೆ.
 ಶಿವಮೊಗ್ಗ ಮೂಲದ ಪವನ್ (24) ಮೃತಪಟ್ಟ ದುರ್ದೈವಿ. ತಡರಾತ್ರಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತಿದ್ದ ವೇಳೆ ಶಿರಾಡಿಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಉರುಳಿದೆ. ಗಾಯಗೊಂಡಿದ್ದ ಚಾಲಕ  ಪ್ರಪಾತದಿಂದ ಮೇಲೆ ಬಂದು ಮರಳು ಲಾರಿಯೊಂದರಲ್ಲಿ ಪ್ರಯಾಣಿಸಿ ಪಟ್ಟಣದ ಪೋಲಿಸರಿಗೆ ವಿಷಯ ತಿಳಿಸಿದ್ದಾನೆ.  ಕಾರು ಬಿದ್ದ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪಿಎಸ್‌ಐ ಭರತ್ ಗೌಡರ ನೇತೃತ್ವದ ತಂಡ ತೆರಳಿ ಎರಡು ಘಂಟೆಗಳ ಕಾಲ ಹುಡುಕಿದ ನಂತರ ಕಾರು ಹಾಗೂ ಕಾರಿನಲ್ಲಿದ್ದ ಪವನ ಮೃತದೇಹ ಪತ್ತೆಯಾಗಿದೆ.
ಕಾರಿನಲ್ಲಿದ್ದ ಇತರೆ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.