ಉದ್ಯೋಗಕ್ಕೆ ಇಂಗ್ಲಿಷ್ ಅಗತ್ಯ: ಪ್ರೊ. ಪಾಟೀಲ್
ಅರಸೀಕೆರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ, ಜಾಗತಿಕ ಭಾಷೆಯಾಗಿ ಇಂಗ್ಲಿಷ್ ಹೆಚ್ಚಿನ ಮಹತ್ವ ಪಡೆಯುತ್ತಿದ್ದು, ಇಂದು ಯುವ ಜನಾಂಗ ಉದ್ಯೋಗ ಪಡೆಯುವಲ್ಲಿ ಇಂಗ್ಲಿಷ್ ಮೇಲೆ ಹಿಡಿತ ಅಗತ್ಯವಿದೆ ಎಂದು ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ಪ್ರೊ. ದೇವರಾಜ ಪಾಟೀಲ್ ಅಭಿಪ್ರಾಯಪಟ್ಟರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಇಂಗ್ಲಿಷ್ ಭಾಷಾ ವಿಭಾಗಗಳ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತತ ಪರಿಶ್ರಮ ಮತ್ತು ಏಕಾಗ್ರತೆಯಿಂದ ಇಂಗ್ಲಿಷ್ ಕಲಿಕೆ ಜೀವನದ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಮಾತನಾಡಿ, ಉದಾರೀಕರಣದಿಂದಾಗಿ ಮಾನವನ ದಿನನಿತ್ಯದ ಬದುಕಿನ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರಾಂಶುಪಾಲ ಪ್ರೊ. ಸೈಯ್ಯದ್ಪಾಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ. ಈಶ್ವರಪ್ಪ ಸ್ವಾಗತಿಸಿದರು. ವಿದ್ಯಾರ್ಥಿನಿ ಚಂದನ ವಂದಿಸಿದರು.
ಹಲ್ಲೆಯಿಂದ ಪತ್ನಿ ಸಾವು: ಪತಿ ಲೋಕಾ ಮೊರೆ
ಹಾಸನ: ಮಾರಣಾಂತಿಕ ಹಲ್ಲೆಯಿಂದ ತಮ್ಮ ಪತ್ನಿ ಕೊಲೆಗೈದವರನ್ನು ಪೊಲೀಸರು ಬಂಧಿಸಿ ಶಿಕ್ಷೆ ವಿಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ನ್ಯಾಯಕ್ಕಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಅಕ್ಟೋಬರ್ 15 ರಂದು ಆಲೂರು ತಾಲೂಕು ಪಾಳ್ಯ ಹೋಬಳಿ ಬಾವಸಹಳ್ಳಿಯ ಬಿ.ಪಿ. ಧರ್ಮಪ್ಪ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ತಮ್ಮ ಪತ್ನಿ ಎಚ್.ವೈ. ಮೋಹನಾಕ್ಷಿ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮನೆ ವಿಚಾರವಾಗಿ ಜಗಳ ತೆಗೆದ ತಮ್ಮನ ಹೆಂಡತಿ ಸವಿತ ಅವರ ಪುತ್ರ ಮದನ್ಕುಮಾರ್, ಆಕೆಯ ಪುತ್ರಿ ಮೇಘನಾ ಮೂವರೂ ಸೇರಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಧರ್ಮಪ್ಪ ಆರೋಪಿಸಿದ್ದಾರೆ. ಪತ್ನಿಯನ್ನು ತಕ್ಷಣ ಆಲೂರು ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ಜನವರಿಯಲ್ಲಿ ಸಾವನಪ್ಪಿದರು. ಈ ವೇಳೆ ಮೋಹನಾಕ್ಷಿ ಹಲ್ಲೆಗೆ ಕಾರಣರಾದ ಬಗ್ಗೆ ಮಾಹಿತಿ ಪೊಲೀಸರು ಪಡೆದಿದ್ದರು. ನಾನು ದೂರು ಕೂಡಾ ನೀಡಿದ್ದೆ. ಮೋಹನಾಕ್ಷಿ ಆಸ್ಪತ್ರೆಗೆ ದಾಖಲಾದ ಮೇಲೆ ರಾಜಿ ಮಾಡಿಕೊಳ್ಳುವುದಾಗಿ ಹೇಳಿದಾಗ ನಾವು ಸುಮ್ಮನಿದ್ದೆವು. ನಂತರ ಮಾತುಕತೆ ಯಾವುದಕ್ಕೂ ಬರಲಿಲ್ಲ. ನಮಗೆ ಅವರಿಂದ ತೊಂದರೆ ಆಗಬಹುದು ಎಂಬ ದೃಷ್ಟಿಯಲ್ಲಿ ಆಲೂರು ಠಾಣೆಗೆ ದೂರು ನೀಡಲಾಯಿತು. ಗ್ರಾಮದಲ್ಲಿ ಹಲ್ಲೆ ಮಾಡಿದ ಮೂವರೂ ಇದ್ದರೂ ಪೊಲೀಸ್ ಅಧಿಕಾರಿಗಳು ಬಂಧಿಸಲು ಒಂದು ಬಾರಿಯು ಗ್ರಾಮಕ್ಕೆ ತೆರಳಲಿಲ್ಲ ಎಂದು ದೂರಿದ್ದಾರೆ. ನ್ಯಾಯಕ್ಕಾಗಿ ಜಿಲ್ಲಾ ಎಸ್ಪಿ ಬಳಿ ಹೋದಾಗ ಸಬ್ ಇನ್ಸ್ಪೆಕ್ಟರ್ಗೆ ಬಂಧಿಸಲು ಸೂಚನೆ ನೀಡಿದರೂ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ.
