ಹಾಸನ

ಪೆಟ್ರೋಲ್ ಟ್ಯಾಂಕರ್‌ಗೆ ಲಾರಿ ಡಿಕ್ಕಿ; ಅಪಾರ ಇಂಧನ ನಷ್ಟ

Published On :

ಹಾಸನ: ಪೆಟ್ರೋಲ್ ಟ್ಯಾಂಕರ್‌ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿ ಅಪಾರ ನಷ್ಟ ಉಂಟಾದ ಘಟನೆ ಶನಿವಾರ ನಡೆದಿದೆ. ಟ್ಯಾಂಕರ್ ಲಾರಿ ಮಂಗಳೂರಿನಿಂದ ಹಾಸನ ಮಾರ್ಗವಾಗಿ ತಾಲೂಕಿನ ಕಂದಲಿ ಸಮೀಪ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ, ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಸುಮಾರು 4500 ಲೀಟರ್ ಪೆಟ್ರೋಲ್ ಸೋರಿಕೆಯಾಗಿದೆ. ಸೋರಿಕೆಯಾಗುತ್ತಿದ್ದ ಪೆಟ್ರೋಲನ್ನು ಸುತ್ತಲಿನ ಗ್ರಾಮಸ್ಥರು ಕ್ಯಾನ್, ಬಕೆಟ್, ಕೊಡಗಳಲ್ಲಿ ತುಂಬಿಕೊಂಡು ಹೋದ ಪರಿಣಾಮ ಪೊಲೀಸರು, ಅಗ್ನಿಶಾಮಕದಳದವರು ಬರುವಷ್ಟರಲ್ಲಿ ಪೆಟ್ರೋಲ್ ಖಾಲಿಯಾಗಿತ್ತು

ಅಕ್ರಮ ಮದ್ಯ ಮಾರಾಟ, ಮಹಿಳೆಯರ ಪ್ರತಿಭಟನೆ
ಬೇಲೂರು: ತಾಲೂಕಿನ ಕೋನೇರ್ಲು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಸ್ವಸಹಾಯ ಸಂಘದ ಮಹಿಳೆಯರು ಇತ್ತೀಚೆಗೆ  ಅಬಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಸ್ವಸಹಾಯ ಸಂಘದ ಮಧುರಾ, ಗ್ರಾಮದ ಸಮೀಪವೇ ಅಕ್ರಮವಾಗಿ ಮದ್ಯ, ಕಳ್ಳಭಟ್ಟಿ ಮಾರಾಟ ಮಾಡಲಾಗುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಸ್ವಸಹಾಯಕಿ ಆಶಾ ಮಾತನಾಡಿ, ಗಂಡಸರು ಹೆಂಡದ ಗುಲಾಮರಾಗಿದ್ದು, ಗೃಹಿಣಿಯರು ಕೂಲಿ ಮಾಡಿ ಮನೆ ನೋಡಿಕೊಳ್ಳುವ ಸ್ಥಿತಿ ಬಂದಿದೆ. ಇಂಥ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದರು.ಮಹಿಳೆಯರ ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಉಪನಿರೀಕ್ಷಕ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸೀಮೆಎಣ್ಣೆ ಸ್ಟ ವ್ ಸಿಡಿದು ಬಾಲಕಿಗೆ ಗಾಯ
ಹಾಸನ: ಸೀಮೆಎಣ್ಣೆ ಸ್ಟೌವ್ ಸಿಡಿದು ಬಾಲಕಿಯೊಬ್ಬಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ನಗರದ ಹುಣಸಿನಕೆರೆ ಸ್ಲಂ ಬೋರ್ಡ್‌ನ ವಾಸಿ ರವಿ ಎಂಬವರ ಪುತ್ರಿ ಸೌಮ್ಯ (15) ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೌಮ್ಯ ಬೆಳಿಗ್ಗೆ ಸೀಮೆಎಣ್ಣೆ ಸ್ಟೌವ್‌ನ ಪಂಪ್ ಹೊಡೆಯುವಾಗ ಬೆಂಕಿ ಮುಖಕ್ಕೆ ಸಿಡಿದು ತ್ರೀವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೂನಿಯರ್ ಎಂಜಿನಿಯರ್ ಹುದ್ದೆಗಾಗಿ ಅರ್ಜಿ ಆಹ್ವಾನ
ಹಾಸನ: ಕೇಂದ್ರ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗದ ವತಿಯಿಂದ ಜೂನಿಯರ್ ಇಂಜಿನಿಯರ್ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯಿಂಗ್ ಮತ್ತು ಕಾಂಟ್ರಾಕ್ಟ್ ಸೇರಿದಂತೆ ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೂರು ವರ್ಷಗಳ ಡಿಪ್ಲೊಮೊ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 18- 27 ವರ್ಷಗಳು (ಪರಿಶಿಷ್ಟ ಜಾತಿ, ಪಂಗಡದವರಿಗೆ 5 ವರ್ಷ, ಓಬಿಸಿ- 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋವುತಿಯಲ್ಲಿ ರಿಯಾಯಿತಿ ಇರುತ್ತದೆ)  ಆಗಿರಬೇಕು. ಅರ್ಜಿ ಸಲ್ಲಿಸಲು ಮಾ. 28 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಡಿಡಿಠ:ಡಡ್ಛ್ಞ್ಞ್ಠ.್ಞಛ್ಠ.ಟ್ಝ್ಛಿ.್ಝಟಿ ಅಥವಾ ಡಿಡಿಠ:ಡಡ್ಛ.ಟ್ಝ್ಛಿ.್ಝಟಿ ಸಂಪರ್ಕಿಸಬಹುದು. ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ರವರನ್ನು ಖುದ್ದಾಗಿ ಭೇಟಿ ಮಾಡಿ ಅಥವಾ 08172 - 268374 ಸಂಖ್ಯೆ ಸಂಪರ್ಕಿಸಬಹುದು.

