ಹಾಸನ

ಶಿಕ್ಷಕರಿಂದ ವಸೂಲಿ ನಡೆಯುತ್ತಿಲ್ಲ

Published On :

ಹೊಳೆನರಸೀಪುರ: ಪಟ್ಟಣದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಕರ ಭವನದ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದು, ಸಂಘದ ನಿರ್ದೇಶಕರ ಅಭಿಪ್ರಾಯದ ನಂತರವೇ ತಾಲೂಕಿನ ಶಿಕ್ಷಕರಿಂದ ವಂತಿಕೆ ಸ್ವೀಕರಿಸಲಾಗಿದೆ. ಬಲವಂತವಾಗಿ ದೇಣಿಗೆ ವಸೂಲಿ ಮಾಡುತ್ತಿಲ್ಲ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಶಿಕ್ಷಕರ ಭವನಕ್ಕಾಗಿ ತಾಲೂಕಿನ ಶಿಕ್ಷಕರಿಂದ ಇಲಾಖೆಯ ಅಧಿಕಾರಿಗಳ ಅನುಮತಿಯಿಲ್ಲದೇ, ಮೂರು ಬಾರಿ ವಂತಿಕೆ ಸ್ವೀಕರಿಸುತ್ತಿದ್ದಾರೆ ಎಂದು ಕಳೆದ ವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಇಬ್ಬರು ನಿರ್ದೇಶಕರು ಹಾಗೂ ಕೆಲ ಶಿಕ್ಷಕರು  ಆರೋಪ ಮಾಡಿದ್ದರು.
ಈ ಕುರಿತಂತೆ ಸ್ಪಷ್ಟನೆ ನೀಡುವ ಸಲುವಾಗಿ ಸಂಘದ ನಿರ್ದೇಶಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮಂಜುನಾಥ್, ಈಗಾಗಲೇ ಈ ಭವನಕ್ಕೆ ಜನಪ್ರತಿನಿಧಿಗಳಿಂದ ಲಕ್ಷಾಂತರ ರುಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆದು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ಪಟ್ಟಣದಲ್ಲಿ ನಿರ್ಮಿಸಿರುವ ಶಿಕ್ಷಕರ ಭವನದ ಕಾಮಗಾರಿ ಶೇ. 90ರಷ್ಟು  ಪೂರ್ಣಗೊಂಡಿದ್ದು ಭಾಗಶಃ ಕಾಮಗಾರಿ ಇನ್ನೂ ಬಾಕಿ ಇರುವುದರಿಂದ ಕಾಮಗಾರಿ ನಡೆಸಲು ಆರ್ಥಿಕವಾಗಿ ಬಲವಿಲ್ಲದ ಸ್ಥಿತಿಯಲ್ಲಿ ಸಂಘ ತೊಳಲಾಡುತ್ತಿದೆ ಎಂದು ತಿಳಿಸಿದ ಅವರು, ಹೀಗಾಗಿ ವಂತಿಕೆ ಸಂಗ್ರಹಿಸಲಾಗುತ್ತಿದೆ ಎಂದರು.
ನಿರ್ದೇಶಕರಿಂದ ಗೊಂದಲ: ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿರುವ ಸಂಘದ ನಿರ್ದೇಶಕರಾದ ಡಿ.ಸಿ.ಮಹೇಶಪ್ಪ ಹಾಗೂ ಬಿ. ಸೋಮಣ್ಣಯ್ಯ ಅವರು ಇದುವರೆವಿಗೂ ಸಂಘದ 12 ಸಭೆಗಳು ನಡೆದಿದ್ದರೂ, 11 ಸಭೆಗಳಿಗೆ ಗೈರು ಹಾಜರಾಗಿದ್ದಾರೆ. ಇವರು ಕೇವಲ 1 ಸಭೆಗಷ್ಟೇ ಹಾಜರಾಗಿ ಸಂಘದ ಚಟುವಟಿಕೆಯ ಬಗ್ಗೆ ಬೇಜವಬ್ದಾರಿ ತೋರಿರುವುದಲ್ಲದೇ, ತಾಲೂಕಿನ ಶಿಕ್ಷಕರಿಂದ ಬಲವಂತವಾಗಿ ವಂತಿಗೆ ವಸೂಲು ಮಾಡುತ್ತಿರುವುದಾಗಿ ಶಿಕ್ಷಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಆರೋಪ: ರಾಜೇಗೌಡ ಅವರು ತಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಲ್ಲುಬ್ಯಾಡರಹಳ್ಳಿ ಶಾಲೆಯ ಶಿಕ್ಷಕ ಕೆ.ಟಿ. ರವಿಕುಮಾರ್ ಅವರು, ಭವನದ ಕಾಮಗಾರಿಗಾಗಿ ಮರಳು ಸರಬರಾಜು ಮಾಡುವುದಾಗಿ ತಿಳಿಸಿ ರು.  20 ಸಾವಿರ ರು. ಪಡೆದು, ಈವರೆಗೂ ಮರಳನ್ನೂ ಸರಬರಾಜು ಮಾಡದೇ ಪಡೆದ ಹಣವನ್ನೂ ಹಿಂದಿರುಗಿಸದೇ ಈಗ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.
ಮನವಿ: ಇದೇ ವೇಳೆ, ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಶ್ಯವಾಗಿರುವ ಹಣವನ್ನು ಶಿಕ್ಷಕರು ನೀಡಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ, ಕಳೆದ ವಾರ ದೇಣಿಗೆ ವಿಚಾರದಲ್ಲಿ ಅಪಸ್ವರ ಎತ್ತಿರುವ ಶಿಕ್ಷಕರು ಕೂಡ ನಮ್ಮೊಂದಿಗೆ ಸಹಕರಿಸಿ ಭವನವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದ ಅವರು, ಈ ವಿಚಾರದಲ್ಲಿ ಸಂಘದ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಅವರ ಸಹಕಾರದಿಂದ ಭವನವನ್ನು ಪೂರ್ಣಗೊಳಿಸಲು ಮುಂದಾಗುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ಕಾರ್ಯದರ್ಶಿ ವೈ.ಎಸ್. ಸೋಮಯ್ಯ ಸೇರಿದಂತೆ ಸಂಘದ ಬಹುತೇಕ ನಿರ್ದೇಶಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.