ಮೋದಿ ಬಿಜೆಪಿಯ ದೌರ್ಬಲ್ಯ
ಚನ್ನರಾಯಪಟ್ಟಣ: ನರೇಂದ್ರ ಮೋದಿ ಅವರು ಗುಜರಾತಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಬಿಜೆಪಿಯ ದೌರ್ಬಲ್ಯವಾಗಿದ್ದು, ದೇಶವಾಳುವ ಶಕ್ತಿ ಅವರಿಗಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ನರೇಂದ್ರ ಮೋದಿ ಗುಜರಾತಿನ ರೈತ ಸಮಸ್ಯೆ ಬಗೆಹರಿಸುವಲ್ಲಿ ತಮ್ಮ ಶಕ್ತಿ ಕಳೆದುಕೊಂಡಿದ್ದಾರೆ.
ದೇಶವಾಳುವ ಶಕ್ತಿ ಅವರಿಗೆಲ್ಲಿ ಬರಬೇಕು ಎಂದು ಪ್ರಶ್ನಿಸಿದರು. ಅವರಿಗೆ ದೇಶವಾಳುವ ಯೋಗ್ಯತೆ ಇಲ್ಲ. ದೇಶದ ನಾಯಕರ ಜೊತೆ ಹೊಂದಾಣಿಕೆಯಿಂದ ಹೋಗುವ ಶಕ್ತಿ ಅವರಿಗಿಲ್ಲ ಎಂದು ಟೀಕಿಸಿದರು.
ನಿದ್ದೆ ಮಾಡಲ್ಲ: ತಮ್ಮನ್ನು ನಿದ್ದೆ ಮಾಡುತ್ತೇನೆಂದು ಟೀಕಿಸಿರುವ ಅವರು ಸಭೆಗಳಲ್ಲಿ ಕಣ್ಣು ಮುಚ್ಚಿದ ತಕ್ಷಣ ನಿದ್ದೆ ಎಂದು ತಿಳಿಯಬೇಡಿ. ತಾವು ದಿನದ 20 ಗಂಟೆಗಳ ಕಾಲ ಜನತೆಯ ಕಷ್ಠಸುಖಗಳ ಬಗ್ಗೆ ಚಿಂತನೆ ನಡೆಸುತ್ತೇನೆ.
ತಮಗೆ ಮಧುಮೇಹದ ಕಾರಣ ವಿದ್ಯುತ್ ದೀಪದ ಬೆಳಕು ಕಣ್ಣಿಗೆ ಬೀಳುವುದರಿಂದ ಕಣ್ಣು ಮುಚ್ಚುತ್ತೇನೆ. ಇದನ್ನು ನಿದ್ದೆ ಎಂದು ತಿಳಿಯುವವರು ಸಜ್ಜನಿಕೆಯ ಮಾತನಾಡುವುದನ್ನು ಕಲಿಯಬೇಕು ಎಂದು ತಿಳಿಸಿದರು.
ಗುಜರಾತಿನಲ್ಲಿ ತಿಂಗಳುಗಟ್ಟಲೇ ಧರಣಿ ಮಾಡುವ ರೈತರ ಸಮಸ್ಯೆಯನ್ನು ಬಗೆಹರಿಸಲಾಗದ ಮೋದಿ ದೇಶದ ಸಮಸ್ಯೆಯನ್ನು ಯಾವ ರೀತಿ ಬಗೆ ಹರಿಸುತ್ತಾರೆ.
ಮೋದಿ ಎಂದಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಅಂತಹ ಅರ್ಹತೆ ಅವರಿಗಿಲ್ಲ ಎಂದು ತಿಳಿಸಿದರು.