'ಪ್ರೌಢಶಾಲಾ ಸಹ ಶಿಕ್ಷಕರಿಗೆ
ಬಡ್ತಿ ಸಿಗದೇ ಅನ್ಯಾಯ'
ಹಾರನಹಳ್ಳಿ: ಪ್ರೌಢಶಾಲಾ ಸಹ ಶಿಕ್ಷಕರಿಗೆ ಕಾಲಮಿತಿ ಬಡ್ತಿ ಸಿಗದೆ ಅನ್ಯಾಯವಾಗುತ್ತಿದೆ ಎಂದು ಸಹ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಹಾಗೂ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್. ಪಾಂಡುರಂಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ರಾಜ್ಯಮಟ್ಟದ ಸಂಘಟನಾ ಕಾರ್ಯದರ್ಶಿ ಕೇಶವ ಅವರು, ಶಿಕ್ಷಕರ ಈ ಹಿಂದಿನ ಸೇವೆ ಪರಿಗಣಿಸುವ ನಿಯಮಗಳನ್ನು ಸರ್ಕಾರದ ನಿಯಾಮಾವಳಿಯಲ್ಲಿ ಸೇರ್ಪಡೆಗೊಳಿಸಲು ಸಂಘ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆಂದು ಪಾಂಡುರಂಗಪ್ಪ ತಿಳಿಸಿದರು. ಈ  ಹೋರಾಟ ಸರ್ಕಾರದ ಮಟ್ಟಕ್ಕೆ ತಲುಪುವ ಹೋರಾಟ ನಡೆಸಬೇಕು ತಾಲೂಕಿನ ಎಲ್ಲಾ ಶಿಕ್ಷಕರು ಸಂಘಕ್ಕೆ ಸದಸ್ಯರಾಗುವ ಮೂಲಕ ಹೋರಾಟ ನಡೆಸಬೇಕೆಂದರು. ಸಭೆಯಲ್ಲಿ ಜಿಲ್ಲಾ ಸಂಘದ ಪ್ರತಿನಿಧಿ  ಮಧುಸೂದನ್, ಹೊಳೆನರಸೀಪುರದ ತಾಲೂಕು  ಅಧ್ಯಕ್ಷ ಟಿ.ಆರ್. ಧರ್ಮರಾಜ್, ಖಜಾಂಚಿ ಕುಮಾರಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು  ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು
ಹಾಸನ:  ಪ್ರಾದೇಶಿಕ ಭಾಷೆಗಳಿಗೆ ವರ್ತಮಾನದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತ್ರೈಮಾಸಿಕ ಸಂಪಾದಕ ಅರಕಲಗೂಡು ಜಯಕುಮಾರ್ ಹೇಳಿದರು.
ನಗರದ ಹೇಮಾವತಿ ಮಹಿಳಾ ಸಂಘ ಮತ್ತು ಸರ್ಕಾರಿ ಪ್ರಥಮದರ್ಜೆ ವಿಜ್ಞಾನ ಕಾಲೇಜು ಸಂಯುಕ್ತವಾಗಿ ಆಯೋಜಿಸಿದ್ದ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  1952ರಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ಪಶ್ಚಿಮ ಪಾಕಿಸ್ತಾನದ ನೇತಾರರು ಬಲವಂತವಾಗಿ ಉರ್ದುಭಾಷೆಯ ಹೇರಿದ್ದು, ನೂತನ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು ಎಂದರು.
ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶರ್ಮ, ಪ್ರಾಂಶುಪಾಲ ಡಾ. ಎ ಎಲ್. ಮುರಳೀಧರ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎ. ರವಿಶಂಕರ್ ಇತರರು ಭಾಗವಹಿಸಿದ್ದರು.

