ಸಂಸತ್ತಿನ ಒಳಗೂ ಹೊರಗೂ ಹೋರಾಟ
ಕನ್ನಡಪ್ರಭ ವಾರ್ತೆ ಹಾಸನ ಮೇ 19
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಿಕ್ಕೆ ಬಂದಿರುವ ಬಿಜೆಪಿ ಕಾವೇರಿ ಸಮಸ್ಯೆ ಸೇರಿದಂತೆ ದೇಶದ ನಾನಾ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡುವುದಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನರೇಂದ್ರ ಮೋದಿ 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅನುಭವ ಹೊಂದಿದ್ದು, ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಸಮಸ್ಯೆಗಳ ವಿರುದ್ಧ ಲೋಕಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ನಾನು ಸಿದ್ದನಿದ್ದೇನಎಂದು ಹೇಳಿದರು.
ಯುಪಿಎ ನೇತೃತ್ವದ ಸರ್ಕಾರ ಹತ್ತು ವರ್ಷಗಳಿಂದ ಅಧಿಕಾರ ನಡೆಸಿದರೂ ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ಸಮಸ್ಯೆಯಾದ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಈಗ ರಾಜ್ಯದಿಂದ 17 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದ ರೈತರಿಗೆ ಯಾವ ರೀತಿ ನ್ಯಾಯ ದೊರಕಿಸಿಕೊಡಲಿದೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದರು.
ಜಿಲ್ಲೆಯ ಹಾಗೂ ರಾಜ್ಯದ ಯಾವುದೇ ಸಮಸ್ಯೆಗಳು ಇದ್ದರೂ ತಾವು ಹೋರಾಟ ಮಾಡುವುದನ್ನು ಬಿಡುವುದಿಲ್ಲ. ಯಾವುದೇ ಸಮಸ್ಯೆಗಳು ಇದ್ದರೂ ಪ್ರಧಾನ ಮಂತ್ರಿ ಕಚೇರಿಗೆ ದೂರು ನೀಡುತ್ತೇನೆ ಇಲ್ಲವಾದಲ್ಲಿ ನಾನೇ ಅವರ ಕಚೇರಿಗೆ ಹೋಗಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಸುತ್ತೇನೆ ಎಂದರು.
ಮಾತನಾಡಲು ಅವಕಾಶ ಸಿಕ್ಕರೆ ಪಾರ್ಲಿಮೆಂಟಿಗೆ ಹೋಗುತ್ತೇನೆ
ಈ ಹಿಂದೆ ನಮ್ಮ ಪಕ್ಷ 3 ಸ್ಥಾನಗಳನ್ನು ಗೆದ್ದ ಸಂದರ್ಭದಲ್ಲಿ ಪಾರ್ಲಿಮೆಂಟಿನಲ್ಲಿ ಮೂರು ನಿಮಿಷಗಳ ಕಾಲ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಇಬ್ಬರು ಮಾತ್ರ ಇದ್ದೀವಿ. ಮಾತನಾಡಲು ಅವಕಾಶ ಸಿಕ್ಕರೆ ಪಾರ್ಲಿಮೆಂಟಟ್ಗೆ ಹೋಗುತ್ತೇನೆ. ಇಲ್ಲವಾದರೆ ಪಾರ್ಲಿಮೆಂಟಟ್ಗೆ ಹೋಗುವುದನ್ನು ಕಡಿಮೆ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ ಸದಸ್ಯ ಪಟೇಲ್, ಶಿವರಾಂ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ ಪಾಷ, ಮುಖಂಡ ಕೆ.ಎಂ. ರಾಜೇಗೌಡ, ಚನ್ನವೀರಪ್ಪ ಹಾಗೂ ಇತರರು ಇದ್ದರು.
ದೂರ ಉಳಿಯಲ್ಲ
ಸ್ವಂತಬಲದಿಂದ ನರೇಂದ್ರ ಮೋದಿ ಸರ್ಕಾರ ರಚನೆ ಮಾಡಿದರೆ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ತಾವು ಎಂದಿಗೂ ರಾಜಕೀಯದಿಂದ ದೂರ ಉಳಿಯುವುದಿಲ್ಲ. ನನ್ನನ್ನು ನಂಬಿಕೆ ಜಿಲ್ಲೆಯ ಜನತೆ ಇಟ್ಟು ಮತಗಳನ್ನು ನೀಡಿ ಜಯಿಸಿದ್ದಾರೆ. ಆ ಜನರಿಗೆ ನಾನು ಮೋಸ ಮಾಡಲು ಸಿದ್ದನಿಲ್ಲ. ಮುಂದೆ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದ್ದು, ಅಧಿಕಾರಕ್ಕೆ ಬಂದ ನಂತರದ ನಿವೃತ್ತಿಯ ಯೋಚನೆ ಮಾಡುವುದಾಗಿ ಹೇಳಿದರು.
ರಾಜೀನಾಮೆ ನೀಡುತ್ತೇನೆ ಎಂದು ನಾನು ಹೇಳಿಲ್ಲ. ಈ ಹಿಂದೆ ಎರಡು ಬಾರಿ ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ ಎಂದರು.
ತಮಿಳುನಾಡಿನ ಸಂಸದರು ಇಷ್ಟು ದಿನ ಯುಪಿಎ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು. ಆದರೇ ಪ್ರಸ್ತುತ ಆ ರಾಜ್ಯದ ಸಂಸದರು ಕೇಂದ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಮೋದಿ ನೇತೃತ್ವದ ಸರ್ಕಾರ ರಾಜ್ಯದ ನೀರಾವರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಜೊತೆಗೆ ನೆರೆ ರಾಷ್ಟ್ರಗಳ ಸಮಸ್ಯೆ ಹೆಚ್ಚಾಗಿದ್ದು, ಅವುಗಳನ್ನು ಬಗೆಹರಿಸಬೇಕಾಗಿದೆ.
- ಎಚ್. ಡಿ. ದೇವೇಗೌಡ, ಮಾಜಿ ಪ್ರಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

