ಹಾಸನ

'ವಸುದೈವ ಕುಟುಂಬಕಂ' ಪಾಲನೆಯಾಗಲಿ

Published On :

ಅರಸೀಕೆರೆ: ಮನುಷ್ಯನ ಜೀವನ ಶ್ರೇಷ್ಠವಾದುದು. ಅದನ್ನು ಭಗವಂತನ ಪ್ರಾರ್ಥನೆ  ಮೂಲಕ ಸಾರ್ಥಕಪಡಿಸಿಕೊಳ್ಳಬೇಕು. ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನೂ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ಪಾಲಿಸಬೇಕೆಂದು ಆರ್‌ಎಸ್‌ಎಸ್‌ನ ಕುಟುಂಬ ಪ್ರಭೋದನ್ ರಾಮಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸ್ಥಳೀಯ ಭಾರತ ವಿಕಾಸ ಪರಿಷತ್ ಅಮರಗಿರಿ ಶಾಖೆ ವತಿಯಿಂದ ಸಂಜೆ ಆಯೋಜಿಸಲಾಗಿದ್ದ ಅವಿಭಕ್ತ ಕುಟುಂಬದ ಹಿರಿಮೆ ಮತ್ತು ಭಾರತೀಯ ಕುಟುಂಬದ ಇಂದಿನ ಸವಾಲುಗಳು, ಅವಿಭಕ್ತ ಕುಟುಂಬದ ಹಿರಿಯರಿಗೆ ಗೌರವಾರ್ಪಣೆ ಹಾಗೂ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧ್ಯೇಯದಿಂದ ಶಾಂತಿ-ನೆಮ್ಮದಿ ಸಾಧ್ಯ: ಪ್ರತಿಯೊಬ್ಬ ಭಾರತೀಯನೂ ವಸುದೈವ ಕುಟುಂಬಕಂ ಎಂಬ ಧ್ಯೇಯ ಅಳವಡಿಸಿಕೊಂಡಾಗ ಮಾತ್ರ ಶಾಂತಿ, ನೆಮ್ಮದಿ, ಸೌಹಾರ್ದಯುತ ಜೀವನ ನಡೆಸಲು ಸಾಧ್ಯ, ದೇಶದ ಅಸ್ತಿತ್ವ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಅವಿಭಕ್ತ ಕುಟುಂಬದ ಪರಿಕಲ್ಪನೆ ಇದ್ದೇ ಇರುತ್ತದೆ ಎಂದರು.
ಧೃವ ನಕ್ಷತ್ರಗಳಂತೆ ಮಿನುಗಲಿ: ದಾರಿ ತಪ್ಪಿಸುವ, ದಾರಿ ತಪ್ಪಿದ ದಾರಿ ತಪ್ಪುವ ಮಕ್ಕಳು ನಮ್ಮವರಾಗಬಾರದು. ಬದಲಾಗಿ ದಾರಿ ತೋರಿಸುವ ಧೃವನಕ್ಷತ್ರಗಳಂತೆ ಮಕ್ಕಳ ಭವಿಷ್ಯವನ್ನು ರೂಪಿಸುವ ಗುರುತರವಾದ ಜವಾಬ್ದಾರಿ ಕುಟುಂಬಗಳ ಮೇಲಿದೆ. ನಾನಾ ಕಾರಣಗಳಿಂದ ಕುಟುಂಬಗಳು ಬೇರೆ ಬೇರೆಯಾಗಿವೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಅವಿಭಕ್ತ ಕುಟುಂಬಗಳನ್ನು ಕಾಣಲು ಸಾಧ್ಯವಿದೆ. ಕುಟುಂಬದ ಹಿರಿಮೆಯನ್ನು ಭಾರತೀಯರಾದ ನಾವು ಇಂದಿಗೂ ಅನುಭವಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು. ತಾಲೂಕು ಭಾವಿಪ ಅಧ್ಯಕ್ಷ ಬಿ.ಎಸ್.ಸೇತುರಾಂ, ಹಿರಿಯ ದಂತ ವೈದ್ಯ ಡಾ.ಜಗದೀಶ್ ಮಾತನಾಡಿದರು. ಇದೇ ವೇಳೆ ತಾಲೂಕಿನ 6ಕ್ಕೂ ಹೆಚ್ಚು ಅವಿಭಕ್ತ ಕುಟುಂಬಗಳ ಹಿರಿಯ ಸದಸ್ಯರನ್ನು ಬಾಗಿನ ನೀಡುವ ಮೂಲಕ ಹೃದಯಸ್ಪರ್ಶಿ ಗೌರವ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.