20 ನಿಮಿಷ 20 ಸುದ್ದಿ
ಹೊಳೆನರಸೀಪುರ: ಮುಂಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಳೆನರಸೀಪುರದ ತಾಲೂಕು ಕಚೇರಿಯಲ್ಲಿ ಚುನಾವಣೆ ಪ್ರಯುಕ್ತ ಕಂಟ್ರೋಲ್ ರೂಮನ್ನು ಮಾ. 12ರಿಂದ ತೆರೆಯಲಾಗಿದ್ದು, ದಿನದ 24 ಗಂಟೆಯೂ ಕೆಲಸ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಚುನಾವಣೆಯ ಸಂಬಂಧಿತವಾಗಿ ಈ ಕಂಟ್ರೋಲ್ ರೂಮ್ನಿಂದ ಮಾಹಿತಿಯನ್ನು ಪಡೆಯಬಹುದಾಗಿದ್ದು, ಕಂಟ್ರೋಲ್ ಕೊಠಡಿಯ ದೂರವಾಣಿ ಸಂಖ್ಯೆ 08175-274111, 08175-272050. ಸಹಾಯಕ ಚುನಾವಣಾಧಿಕಾರಿಗಳ ಮೊಬೈಲಲ್ಸಂಖ್ಯೆ- 9342814076, ತಹಸೀಲ್ದಾರ್ ಮೊಬೈಲ್ ಸಂಖ್ಯೆ- 9480035225. ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ- 08175-273261. ತಾಲೂಕು ಕಚೇರಿಯಲ್ಲಿನ ಚುನಾವಣಾ ಶಾಖೆಯ ದೂರವಾಣಿ ಸಂಖ್ಯೆ- 08175-272111.
ಚುನಾವಣೆಗೆ ಅಗತ್ಯ ಸಿದ್ಧತೆ ತಹಸೀಲ್ದಾರ್ ನಟರಾಜ್
ಅರಸೀಕೆರೆ: ಮುಂಬರುವ ಲೋಕಸಭಾ ಚುನಾವಣೆಗಾಗಿ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ನಟರಾಜ್ ತಿಳಿದರು.ತಾಲ್ಲೂಕು ಕಚೇರಿಯಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ 275 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಆ ಪೈಕಿ 50 ಸೂಕ್ಷ್ಮ, 51 ಅತಿ ಸೂಕ್ಷ್ಮ, 14 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇನ್ನುಳಿದಂತೆ 160 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದರು. ಬಾಣಾವರ ಹೋಬಳಿ ವ್ಯಾಪ್ತಿಯಲ್ಲಿ ಕೆಂಪಚೌಡಪ್ಪ, ಕಸಬಾ ಹೋಬಳಿಗೆ ಕೆ.ಎಂ.ವಿಜಯಕುಮಾರ್, ಕಣಕಟ್ಟೆಗೆ ಸತ್ಯನಾರಾಯಣ, ಜಾವಗಲ್ ಹೋಬಳಿಗೆ ಚಂದ್ರಶೇಖರ್, ಗಂಡಸಿಗೆ ಪ್ರಕಾಶ್ ಮೂರ್ತಿ ಅವರನ್ನು ವಿಚಕ್ಷಣಾ ದಳ ಸದಸ್ಯರನ್ನಾಗಿ ನಿಯೋಜಿಸಲಾಗಿದೆ ಎಂದರು. ಅಲ್ಲದೇ, ದೂರುಗಳಿಗಾಗಿ, 9448999223, 9844844989, 9844454295.
ಸಾಯಿ ಸೇವಾ ಸಮಿತಿಯಿಂದ ಕಾವಲು ಸೇವೆಗೆ ಆಹ್ವಾನ
ಹಾಸನ: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಇರುವ ಭಗವಾನ್ ಶ್ರೀ ಸತ್ಯಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸತ್ಯಸಾಯಿ ಬೃಂದಾವನ ಆಶ್ರಯದಲ್ಲಿ ಮಾ. 16 ರಿಂದ ಒಂದು ವಾರ ಕಾಲ ಕಾವಲುಪಡೆ ಸೇವೆಯನ್ನು ಮಾಡಲು ಇಚ್ಛಿಸುವ ಪುರುಷ, ಮಹಿಳೆಯರು ಆಗಮಿಸಬಹುದು ಎಂದು ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿ ಕೋರಿದೆ.