ಹಕ್ಕುಗಳ ಮಾಹಿತಿ ಕೊರತೆ,ಗ್ರಾಹಕರ ಶೋಷಣೆ
ಹಾಸನ: ಸಾರ್ವಜನಿಕರಿಗೆ ಹಕ್ಕು ಮಾಹಿತಿ ಕೊರತೆಯಿಂದಾಗಿ ಗ್ರಾಹಕರ ಶೋಷಣೆಯಾಗುತ್ತಿದೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ. ಲಲಿತಾದೇವಿ ತಿಳಿಸಿದರು. ಅವರು ಗೊರೂರಿನ ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತನಾ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಹಕರ       ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಚಂದ್ರಶೇಖರ್, ಉಪನ್ಯಾಸಕಿ ಸಿ. ಆರ್. ಪುಷ್ಪಾವತಿ, ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕು. ಡಿ.ಎಸ್. ಪೂರ್ಣಿಮ ಸ್ವಾಗತಿಸಿದರು.  ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕು. ವೈ.ಆರ್. ಲಕ್ಷ್ಮೀ ವಂದಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿಕೆ.ಎನ್. ಯಶವಂತಕುಮಾರ್ ನಿರೂಪಿಸಿದರು.

ಗರ್ಭಿಣಿಯರಿಗೆ ತಾಯಿ ಕಾರ್ಡ್ ಕಡ್ಡಾಯ: ಡಾ. ಗೋಪಿನಾಥ್
ಹೊಳೆನರಸೀಪುರ: ಪ್ರತಿಯೊಬ್ಬ ಗರ್ಭಿಣಿಯರೂ ತಾಯಿ ಕಾರ್ಡ್ ಮಾಡಿಸುವುದು ಕಡ್ಡಾಯ ಎಂದು ಡಾ. ಬಿ.ಟಿ. ಗೋಪಿನಾಥ್ ತಿಳಿಸಿದರು.
ತಾಲೂಕಿನ ಹಂಗರಹಳ್ಳಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಂದಿರ ಮತ್ತು ಶಿಶುಗಳ ಮರಣಗಳ ಪ್ರಮಾಣ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿ ಕಾರ್ಡ್ ಮಾಡಿಸುವುದರಿಂದ ಗರ್ಭಿಣಿಯರಿಗೆ ನೀಡುವ ಮೊದಲನೇ, ಎರಡನೆಯ ಟಿಟಿ ಹಾಗೂ ಇತರ ವಿವರಗಳನ್ನು  ಗಣಕಯಂತ್ರದಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ ಎಂದರು. ದಾಖಲಾತಿಯ ನಂತರ, ತಾಯಿ ಭಾಗ್ಯ, ಮಡಿಲು, ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಹಾಗೂ ಜನನಿ- ಶಿಶು ಸುರಕ್ಷಾ ಕಾರ್ಯಕ್ರಮಗಳ ಅನುಕೂಲ ಪಡೆದುಕೊಳ್ಳಲು ಮನವಿ ಮಾಡಿದರು.  ಸಭೆಯಲ್ಲಿ ಆಶಾ ಕಾರ್ಯಕರ್ತೆಯರಾದ ರೇವಮ್ಮ, ಶೋಭಾ ಹಾಗೂ ಹಳೆಕೋಟೆಯ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ. ಪುಟ್ಟೇಗೌಡ ಇದ್ದರು.

