ಸವರ್ಣೀಯರ ಸೇರ್ಪಡೆಗೆ ವಿರೋಧ
ಹಾಸನ: ಪರಿಶಿಷ್ಟರ ಪಟ್ಟಿಯಲ್ಲಿ ಈ ಮೊದಲು ಮತ್ತು ಈಗ ಸೇರ್ಪಡೆಗೊಳಿಸಿರುವ ಹಿಂದುಳಿದ ಜಾತಿಗಳನ್ನು ಈ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಆವರಣದಲ್ಲಿ ಧರಣಿ ನಡೆಸಿದ ಅವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು. ದೇಶದ ಸಂವಿಧಾನಾತ್ಮಕವಾಗಿ ಅಸ್ಪೃಶ್ಯ ಜಾತಿಗಳಿಗೆ ಮೀಸಲಾತಿ ನೀಡುವ ಸಲುವಾಗಿ ಕೆಲವು ಮಾನದಂಡಗಳನ್ನು ನಿಗಿದಪಡಿಸಲಾಗಿದೆ. ರಾಜ್ಯದ ಎಸ್ಸಿ, ಎಸ್ಟಿಗಳ ಮೂಲ ಪಟ್ಟಿ ಎಂದರೆ 1911ರ ಜಾತಿ ಆಧಾರಿತ ಜನಗಣತಿಯಲ್ಲಿ ಅಸ್ಪೃಶ್ಯರನ್ನು ಗುರುತಿಸಲು 10 ನಿಬಂಧನೆಗೊಳಿಸಿದೆ. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು, ಬ್ರಾಹ್ಮಣ ಅಥವಾ ಇತರೆ ಹಿಂದು ಗುರುಗಳಿಂದ ಮಂತ್ರವನ್ನು ಸ್ವೀಕರಿಸಿದವರು, ವೇದಗಳ ಪ್ರಮಾಣವನ್ನು ನಿರಾಕರಿಸುವವರು, ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡುವವರು, ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯುವವರು, ಪ್ರಮುಖ ಹಿಂದು ದೇವತೆಗಳನ್ನು ಪೂಜೆ ಮಾಡುವವರು, ಹಿಂದೂ ದೇವಾಲಯಗಳಿಗೆ ಪ್ರವೇಶ ಇಲ್ಲದವರು, ಮಾಲಿನ್ಯ ಉಂಟು ಮಾಡುವವರು, ಸತ್ತವರನ್ನು ಹೂಳುವವರು, ಗೋವನ್ನು ಪೂಜಿಸದವರು ಮತ್ತು ಗೋವನ್ನು ತಿನ್ನುವವರು ಹೀಗೆ ಐತಿಹಾಸಿಕವಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ನಡವಳಿಕೆಗಳನ್ನು ಆಧರಿಸಿ ಅಸ್ಪೃಶ್ಯರನ್ನು ಗುರುತಿಸಲಾಗಿದೆ.
ಅಂಬೇಡ್ಕರ್ ಅವರು ಶೂದ್ರ ಜಾತಿಗಳು ಹಿಂದುಳಿದಿರುವ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹಿಂದುಳಿದ, ಅಲ್ಪಸಂಖ್ಯಾತರಿಗೆ ಶೇ. 27ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿದ್ದಾರೆ.
ಆಯೋಗದ ವಿರುದ್ಧ ಆಕ್ರೋಶ: ರಾಜ್ಯದಲ್ಲಿ ನ್ಯಾ. ಎಲ್.ಜಿ. ಹಾವನೂರು ಆಯೋಗವು ಸಂವಿಧಾನದ ಅನುಚ್ಛೇದ 340ರಂತೆ ಹಿಂದುಳಿದ ವರ್ಗಗಳನ್ನು ಗುರುತಿಸಲು ನೇಮಕಗೊಂಡ ಆಯೋಗವಾಗಿದ್ದು, ಇದು ಸಂವಿಧಾನದ ಬಾಹಿರವಾಗಿ ಪರಿಶಿಷ್ಟರ ಪಟ್ಟಿಗೆ ಕೆಲವು ಹಿಂದುಳಿದ ಜಾತಿಗೆ ಸಮಾನವಾದ ಸವರ್ಣೀಯ ಜಾತಿಗಳಾದ ಅಂದರೆ ಅಸ್ಪೃಶ್ಯರಲ್ಲದ ಜಾತಿಗಳನ್ನು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸಿ ನೈಜ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ದೇಶ ಸರಿಯಲ್ಲ: ಈ ಹಿಂದೆ ಭಾರತದ ಸಂವಿಧಾನ 340ರಂತೆ ನೇಮಕಗೊಂಡ ನ್ಯಾ ವೆಂಕಟಸ್ವಾಮಿ, ನ್ಯಾ. ಚಿನ್ನಪ್ಪರೆಡ್ಡಿಯವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಗುರುತಿಸದ ಹಿಂದುಳಿದ ಸವರ್ಣೀಯ ಜಾತಿಗಳಾದ ಬೆಸ್ತರು, ಮಡಿವಾಳ, ಉಪ್ಪಾರ, ಮೊಗೇರ, ಪರಿವಾರ, ಗೊಲ್ಲ ಮುಂತಾದ ಜಾತಿಗಳನ್ನು ಮತ್ತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಸೇರಿಸಲು ರಾಜ್ಯ ಸಂಪುಟದಲ್ಲಿ ನಿರ್ಣಯ ಕೈಗೊಂಡಿರುವುದು ಅಸ್ಪೃಶ್ಯ ಜಾತಿಗಳನ್ನು ಸರ್ವನಾಶ ಮಾಡುವ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಆನಂದ್, ಜಿಲ್ಲಾ ಸಂಘಟನ ಸಂಚಾಲಕರಾದ ಮೊಕಳಿ ಪುಟ್ಟರಾಜು, ಎಂ.ಸೋಮಶೇಖರ್, ಬಾಲರಾಜ್, ಉಮೇಶ್, ಜಗದೀಶ್, ಶಿವಣ್ಣ, ಕುಮಾರ್, ಚಿನ್ನಸ್ವಾಮಿ, ಸೋಮಶೇಖರ್, ಗೋವಿಂದರಾಜು, ರಂಗನಾಥ್ಹಾಗೂ ಇತರರು ಇದ್ದರು.
ಸಿದ್ದರಾಮಯ್ಯ ವಿರುದ್ಧ ಆಕ್ರೋಶ
ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ದಸಂಸ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಅಹಿಂದ ಜನರನ್ನು ಸಂಘಟಿಸಿ ಮುಖ್ಯಮಂತ್ರಿಯಾದರು. ಆದರೆ ಮುಖ್ಯಮಂತ್ರಿಯಾದ ನಂತರ, ದಲಿತರನ್ನು ದೂರೀಕರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಆಸೆ ತೋರಿಸಿ, ಅಧಿಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಈ ಮೂಲಕ ದಲಿತರ ಅನ್ನಕ್ಕೆ ಕನ್ನ ಹಾಕಲು ಯತ್ನಿಸಿರುವ ಕ್ರಮ ಖಂಡನೀಯವಾಗಿದೆ. ದಲಿತ- ಹಿಂದುಳಿದ- ಅಲ್ಪಸಂಖ್ಯಾತರ ಐಕ್ಯತೆಗೆ ಧಕ್ಕೆಯುಂಟು ಮಾಡುವ ಸಿದ್ದರಾಮಯ್ಯನವರ ಜಾತಿವಾದಿ ಧೋರಣೆ ಖಂಡನೀಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