ಈ ಆಸ್ಪತ್ರೆಯಲ್ಲಿ ಹೃದಯರೋಗ ಹಾಗೂ ನರರೋಗಗಳಿಗೆ ಸಂಪೂರ್ಣ ಉಚಿತ ತಪಾಸಣೆ ಜೊತೆಗೆ ಉಚಿತ ಶಸ್ತ್ರ ಚಕಿತ್ಸೆ ನೀಡುವ ಈ ಆಸ್ಪತ್ರೆಗೆ ಸೇವೆ ಮಾಡಲು ಸ್ವ ಇಚ್ಛೆಯಿಂದ ಬರುವವರಿಗೆ (ಆರ್ಥಿಕವಾಗಿ ಹಿಂದುಳಿದ) ಉಚಿತ ಬಸ್ ಪ್ರಯಾಣ ಭತ್ಯೆ ಹಾಗೂ ಉಚಿತ ಬಿಳಿ ಸಮವಸ್ತ್ರ ನೀಡಲಾಗುವುದು ಎಂದು ಹೊಳೆನರಸೀಪುರ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಮುಖಂಡ ಮಹೇಶ್ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಮೊ. 9008968034 ಸಂಪರ್ಕಿಸಲು ಕೋರಲಾಗಿದೆ.
ಅನ್ವೇಷಣಾತ್ಮಕ...
ಹಾಸನ ನಗರದ ಸರ್ಕಾರಿ ಕಲಾ ಕಾಲೇಜು, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅನ್ವೇಷಣಾತ್ಮಕ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ 10 ರ್ಯಾಂಕ್ ಒಳಗೆ 8 ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ರಕ್ತದಾನಿಗಳು ಜೀವ ಉಳಿಸಬಹುದು: ಪದ್ಮ ಪ್ರಸಾದ್
ಹಾಸನ: ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂರು ವ್ಯಕ್ತಿಗಳ ಜೀವ ಉಳಿದಂತಾಗುತ್ತದೆ ಎಂದು ನಗರದ ವೈದ್ಯ ಡಾ. ಪದ್ಮಪ್ರಸಾದ್ ಅಭಿಪ್ರಾಯಪಟ್ಟರು. ಅವರು ನಗರದ ರಾಜೀವ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಹಾಸನ ರಕ್ತನಿಧಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜೀವ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹೆಡ್ಸಿ ನೂತನಕುಮಾರಿ ಮಾತನಾಡಿ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ವಿದ್ಯಾರ್ಥಿಗಳು ರಕ್ತದಾನ ಮಾಡಲು ಮುಂದೆ ಮಾದರಿ ಎಂದರು. ರಕ್ತದಾನ ಶಿಬಿರದ ಸಂಯೋಜಕ ಡಾ. ಎಸ್. ಎ. ನಿತೀನ್, ರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಹೊಳೆನರಸೀಪುರ ಕಾಲೇಜಿಗೆ ಪಾರಿತೋಷಶಕ
ಹೊಳೆನರಸೀಪುರ: ಕರ್ನಾಟಕ ಸರ್ಕಾರವು ಮೈಸೂರು ವಿಶ್ವವಿದ್ಯಾನಿಲಯದ 4ಜಿಲ್ಲೆಗಳ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳಿಗೆ ಅರಸೀಕೆರೆಯಲ್ಲಿನ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ನಲ್ಲಿ ಮಾ. 2ರಿಂದ ಮಾ. 8ರವರೆಗೆ ಹಮ್ಮಿಕೊಳ್ಳಲಾಗಿದ್ದ 39ನೇ ಅಂತರ ಕಾಲೇಜು ವಾರ್ಷಿಕ ವಿಶೇಷ ಶಿಬಿರದಲ್ಲಿ ನೀಡಲಾಗುವ ಪ್ರಶಸ್ತಿಯಲ್ಲಿ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೃತೀಯ ಪರ್ಯಾಯ ಪಾರಿತೋಷಕ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಇರ್ಷಾದ್ ತಿಳಿಸಿದ್ದಾರೆ. ಈ 39ನೇ ಅಂತರ ಕಾಲೇಜು ವಾರ್ಷಿಕ ವಿಶೇಷ ಶಿಬಿರದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಎಚ್.ಟಿ. ರಾಜೇಶ್ವರಿ, ಬಿ.ಕೆ. ಮಧು, ಬಿ.ಕೆ.ಅನಿಲ್ ಹಾಗೂ ವೈ.ಡಿ. ಸುಧಾರಾಣಿ ಭಾಗವಹಿಸಿ ತೃತೀಯ ಪಾರಿತೋಷಕವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಅವರು ತಿಳಿಸಿದರು.