ವೈಭವದ ಕೆಲ್ಲಂಗೆರೆ ಅಂತರಘಟ್ಟಮ್ಮದೇವಿ ರಥೋತ್ಸವ
ಹಾರನಹಳ್ಳಿ:  ಅರಸೀಕೆರೆ ತಾಲೂಕಿನ ಕೆಲ್ಲಂಗೆರೆಯ ಅಂತರಘಟಮ್ಮ ದೇವಿಯ ಮೂಲ ಸನ್ನಿಧಾನದಲ್ಲಿ ಮಹಾರಥೋತ್ಸವ ಇತ್ತೀಚೆಗೆ ವೈಭವದಿಂದ ನಡೆಯಿತು. ಅಂತರಘಟಮ್ಮ ದೇವರ ಮೂಲ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಉಡಿಸಲಮ್ಮದೇವಿ, ಅಟ್ಟಿಯಮ್ಮ, ಅಂತರಘಟಮ್ಮ ದೇವರುಗಳನ್ನು ಹೂವಿನಿಂದ ಶೃಂಗರಿಸಿ ಉತ್ಸವದಲ್ಲಿ ಕರೆತರಲಾಯಿತು. ನಂತರ ಸಿಡಿಸೇವೆ, ಉಯಾಲೆಸೇವೆ ನಡೆದ ನಂತರ ರಥದಲ್ಲಿ ಕುಳಿರಿಸಿ ಮಹಾ ಮಂಗಳಾರತಿ  ನಡೆಸಲಾಯಿತು. ಬಳಿಕ, ದೂತರಾಯ, ಚಿಕ್ಕಯ್ಯ, ಚೋಮಗಳು ರಥದ ಗಾಲಿಗೆ ತೆಂಗಿನ ಕಾಯಿ ಹಾಕಿದ ನಂತರ ಮಹಾ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಭಾವ ಸಮರ್ಪಿಸಿದರು. ಅರೆವಾದ್ಯ, ಸೋಮನಕುಣಿತ, ಜಾತ್ರೆಗೆ ಮೆರಗು ನೀಡಿತು.  ಸುತ್ತಮೂತ್ತಲ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಆಮಿಷಕ್ಕೆ ಒಳಗಾಗಿ ಮತದಾನ  ಪ್ರಜಾಪ್ರಭುತ್ವಕ್ಕೆ ಮಾರಕ
ಹಾಸನ: ಆಮಿಷಕ್ಕೊಳಗಾಗಿ ಮತದಾನ ಮಾಡುವುದು ಹಾಗೂ ಈ ಪ್ರಕ್ರಿಯೆಯಿಂದ ಹಿಂದೆ ಸರಿಯವುದು ಸಹ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಉಪವಿಭಾಗಾಧಿಕಾರಿ ಮಧುಕೇಶ್ವರ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ, ಪಟ್ಟಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಜಾಗೃತಿಜಾಥಾ ಉದ್ಘಾಟಿಸಿ ಮಾತನಾಡಿ, ಶೇಕಡಾವಾರು ಹೆಚ್ಚು ಮತದಾನ ಮಾಡುವಂತೆ ಮತದಾರರನ್ನು ಒಲೈಸುವ ಹಾಗೂ ಮತದ ಮಹತ್ವ ಸಾರುವ ಕುರಿತು ಜಾಗೃತಿ ನಡೆಸಲಾಗುತ್ತಿದೆ ಎಂದರು. ಪ್ರಥಮದರ್ಜೆ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಪುರಸಭೆಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮತದಾನದ ಕುರಿತು ಅರಿವು ಮೂಡಿಸಿದರು. ತಹಸೀಲ್ದಾರ್ ಪಾರ್ವತಿ, ಇಓ ಭಜಂತ್ರಿ, ಬಿಇಓ ಪ್ರಕಾಶ್, ಜಿಪಂ ಎ.ಇ.ಇ ಜಯರಾಂ ಇತರರು ಇದ್ದರು.

