ಮರಗಳ ಹನನ: ಪರಿಸರವಾದಿಗಳ ಆಕ್ರೋಶ
ಅರಸೀಕೆರೆ: ಪಟ್ಟಣದ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಮೂರು ಮರಗಳ ಮಾರಣ ಹೋಮ ನಡೆದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಕಂಡು ಕಾಣದಂತೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ಇಲ್ಲಿನ ಪ್ರಗತಿಪರ ಸಂಘಟನೆಗಳ ಮತ್ತು ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಿ.ಎಚ್. ರಸ್ತೆಯ ಪಕ್ಕದಲ್ಲಿನ ಹಳೆಯ ಪೊಲೀಸ್ ವಸತಿ ಗೃಹ ತುಂಬಾ ಹಾಳಾಗಿದ್ದು, ಈ ಜಾಗದಲ್ಲಿ ನೂತನ ವಸತಿಗೃಹಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕೆಂದು ಅನೇಕ ಬಾರಿ ಸರ್ಕಾರಕ್ಕೆ ಪೊಲೀಸ್ ಇಲಾಖೆ ಮೂಲಕ ಮನವಿ ಸಲ್ಲಿಸಲಾಗಿತ್ತು. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಪ್ರದೇಶ ಅನೈತಿಕ ಚಟುವಟಿಕೆ ತಾಣವಾಗಿ ಪರಿಣಮಿಸಿದೆ. ಈ ಸಮಸ್ಯೆ ಕುರಿತು ಅನೇಕ ಬಾರಿ ಮಾಧ್ಯಮಗಳು ವರದಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಗಿದ್ದು. ಕಟ್ಟಡಗಳ ನೆಲಸಮ ಕಾರ್ಯಗಳು ಮುಕ್ತಾಯವಾಗಿದೆ.
ಅಸಮಾಧಾನ: ಈ ಪ್ರದೇಶದ ಸುತ್ತಮುತ್ತಲು ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದ್ದ ಮೂರು ಮರಗಳಿದ್ದವು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಆಟೋಸ್ಟ್ಯಾಂಡ್ ಮತ್ತು ಪಾದಚಾರಿಗಳಿಗೆ ನೆರಳು ನೀಡುವ ತಾಣವಾಗಿತ್ತು. ಸಾರ್ವಜನಿಕರಿಗೆ ಈ ಮರಗಳಿಂದ ಯಾವುದೇ ತೊಂದರೆ ಇರಲಿಲ್ಲ. ಅವುಗಳ ಮಾರಣ ಹೋಮಕ್ಕೆ ಮುಂದಾಗಿ ಧರೆಗೆ ಉರುಳಿಸಿರುವುದು ಪರಿಸರ ವಾದಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಲ್ಲಿಯೇ ಕೆಲವೇ ದೂರದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿದ್ದರು. ನಡೆದಿರುವ ಈ ಘಟನೆಯು ಕಂಡು ಕಾಣದಂತೆ ವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಡೆದುಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ.
ನಾಗರಿಕರೂ ತೆಪ್ಪಗೆ
ಸುಮಾರು 40 ವರ್ಷಗಳ ಕಾಲದ ಮರಗಳು ಅದರ ಜೀವಿತ ಅವಧಿಯಲ್ಲಿ ಸಾರ್ವಜನಿಕರಿಗೆ ನೀಡಿದ ಕೊಡುಗೆಗಾಗಿಯಾದರೂ ಇಂತಹ ಕಹಿ ಘಟನೆಯನ್ನು ಪ್ರಜ್ಞಾವಂತ ನಾಗರಿಕರು ವಿರೋಧಿಸದೆ ಇರುವುದು ಅವರಲ್ಲಿ ಪರಿಸರ ಪ್ರೇಮ ಮತ್ತು ಕಾಳಜಿ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡುತ್ತಿದೆ.
ಇನ್ನಾದರೂ ನಿದ್ರಾವಸ್ಥೆಯಲ್ಲಿರುವ ಅರಣ್ಯಾಧಿಕಾರಿಗಳು ಈ ಅನ್ಯಾಯದ ಬಗ್ಗೆ ಸಂಬಂಧಪಟ್ಟವರನ್ನು ಪ್ರಶ್ನಿಸುವ ಮೂಲಕ ಕಾನೂನು ಕ್ರಮಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಪ್ರಕೃತಿ ವಿಕೋಪದ ಕಾರಣ ಸತತ ಬರಗಾಲ ತಾಲೂಕಿಗೆ ಬರುತ್ತಿದೆ ಎಂಬ ಕೂಗು ಪ್ರತಿನಿತ್ಯ ಕೇಳುತ್ತಿದೆ. ಇಂಥ ಸನ್ನಿವೇಶದಲ್ಲಿ ಮರಗಳ ಮಾರಣಹೋಮ ದಿನನಿತ್ಯ ನಡೆಯುತ್ತಿದ್ದರೂ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೌನ ವಹಿಸಿದ್ದಾರೆ. ಇವರ ಮೌನ ಮತ್ತಷ್ಟು ದುಷ್ಕೃತ್ಯಗಳು ನಡೆಯಲು ಕಾರಣವಾಗುತ್ತಿವೆ
-ಉಮಾಪತಿ ಮೊದಲಿಯಾರ್
ರಾಷ್ಟ್ರೀಯ ಹಿರಿಯ ಕ್ರೀಡಾಪಟು ಹಾಗೂ ಪರಿಸರವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