ಇಂದು ಬೇಲೂರು ವೀರಭದ್ರೇಶ್ವರಸ್ವಾಮಿ ಜಾತ್ರೆ
ಬೇಲೂರು: ತಾಲೂಕಿನ ಗಡಿ ಭಾಗದಲ್ಲಿರುವ ಭದ್ರಕಾಳಿ ಬನದ ವೀರಭದ್ರೇಶ್ವಸ್ವಾಮಿಯ 17 ನೇ ವರ್ಷದ ಜಾತ್ರಾ ಮಹೋತ್ಸವ ಮಾ. 16ರಂದು ನಡೆಯಲಿದೆ ಎಂದು ಭದ್ರಕಾಳಿ ಬನದ ಕಾರ್ಯನಿರ್ವಾಹಕ ಟ್ರಸ್ಟಿ ಬಿ. ಶಿವರುದ್ರಪ್ಪ ತಿಳಿಸಿದರು.
ಮಾ. 16ರಂದು ವೀರಗಾಸೆ ನೃತ್ಯ, ನಂದಿ ಕೋಲು ಕುಣಿತ ಹಾಗೂ ಪೂರ್ಣಕುಂಬ ಉತ್ಸವದೊಂದಿಗೆ ಶ್ರೀ ವೀರಭದ್ರೆಶ್ವರಸ್ವಾಮಿ ದಿವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ತಿಳಿಸಿದರು.
ಬೇಲೂರಿನಿಂದ 17 ಕಿ.ಮೀ ಮತ್ತು ಹಳೇಬೀಡಿನಿಂದ 20 ಕಿ.ಮೀ. ಚಿಕ್ಕಮಗಳೂರಿನಿಂದ 18 ಕಿ.ಮೀ ದೂರದಲ್ಲಿ ಇರುವ ಭದ್ರಕಾಳಿ ಬನವು 8ನೇ ಶತಮಾನದ್ದೆಂದು ಇಲ್ಲಿನ ಶಿಲಾ ಶಾಸನಗಳು ಹೇಳುತ್ತವೆ.
ಜಿಲ್ಲೆಯಲ್ಲಿ 7800 ಏಡ್ಸ್ ರೋಗಿಗಳು: ರವಿಕುಮಾರ್
ಬೇಲೂರು: ಅಂಕಿ- ಅಂಶಗಳ ಪ್ರಕಾರ ಕರ್ನಾಟಕ ಏಡ್ಸ್ ರೋಗದಲ್ಲಿ ಐದನೆ ಸ್ಥಾನದಲ್ಲಿದೆ. ಅದರಂತೆ ಹಾಸನ ಜಿಲ್ಲೆ ಹತ್ತನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ 7800 ಏಡ್ಸ್ ರೋಗಿಗಳಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕ ರವಿಕುಮಾರ್ ಹೇಳಿದರು. ಪಟ್ಟಣದ ಶಾಂತಲ ಮಹಿಳಾ ಪ್ರಥಮ ದರ್ಜೆ ಕಾಲೇಜ್ನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ ಏಡ್ಸ್ ಜಾಗೃತಿ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಪತ್ರಕರ್ತ ಡಿ.ಬಿ. ಮೋಹನ್ ಕುಮಾರ್ ಮಾತನಾಡಿ, ಏಡ್ಸ್ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ ಉತ್ತಮ ಜೀವನ ಸಾಗಿಸಲು ಎಲ್ಲರೂ ಮುಂದಾಗಬೇಕು ಎಂದರು. ಶಾಂತಲ ಕಾಲೇಜ್ನ ಪ್ರಾಂಶುಪಾಲೆ ಶಿವಕುಮಾರ್. ಕಾರ್ಯಕ್ರಮದಲ್ಲಿ ಜೀವ ರಕ್ತ ನಿಧಿ ವ್ಯವಸ್ಥಾಪಕ ಮೋಹನ್, ಉಪನ್ಯಾಸಕರಾದ ವಿಜಯ ಕುಮಾರ್, ರಾಕೇಶ್, ನಾಗೇಶ್ವರ್, ಶಾಂತಲ ಸಂಸ್ಥೆ ಕಾರ್ಯದರ್ಶಿ ಮಂಜೇಗಾಡ ಇದ್ದರು.