ಜಾವಗಲ್ ದೇವಾಲಯಕ್ಕೆ ಎವಿಕೆ ಕಾಲೇಜಿನ ಪರಂಪರೆ ಕೂಟ ಭೇಟಿ
ಜಾವಗಲ್: ಜಾವಗಲ್‌ನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಹಾಸನದ ಎ.ವಿ. ಕಾಂತಮ್ಮ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪರಂಪರೆ ಕೂಟದ ವಿದ್ಯಾರ್ಥಿನಿಯರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.
ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ನಿಂಗಪ್ಪ, ಉಪನ್ಯಾಸಕ ಕುಮಾರ ಸ್ವಾಮಿ, ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಜಯದೇವೆಗೌಡರೊಂದಿಗೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದೇವಾಲಯ ವೀಕ್ಷಿಸಿದರು.  ದೇವಾಲಯದ ವಾಸ್ತುಶಿಲ್ಪ, ಶಿಲಾಬಾಲಕಿಯರು, ಮಹಾಭಾರತ, ರಾಮಾಯಣ, ಭಾಗವತ, ದಶಾವತಾರ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಅಂದವಾದ ವಿಗ್ರಹಗಳು ಕೆತ್ತನೆ, ಕಲಾಕುಸರಿ ಹಾಗೂ ಹೊಯ್ಸಳರ ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅರ್ಚಕ ನಾರಾಯಣ ಸ್ವಾಮಿ ಅವರಿಂದ ಪಡೆದುಕೊಂಡರು.  ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಾರಿಯಾಗದ ಜಲಾಭಿವೃದ್ಧಿ ಯೋಜನೆಗಳು: ವಿಷಾದ
ಹಾಸನ: ರಾಜ್ಯ ಸರ್ಕಾರ ಜಲಮಟ್ಟದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಇದುವರೆಗೂ ಈ ಯಾವ ಯೋಜನೆಗಳೂ ಜಾರಿಗೊಳ್ಳದೆ ಇರುವುದು ವಿಷಾದನೀಯ ಎಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಎಸ್. ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಾಪಕಿ ಕೆ.ಎಂ. ಮಂಜುಳ, ಪ್ರಾಂಶುಪಾಲ ಪ್ರೊ. ಎಚ್.ಎನ್. ರೂಪ್ ರಾಜ್ ಚಂದನ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಡಾ. ಕೆ.ಜಿ. ಕವಿತಾ, ದಿಲೀಪ್ ಕುಮಾರ್ ಗೌಡ, ಜ್ಯೋತಿ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಚ್.ಕೆ. ದಿಲೀಪ್ ಕುಮಾರ್ ಇದ್ದರು.

