ಹಳ್ಳ ಹಿಡಿಯಿತು ನೀರಿನ ಕಾಮಗಾರಿ
-ಎಸ್.ಎಂ. ಮಂಜುನಾಥ್
ಸಕಲೇಶಪುರ: ಸರ್ಕಾರದ ಕುಡಿಯುವ ನೀರಿನ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆ ಅನ್ನೋದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಹಣ ಬಿಡುಗಡೆಯಾಗಿ ಕಾಮಗಾರಿ ಪೂರ್ಣವಾದರೂ ಇದುವರೆಗೆ ಒಂದು ಹನಿ ನೀರು ಸಹ ಹರಿಯದಿರುವ ಸಂಗತಿ. ತಾಲೂಕಿನ ಹಾನುಬಾಳು ಹೋಬಳಿ ಸೇರಿದಂತೆ 15 ಗ್ರಾಮಗಳಿಗೆ ನೀರು ಹರಿಸುವ ಯೋಜನೆಯಾಗಿದ್ದು, ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಪಶ್ಚಿಮಘಟ್ಟದ ಮಲೆನಾಡು ಗ್ರಾಮವಾದ ಅಗನಿಯ ಮೂರ್ಗಲ್ ಗುಡ್ಡದ ಬಳಿಯಿಂದ ಸ್ವಾಭಾವಿಕವಾಗಿ ಹರಿಯುತ್ತಿರುವ ನೀರನ್ನು ಗ್ರಾಮಗಳಿಗೆ ಹರಿಸುವ ನಿಟ್ಟಿನಲ್ಲಿ ಗುಡ್ಡದ ಮೇಲೆ ಹರಿಯುವ ನೀರನ್ನು ಚೆಕ್ ಡ್ಯಾಂ ಕಟ್ಟಿ ಅದನ್ನು ಪೈಪ್ಗಳ ಮೂಲಕ 12 ಕಿಮಿ ದೂರದ ಹಾನುಬಾಳಿಗೆ ಹರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು.
ಒಂದು ಹನಿ ನೀರಿಲ್ಲ: ಸುಮಾರು 15 ಗ್ರಾಮಗಳಿಗೆ ವರ್ಷ ಪೂರ್ತಿ ನೀರು ಹರಿಸಬಹುದಾದ ಈ ಯೋಜನೆ, ವಿದ್ಯುತ್ ಮತ್ತು ಇತರೆ ಅನಗತ್ಯ ಖರ್ಚು ಇಲ್ಲದೆ ಗುಡ್ಡದಿಂದ ನೀರು ಹಳ್ಳಕ್ಕೆ ಹರಿಯುತ್ತದೆ. ಹಾಗಾಗಿ ನೀರು ಸ್ವಾಭಾವಿಕವಾಗಿ ಕೆಳಮುಖವಾಗಿ ಹರಿಸುವುದು ಯೋಜನೆಯ ಒಂದು ಭಾಗ. 2003ರಲ್ಲಿ ಕಾಮಗಾರಿಗೆ ಚಾಲನೆ ನೀಡಿ, ಸುಮಾರು ರು. 40 ಲಕ್ಷ ಹಣ ಕರ್ಚು ಮಾಡಿ ಉಳಿಕೆ ರು. 40 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. 10 ವರ್ಷ ಕಳೆದರೂ ಈವರೆಗೂ ಒಂದು ಹನಿ ನೀರೂ ಸಹ ಈ ಗ್ರಾಮಗಳಿಗೆ ಹರಿದಿಲ್ಲ.
ಹಾನುಬಾಳು ಹೋಬಳಿ ಮತ್ತು ಸುತ್ತಲ ಗ್ರಾಮಗಳು ಮಲೆನಾಡು ಪ್ರದೇಶವಾಗಿದೆ. ವರ್ಷದಲ್ಲಿ 250 ಇಂಚು ಭಾರಿ ಮಳೆ ಆಗುತ್ತದೆ. ಆದರೆ, ಈ ಗ್ರಾಮದಲ್ಲಿ ನೀರಿನ ಕೊರತೆ ಕೂಡ ಅಷ್ಟೇ ಇದೆ. ಬೋರ್ವೆಲ್ಗಳು ಕೊರೆಸಿದರು ಯಶಸ್ವಿ ಆಗಲ್ಲ, ತೆರೆದ ಬಾವಿಗಳನ್ನು ತೋಡಲು ಸಾದ್ಯವಿಲ್ಲ. ಆದ್ದರಿಂದ ಸ್ವಾಭಾವಿಕವಾದ ಈ ನೀರನ್ನು ಬಳಸುವುದು ಯೋಜನೆಯ ಪ್ರಮುಖ ಉದ್ದೇಶ.
ಹಲವೆಡೆ ಕಳ್ಳತನ: 2003ರಲ್ಲಿ ಶಂಕು ಸ್ಥಾಪನೆ ಆಗಿದ್ದು, ಈವರೆಗೆ 14 ವರ್ಷಗಳೇ ಆಗಿವೆ. ಕಳಪೆ ಕಾಮಗಾರಿ ಎದ್ದು ಕಾಣುತ್ತಿದ್ದು, ಕಾಮಗಾರಿ ನಿರ್ದಿಷ್ಟಾವಧಿಯಲ್ಲಿ ಸರಿಯಾಗಿ ಮುಗಿದಿದ್ದರೆ 12 ಕಿಮಿ ದೂರದ ಹಾನುಬಾಳು ಒಳಗೊಂಡಂತೆ ಸುಮಾರು 15 ಗ್ರಾಮಗಳಿಗೆ ಪೈಪ್ಗಳ ಮೂಲಕ ಸ್ವಾಭಾವಿಕವಾಗಿ ನೀರು ಹರಿಯಬೇಕಿತ್ತು. ಕಾಮಗಾರಿಯನ್ನು ಬೇಕಾಬಿಟ್ಟಿ ನಿರ್ವಹಣೆ ಮಾಡಿ, ನೀರಿನ ಪೈಪಗಳನ್ನು ನಿರ್ದಿಷ್ಟ ಹಾಕದೆ. ಕೆಲವೆಡೆ ರಸ್ತೆ ಮೇಲೆಯೇ ಬಿಡಲಾಗಿದೆ. ಕೆಲವೆಡೆ ಪೈಪ್ಗಳನ್ನು ಕತ್ತರಿಸಿಕೊಂಡು ಹೋಗಲಾಗಿದೆ.
ಅಗನಿ ಗುಡ್ಡದ ಮಾದರಿಯಲ್ಲೆ ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆಯಲಿದೆ. ವಿವಾದಿತ ಮತ್ತು ಉದ್ದೇಶಿತ ಎತ್ತಿನಹೊಳೆ ಯೋಜನೆಯ ಸ್ಥಳ ಇಲ್ಲಿಂದ ಕೇವಲ ಐದಾರು ಕಿಮಿ ಮಾತ್ರ. ಇನ್ನು 12 ಕಿಮೀ ದೂರಕ್ಕೆ ನೀರು ಹರಿಸಲು ಸಾದ್ಯವಾಗದ ಸರ್ಕಾರಕ್ಕೆ, ದೂರದ ಕೋಲಾರ ಚಿಕ್ಕಬಳ್ಳಾಪುರಕ್ಕೆ ಇಲ್ಲಿಂದ ನೀರು ಹರಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