ಸೌರಶಕ್ತಿ ಕುರಿತಂತೆ ರೈತರಿಗೆ 31ರಂದು ಕಾರ್ಯಾಗಾರ
ಹಾಸನ: ಬೆಂಗಳೂರಿನ ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ದಶಮಾನೋತ್ಸವ ಸಂಭ್ರಮದ ನಿಮಿತ್ತ ಮಾ. 31 ರಂದು ರೈತ ಬಂಧುಗಳಿಗೆ ಒಂದು ದಿನದ ಅರ್ಥಪೂರ್ಣ ಕಾರ್ಯಾಗಾರವನ್ನು ನಾಗತಿಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಕೃಷಿಯಲ್ಲಿ ಸೌರಶಕ್ತಿಯನ್ನು ಬಳಸುವ ವಿಧಾನ ಮತ್ತು ಕೃಷಿಯಲ್ಲಿ ಲಾಭ ಗಳಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಪರಿಣಿತ ತಜ್ಞರು ಮತ್ತು ಅನುಭವಿ ಕೃಷಿಕರಿಂದ ಪ್ರಾತ್ಯಕ್ಷಿತೆ, ಉಪನ್ಯಾಸ ಮತ್ತು ಚರ್ಚೆ ಏರ್ಪಡಿಸಲಾಗಿದೆ.
ಆಸಕ್ತ ರೈತರು ಚಂದ್ರಶೇಖರ, ಸಂಚಾಲಕರು, ನಾಗತಿಹಳ್ಳಿ ಸಂಸ್ಕೃತಿ ಹಬ್ಬ- 2014,ನಂ.166, 28ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070, ಮೊ.9740092323 ಇಲ್ಲಿ ಸಂಪರ್ಕಿಸಬಹುದು.
ಇಂದು ಭಾರತೀಯ ಸಂಕಲ್ಪ ಯಾತ್ರೆ
ಸಕಲೇಶಪುರ: ಪಕ್ಷ ಸಂಘಟನೆಯ ದೃಷ್ಟಿಯಿಂದ ಭಾರತೀಯ ಸಂಕಲ್ಪ ಯಾತ್ರೆಯನ್ನು ಮಾ. 16ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆಯಂತೆ ತಾಲೂಕಿನ ಜೆ.ಪಿ. ನಗರದಿಂದ ಸಕಲೇಶಪುರ ಪಟ್ಟಣದವರೆಗಿನ 15 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಯುಪಿಎ ಸರ್ಕಾರದ 10 ವರ್ಷದ ಸಾಧನೆ, ರಾಜ್ಯ ಸರಕಾರದ ಭ್ರಷ್ಟಾಚಾರ ರಹಿತ ಆಡಳಿತವನ್ನು ಮತದಾರರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕೆಪಿಸಿಸಿ ಸದಸ್ಯ ವೈ.ಪಿ ರಾಜೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಸಕ್ಪಾಲ್, ಬಾಗರವಳ್ಳಿ ಲಿಂಗಪ್ಪ,ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಕಿರಣ್ ಇದ್ದರು.
ಯುವ ಸೌರಭ...
ಹಾಸನ ನಗರದ ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದ ರಂಗವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಭರತನಾಟ್ಯ ಕುರಿತಂತೆ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉದಯರವಿ, ಬಿ.ಎನ್. ರಾಮಸ್ವಾಮಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಇತರರು ಇದ್ದರು.