ಕಣ್ಣೀರಿಟ್ಟರು ಮಾಜಿ ಬಿಜೆಪಿ ಹಾಗೂ ಕಾಂಗ್ರೆಸ್, ಲೋಕಸಭಾ ಸದಸ್ಯರುಗಳನ್ನು ತಮ್ಮ ಜತೆ ಕೈ ಜೋಡಿಸಿ ರಾಜ್ಯದ ಹಿತ ಮುಖ್ಯವಾಗಿ ನೋಡಿ ಎಂದರೂ ಅವರು ಪಕ್ಷವನ್ನು ನೋಡಿದರು. ರಾಜ್ಯವನ್ನು ಬಲಿಕೊಡಲು ಮುಂದಾದರು ಎಂದು ಘಳ ಘಳನೆ ಕಣ್ಣೀರಿಟ್ಟರು.
ತಾವು ಪ್ರಧಾನಿ ಅಭ್ಯರ್ಥಿ ಅಲ್ಲ: ಎಲ್ಲಾ ರಾಜ್ಯಗಳಲ್ಲಿಯೂ ಸ್ಥಾಪನೆಯಾಗಿರುವ ಸ್ಥಳೀಯ ಪಕ್ಷದ ಕಡೆ ಚಿತ್ತ ಹರಿಸಿರುವುದರಿಂದ ಅವರೆಲ್ಲರನ್ನೂ ಒಗ್ಗೂಡಿಸಿ ಚುನಾವಣೆ ಎದುರಿಸಲು ತೃತೀಯ ರಂಗ ಸ್ಥಾಪನೆಯಾಗಿದೆ. ಯಾವುದೇ ಕಾರಣದಿಂದಲೂ ತಾವು ಪ್ರಧಾನಿ ಅಭ್ಯರ್ಥಿಯಲ್ಲ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ, ಜಿ.ಪಂ. ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಎಂಎಲ್ಸಿ ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ. ಕರೀಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಶಂಕರ್ ಕಂಠೆ, ದೇವಿಕಾ ಪ್ರಕಾಶ್, ಕುಸುಮಾ ಬಾಲಕೃಷ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಪುರಸಭಾಧ್ಯಕ್ಷ ಮಂಜೇಗೌಡ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಇತರರು ಇದ್ದರು.
'ಕಾಂಗ್ರೆಸ್, ಬಿಜೆಪಿ ಕೊನೇಘಳಿಗೆಯಲ್ಲಿ ಒಂದಾಗುತ್ತಾರೆ'
ಹಾಸನ: ಹಾಸನ ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಅನ್ನು ಸೋಲಿಸುವ ದುರುದ್ದೇಶದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕೊನೆ ಘಳಿಗೆಯಲ್ಲಿ ಒಂದಾಗುತ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನಗೆ ಗೊತ್ತಿದೆ. ಇತ್ತೀಚಿಗೆ ಹಾಸನ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಮತ್ತು ಸಚಿವ ರೋಷನ್ಬೇಗ್ ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಮನೆಗೆ ಭೇಟಿ ನೀಡಿ, ರಹಸ್ಯ ಸಭೆ ನಡೆಸಿದ್ದನ್ನು ಪ್ರಸ್ತಾಪಿಸಿದರು.
ಹಾಸನ ಒಂದೇ ಅಲ್ಲ, ರಾಜ್ಯಾದ್ಯಂತ ಇಂಥ ಒಂದಾಗುವ ಕುತಂತ್ರ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದ ಗೌಡರು, ಯಾರು ಹಿತ ಅನ್ನೋದನ್ನು ಜನ ತೀರ್ಮಾನ ಮಾಡಲಿದ್ದಾರೆ ಎಂದರು.
ಧನಂಜಯ್ ಕುಮಾರ್ ಅವರು ಬಂದಿದ್ರು, ಅವರು ಯಾವುದೇ ಷರತ್ತುಗಳಿಲ್ಲದೆ ಬಂದರೆ ಬರಬಹುದು ಅಂದಿದ್ದೆ. ಅವರು ಯಾವುದೇ ಷರತ್ತುಗಳಿಲ್ಲದೆ ಜೆಡಿಎಸ್ಗೆ ಬಂದಿದ್ದಾರೆ. ಇನ್ನು ಜಾಫರ್ ಷರೀಫ್ ಅವರು ಪಕ್ಷಕ್ಕೆ ಬರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