ಧನ್ಯತಾ, ಹೇಮಾಲತಾ, ಹಂಸಲಕ್ಷ್ಮೀಗೆ ಚಿನ್ನ
ಹಾಸನ: ಮೈಸೂರು ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ ನಡೆಸಿದ ಎಂಬಿಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಹಾಸನದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಾದ ಡಿ.ಆರ್. ಧನ್ಯತಾ, ಎಚ್.ಆರ್. ಹೇಮಲತ ಹಾಗೂ ಬಿ.ಎ. ಹಂಸಲಕ್ಷ್ಮಿ ಅವರು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿದ್ದಾರೆ.
ಮಾ. 22ರಂದು ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ನಗದ ಬಹುಮಾನವನ್ನು  ಕುಲಾಧಿಪತಿ ಹಾಗೂ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಂದ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಸದಸ್ಯರು ಹಾಗೂ ನಿರ್ದೇಶಕ ಡಾ.ಎ. ತಿಮ್ಮೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಜಾವಗಲ್‌ನಲ್ಲಿ ಪೂಜಾ ಕಾರ್ಯಕ್ರಮ
ಜಾವಗಲ್: ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಮಹಾಮಂಡಲ ಪೂಜಾ ಕಾರ್ಯಕ್ರಮವನ್ನು ಮಾ. 23ರಂದು ಏರ್ಪಡಿಸಲಾಗಿದೆ.ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಗ್ರಾಮಾಭಿವೃದ್ಧಿಗಾಗಿ ಪ್ರಾತಃಕಾಲ ರುದ್ರಾಭಿಷೇಕ, ಲಕ್ಷ್ಮೀ ನರಸಿಂಹ ಹೋಮ, ಮಹಾಗಣಪತಿ ಹೋಮ, ಕಲಾಹೋಮ, ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗ ದೇವಾಲಯ ಭಕ್ತ ಮಂಡಲಿ ಕೋರಿದೆ. ಶಂಕರಾನಂದ ಸರಸ್ವತಿ ಮಹಾಸಂಸ್ಥಾನ, ಯಾದವಗಿರಿ, ಅದೋನಿ ಮಠ, ಕರ್ನೂಲ್ ಜಿಲ್ಲೆಯ ಸುಬಹ್ಮಣ್ಯ ಭಾರತಿ ಮಹಾಸ್ವಾಮೀಜಿಗಳು ಭಾನುವಾರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ದೇವಾಲಯದ ಸಮಿತಿ ತಿಳಿಸಿದೆ.

ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ 25ರಂದು
ಹಾಸನ: ತಾಲೂಕು ಕಂದಲಿ ವಿದ್ಯಾಪೀಠದ ಬಳಿ ಇರುವ ಹಾಸನ ಕ್ಯಾನ್ಸರ್ ಸೆಂಟರ್‌ನಲ್ಲಿ ಮಾ. 25ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಕ್ಯಾನ್ಸರ್ ಪತ್ತೆಯಾದ ರೋಗಿಗಳಿಗೆ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ 72040 59259 ಸಂಖ್ಯೆಗೆ ಸಂಪರ್ಕಿಸಬಹುದು.

ಅರಕಲಗೂಡಲ್ಲಿ ಮತದಾನ ಜಾಗೃತಿ ಸಭೆ
ಅರಕಲಗೂಡು: ತಾಪಂ ಸಭಾಂಗಣದಲ್ಲಿ ನಡೆದ ಮತದಾನ ಜಾಗೃತಿ ಸಭೆಯಲ್ಲಿ ಎಆರ್‌ಒ ಜಗದೀಶ್ ಮಾತನಾಡಿ, ಇಲಾಖಾವಾರು ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಮತದಾನ ಜಾಗೃತಿಗಾಗಿ, ಜಾಥಾ ಮತ್ತಿತರೆ ವಿಧಾನಗಳನ್ನು ಅನುಸರಿಸಬೇಕು. ಶಾಂತಿಯುತವಾಗಿ ಮತದಾನ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಸಿಡಿಪಿಓ ಅಧಿಕಾರಿ ಮಲ್ಲೇಗೌಡ ಸಭೆಗೆ ಮಾಹಿತಿ ನೀಡಿ, ಇಲಾಖೆಯ 270 ಮಂದಿ ಅಂಗನವಾಡಿ ಕಾರ್ಯಕರ್ತೆಯರನ್ನು ಜೊತೆಗೂಡಿಸಿ ಏ. 9ರಂದು ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು. ಅದೇ ರೀತಿ ಕೊಣನೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರನ್ನೂ ಒಗ್ಗೂಡಿಸಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ ಬಾಬು ಮಾತನಾಡಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ನೌಕರ ರೊಂದಿಗೆ ಪಟ್ಟಣದಲ್ಲಿ ಏ. 11ರಂದು ಜಾಗೃತಿ ಮೆರವಣಿಗೆ ನಡೆಸಲಾಗುವುದು ಎಂದರು. ಶಾಲಾ ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳೊಂದಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಬಸವರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.