'ವಿದ್ಯೆಯ ಬಗ್ಗೆ ಆಸಕ್ತಿ ವಹಿಸಿದರೆ ಭವಿಷ್ಯ ಉಜ್ವಲ'
ಅರಸೀಕೆರೆ: ಚಿಕ್ಕ ವಯಸ್ಸಿನಲ್ಲೇ ವಿದ್ಯೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಅಭ್ಯಾಸದಲ್ಲಿ ತೊಡಗಿದರೆ ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಎನ್. ದುರ್ಗಪ್ಪಶೆಟ್ಟಿ ಅಭಿಪ್ರಾಯಪಟ್ಟರು. ಪಟ್ಟಣದ ಕನ್ನಿಕಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಪೋಷಕರೇ ದೂರದರ್ಶನ ಮಾಧ್ಯಮಕ್ಕೆ ಮಾರುಹೋಗಿ ತಮ್ಮೊಂದಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಉಂಟುಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು. ಬಿಜೆಪಿ ಮುಖಂಡ ವಿಜಯ್ ವಿಕ್ರಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ನೆಲದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು. ಸಮಾರಂಭದಲ್ಲಿ ನಿರ್ದೇಶಕರಾದ ಜಯರಾಂ, ಶ್ರೀಧರಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ರುಕ್ಮಿಣಿಯಮ್ಮ, ಅನುಪಮಾ, ದಿವಾಕರ್, ಗಿರೀಶ್ ಇತರರು ಇದ್ದರು.
'ಸಮಸ್ಯೆಗಳ ಪರಿಹಾರ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ'
ಸಕಲೇಶಪುರ: ಸಮಸ್ಯೆಗಳ ಪರಿಹಾರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ನ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಅಧ್ಯಕ್ಷ ಹಾನುಬಾಳ್ ಭಾಸ್ಕರ್ ಹೇಳಿದರು.
ಗುರುವಾರ ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜೀವ್ಗಾಂಧಿ ಸೇವಾ ಘಟಕ ಮತ್ತು ಲೋಕಸಭಾ ಪ್ರಚಾರ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಟ್ಪಿ ಕಾಂತರಾಜ್, ಕೆ ಬಿ ಚಂದ್ರು, ಬಿ ಎ ರೆಹಮತ್ ಉಲ್ಲಾ, ತುಳಸಿ ಪ್ರಸಾದ್, ಡಿ ಸಿ ಸಣ್ಣಸ್ವಾಮಿ, ಮಾಗೇರಿ ರಾಜು, ಭಾಸ್ಕರ್ ಶೆಟ್ಟಿ, ದಿವಾನ್ ಗೌಡ, ದುಲ್ರಾಜ್ ಜೈನ್, ಹುರುಡಿ ಅರುಣ್, ಈಶ್ವರ್ ಆಳ್ವ, ದೊಡ್ಡೀರಯ್ಯ, ರಾಜಶೇಖರ್ ಶೆಟ್ಟಿ, ಸಯ್ಯದ್ ಮುಫೀಜ್, ಕುಮಾರಸ್ವಾಮಿ, ಬಿ.ಕೆ. ಮಹೇಶ, ಮನ್ಸೂರ್ ಅಬ್ದುಲ್ರಬ್, ಸುಂದರಮ್ಮ, ಶೋಭ, ಸುನೀತ ಇತರರು ಇದ್ದರು.
ಇಂದು ಚುಂಚನಗಿರಿ ಮಠದಲ್ಲಿ ಹುಣ್ಣಿಮೆ ಉಪನ್ಯಾಸ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಮಾ. 16ರಂದು ಸಂಜೆ 6.30ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥಯಾಗ ಮಂಟಪದಲ್ಲಿ ನಡೆಯಲಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಹಾಸ್ಯ ಕವಯತ್ರಿ ರಾಜೇಶ್ವರಿ ಉಲ್ಲೇನಹಳ್ಳಿ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ರಾಜೇಶ್ವರಿ ಉಲ್ಲೇನಹಳ್ಳಿ ಅವರು ಧರ್ಮ ಮತ್ತು ಮಹಿಳೆ ವಿಷಯ ಕುರಿತು ಉಪನ ್ಯಾಸ ನೀಡುವರು. ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಪಾವನ ಸಾನಿಧ್ಯ ವಹಿಸುವರು. ಹಾಸನದ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ, ಶ್ರೀ ಶುಕ್ತಿ ಯೋಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಡುವರು. ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಕೋರಿದ್ದಾರೆ.