ಒಂದು ಬಾರಿ ಮಾತ್ರ ನೆಪಕ್ಕೆ ಬಂದು ಸುಮ್ಮನೆ ಹೋದರು. ಹಲ್ಲೆ ಮಾಡಿದವರಿಗೆ ವಿಚಾರ ತಿಳಿದು ಮೂವರು ಈಗ ಗ್ರಾಮದಿಂದ ಪರಾರಿಯಾಗಿರುತ್ತಾರೆ. ಹಲ್ಲೆ ಮಾಡಿದವರು ಕೆಲ ದಿವಸಗಳ ಹಿಂದೆ ಬಂದು ದನ ಕರು ಕೊಂಡೂಯ್ಯಲು ಬಂದಾಗ ಠಾಣೆಗೆ ಕರೆ ಮಾಡಿದರೂ ಬರಲಿಲ್ಲ. ಠಾಣೆಯಲ್ಲಿ ನಮಗೆ ನ್ಯಾಯ ದೊರಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆಲೂರು ಠಾಣೆಯಿಂದ ಈ ಕೇಸನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಲಾಗಿದೆ.
'ತಾಂಡ್ಯ ಅಭಿವೃದ್ಧಿ ನಿಗಮ ಸವಲತ್ತು ಸದ್ಬಳಸಿ ಕೊಳ್ಳಿ'
ಅರಸೀಕೆರೆ: ತಾಂಡ್ಯ ಅಭಿವೃದ್ಧಿ ನಿಗಮದಿಂದ ದೊರೆಯುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಜೀವನ ಮಟ್ಟ ಸುಧಾರಣೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ಕಾರ್ಯದರ್ಶಿ ಕೆ. ಸದಾಶಿವನಾಯ್ಕ ತಿಕರೆ ತಿಳಿಸಿದರು. ಕರ್ನಾಟಕ ಪ್ರದೇಶ ಲಂಬಾಣಿ ಕಲ್ಯಾಣ ಸಂಘ ಹಾಗೂ ತಾಂಡ್ಯ ಅಭಿವೃದ್ಧಿ ನಿಗಮ ವತಿಯಿಂದ ಪಟ್ಟಣದ ಆರ್.ಆರ್. ರಸ್ತೆಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಬಾಣಿ ತಾಂಡ್ಯ ಅಭಿವೃದ್ಧಿ ನಿಗಮದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ ಎಂದರು. ತಾಂಡ್ಯ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ರಮೇಶ್ನಾಯ್ಕ ಮಾತನಾಡಿ, ಜ್ಞಾನ ಅತ್ಯಮೂಲ್ಯವಾದುದು. ಅದನ್ನು ಪಡೆಯಲು ಸಮಾಜದ ಎಲ್ಲರೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ನಿಗಮದಿಂದ ಸಿಗುವು ಮೂಲ ಸೌಲಭ್ಯ ಹಾಗೂ ವಿವಿಧ ಆರ್ಥಿಕ ಸಹಾಯದ ಬಗ್ಗೆ ವಿವರಿಸಿದರು. ಸಂಘದ ಅಧ್ಯಕ್ಷ ಎಚ್.ಆರ್. ಸೋಮಶೇಖರ್ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಮಾಜಕಲ್ಯಾಣಾಧಿಕಾರಿ ಪ್ರಕಾಶ್ಮೂರ್ತಿ ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