ಹಾಸನ ತಾಪಂ ಅಧ್ಯಕ್ಷರಾಗಿ ಕಾಮಾಕ್ಷಿ ಅವಿರೋಧ ಆಯೆ
ಹಾಸನ: ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಾಂತಿಗ್ರಾಮ ಕ್ಷೇತ್ರದ ಕಾಮಾಕ್ಷಿ ಅಣ್ಣಪ್ಪಕುಮಾರ್, ನಾಲ್ಕು ತಿಂಗಳ ಅವಧಿಗೆ ಅವಿರೋಧವಾಗಿ ಶನಿವಾರ ಆಯ್ಕೆಗೊಂಡಿದ್ದಾರೆ.
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯಿ ನಡೆಯಿತು. ಅಧ್ಯಕ್ಷರ ಸ್ಥಾನಕ್ಕೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಕಾಮಾಕ್ಷಿ ಅಣ್ಣಪ್ಪಕುಮಾರ್ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಎಸಿ ಶರತ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾಮಾಕ್ಷಿ ಅಣ್ಣಪ್ಪಕುಮಾರ್, ಜೆಡಿಎಸ್ ಧುರೀಣ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಶಾಸಕ ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ ಹಾಗೂ ಜಿಪಂ, ತಾಪಂ ಸದ್ಯರಿಗೆ ಧನ್ಯವಾದ ಸಲ್ಲಿಸಿದರು.
ಉನ್ನತ ಶಿಕ್ಷಣದಿಂದ ಮಹಿಳೆಯರ ಸಬಲೀಕರಣ: ಪ್ರಾಧ್ಯಾಪಕಿ ಸ್ಮಿತಾ
ಅರಕಲಗೂಡು: ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಸಮರ್ಥ ಪಾತ್ರ ವಹಿಸುತ್ತಾ ಬಂದಿದ್ದು, ಕುಟುಂಬ ನಿರ್ವಹಣೆಯಲ್ಲಿ ಆರ್ಥಿಕ ಸಮತೋಲನ ಕಾಯುವಲ್ಲಿ ಅವಳ ಕೊಡುಗೆ ಅಪಾರವಾದುದು ಎಂದು ಪ್ರಾಧ್ಯಾಪಕಿ ಸ್ಮಿತಾ ತಿಳಿಸಿದ್ದಾರೆ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ನಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಅಂದು- ಇಂದು ಎಂಬ ವಿಚಾರದ ಮೇಲೆ ಅವರು ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದರಿಂದ ಸಬಲೀಕರಣ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಮಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗಾನಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ವಾಸವಾಂಭ. ಜೆ.ಗುಪ್ತ ನೆರವೇರಿಸಿದರು.
ಅರಕಲಗೂಡಿನಲ್ಲಿ ಇಂದು ಅತಿರುದ್ರ ಮಹಾಯಾಗ
ಅರಕಲಗೂಡು: ಕಳೆದ 11 ದಿನಗಳಿಂದ ನಡೆದಿರುವ ಲೋಕಕಲ್ಯಾಣಾರ್ಥವಾಗಿ ನಡೆದಿರುವ ಅತಿರುದ್ರಮಹಾಯಾಗದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳಿಗೆ ಇದೇ ಮಾ. 16ರ ಭಾನುವಾರ ಮಧ್ಯಾಹ್ನ ಸಮಾಪ್ತಗೊಳ್ಳಲಿದೆ. ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಶ್ರೀ ಕ್ಷೇತ್ರ ರಾಮನಾಥಪುರದ ಕಾವೇರಿ ತಟದ ಶ್ರೀ ರಾಮೇಶ್ವರ ದೇವಾಲಯದ ಪಕ್ಕದಲ್ಲೇ ನಿರ್ಮಿಸಿರುವ ಬೃಹತ್ ತ್ಯಾಗ ಮಂಟಪದಲ್ಲಿ ಧಾರ್ಮಿಕ ಕಾರ್ಯಗಳು ಮಾ. 5ರಿಂದಲೇ ಜರುಗುತ್ತಿವೆ. ಅತಿರುದ್ರ ಮಹಾಯಾಗದ ಉದ್ಘಾಟನೆಯನ್ನು ಬೆಲಗೂರಿನ ಶ್ರೀ ಬಿಂಧುಮಾದವ ಶರ್ಮ ಉದ್ಘಾಟಿಸಿದರು. ಅಂದಿನಿಂದ ಇಂದಿನವರೆಗೆ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಮೈಸೂರು ಪರಕಾಲ ಮಠದ ಶ್ರೀ ಅಭಿನವ ವಾಗೀಶರು ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಂಡಿದ್ದಾರೆ. ಅಂದಿನಿಂದ ಮಹಾಗಣಪತಿ ಮಂತ್ರಜಪ ಮತ್ತ ಗಣಪತಿ ಹೋಮ, ಸುಬ್ರಹ್ಮಣ್ಯ ಹೋಮ, ನವಗ್ರಹ ಹೋಮ, ವಿಷ್ಣು ಸಹಸ್ರನಾಮ ಹೋಮ ಇತ್ಯಾದಿ ಪೂಜಾ ಕೈಂಕರ್ಯ ನಡೆದಿವೆ. ಭಾನುವಾರ ಅತಿರುದ್ರ ಮಹಾಯಾಗ ಜರುಗಲಿದೆ.
ಮಹಿಳಾ ದಿನಾಚರಣೆ...
ಹಾಸನ ನಗರದ ಎಲೈಟ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶರ್ಮ ರಚಿತ ಗರ್ಭಿಣಿ ಹಾಗೂ ಬಾಣಂತಿಯರ ವಿಶೇಷ ಪಾಕ ವೈವಿಧ್ಯ ಪುಸ್ತಕವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಡಾ.ವೈ..ಎಸ್. ವೀರಭದ್ರಪ್ಪ ಬಿಡುಗಡೆಗೊಳಿಸಿದರು.
ಟ್ಯಾಂಕರ್- ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು
ಬೇಲೂರು: ಇನೋವ ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಕಾರ್ಜುನಪುರದ ಸಮೀಪ ಶುಕ್ರವಾರ ನಡೆದಿದೆ. ಬೆಂಗಳೂರಿನ ಚಂದ್ರ ಲೇಔಟ್ನ ಪವರ್ ಕಾರ್ಪೊರೇಶನ್ ಇಂಜಿನಿಯರ್ ಚಂದ್ರಪ್ಪ ಅವರ ಪತ್ನಿ ಹಾಗೂ ಪುತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯವರಾದ ಚಂದ್ರಪ್ಪ ಬೆಂಗಳೂರಿನ ಚಂದ್ರಾಲೇಔಟ್ನ ಪವರ್ ಕಾರ್ಪೊರೇಷನ್ನಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಮೊಮ್ಮಗ ರಕ್ಷಿತ್ಗೆ ಅಕ್ಷರಭ್ಯಾಸ ಮಾಡಿಸುವ ಉದ್ದೇಶದಿಂದ ಶೃಂಗೇರಿಗೆ ತೆರಳಿ, ವಾಪಸ್ ಬರುವಾಗ, ಬೇಲೂರಿಗೆ ಬಂದು ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು.ಈ ಸಂದರ್ಭದಲ್ಲಿ ಅಫಘಾತ ಸಂಭವಿಸಿದ್ದು, ಚಂದ್ರಪ್ಪ ಅವರ ಪತ್ನಿ ಹಾಗೂ ಪುತ್ರಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಾರಿನಲ್ಲಿದ್ದ ಚಂದ್ರಪ್ಪ, ಅಳಿಯ ಪ್ರಶಾಂತ್ ಹಾಗೂ ಮೂರು ವರ್ಷದ ರಕ್ಷಿತ್ ಸಣ್ಣ ಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

