ಅರಣ್ಯ ಭೂಮಿ ಹಕ್ಕಿಗೆ ಒತ್ತಾಯಿಸಿ ಜೂ.2ಕ್ಕೆ ಧರಣಿ
ಕ.ಪ್ರ.ವಾರ್ತೆ ಹಾಸನ ಮೇ 28
ಬಗರ್ ಹುಕುಂ, ಅರಣ್ಯ ಭೂಮಿ ಹಕ್ಕಿಗಾಗಿ, ಬಡವರಿಗೆ ಉಚಿತ ಮನೆ ನಿವೇಶನಕ್ಕಾಗಿ, ಉದ್ಯೋಗ ಖಾತ್ರಿ ಮತ್ತಿತರೇ ಹಕ್ಕೊತ್ತಾಯಗಳಿಗಾಗಿ ಸಾವಿರಾರು ರೈತರು ಹಾಗೂ ಕೂಲಿಕಾರರಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂನ್ 2 ರಂದು ನಿರಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ರೈತರು ಹಾಗೂ ಕೂಲಿಕಾರರು ಮತ್ತು ಗ್ರಾಮೀಣ ಪ್ರದೇಶ ಅತ್ಯಂತ ಸಂಕಷ್ಠದಲ್ಲಿರುವಾಗಲೂ, ಮೇಲ್ನೋಟಕ್ಕೆ ಇವರ ಪರವಾಗಿರುವಂತೆ ಬಿಂಬಿಸಿಕೊಳ್ಳುತ್ತಾ, ರೈತರ ವಿರೋಧಿಯಾದ ಮತ್ತು ದೇಶದ ಹಾಗೂ ವಿದೇಶದ ದೊಡ್ಡ ಬಂಡವಾಳದಾರರು, ಭೂಮಾಲೀಕರು ಮತ್ತು ಭಾರೀ ಶ್ರೀಮಂತರ ಪರವಾದ ಜಾಗತೀಕರಣದ ನೀತಿಗಳನ್ನೇ ಮುಂದುವರಿಸುತ್ತಿವೆ. ಪರಿಣಾಮವಾಗಿ, ಶ್ರೀಮಂತರು ಭಾರೀ ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ, ಎಲ್ಲಾ ದುಡಿಯುವ ಜನತೆ ದಟ್ಟ ದರಿದ್ರರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ರಾಜ್ಯ ಮತ್ತು ದೇಶದಲ್ಲಿ ಕೃಷಿ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಬದಲಿಗೆ, ಕೃಷಿ ಹಾಗೂ ಗ್ರಾಮೀಣ ಪ್ರದೇಶ ಅತ್ಯಂತ ಬಿಕ್ಕಟ್ಟಿಗೆ ಒಳಗಾಗಿದೆ. ಈ ದೇಶದಲ್ಲಿ ಸಾಲದ ಭಾಧೆಯಿಂದ ಪ್ರತಿ ಅರ್ಧ ಗಂಟೆಗೊಬ್ಬ ರೈತ ಅಥವಾ ಅನ್ನದಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮುಂದುವರಿದಿದೆ ಎಂದು ಹೇಳಿದರು.
ಗ್ರಾಮದ ಶೇ. 85 ರಷ್ಠಿರುವ ಬಡ ಹಾಗೂ ಮದ್ಯಮ ರೈತರು ಮತ್ತು ಕೂಲಿಕಾರರ ದಿನದ ತಲಾ ಆದಾಯ 10 ಗೂ ಕಡಿಮೆ ಇದ್ದು, ಬಹುತೇಕರು ಅಪೌಷ್ಟಿಕತೆಯ ಹಾಗೂ ಹಸಿವಿನಿಂದ ಸಾವಿಗೆ ತುತ್ತಾಗುತ್ತಿರುವುದು ಮುನ್ನಡೆದಿದೆ. ಪ್ರತಿ 6 ಸೆಕೆಂಡಿಗೊಬ್ಬ ವ್ಯಕ್ತಿ ಹಸಿವಿನಿಂದ ಸಾವಿಗೆ ತುತ್ತಾಗುತ್ತಿದ್ದಾನೆ. 10 ರಲ್ಲಿ 08 ಮಕ್ಕಳು ಅಗತ್ಯ ತೂಕ ಹೊಂದಿಲ್ಲ. ಶೇ. 60ಕ್ಕೂ ಹೆಚ್ಚಿನ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.
ಕೋಟ್ಯಂತರ ಬಡ ಕುಟುಂಬಗಳು ವಾಸಿಸಲು ಮನೆ ಹಾಗೂ ನಿವೇಶನ ಖರೀದಿಸಲಾಗದೆ, ಇರುವ ಮುರುಕಲು ಮನೆ ಅಥವಾ ಗುಡಿಸಲುಗಳಲ್ಲಿ 03-04 ಕುಟುಂಬಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದು ಅವುಗಳನ್ನು ಹಾಗೆಯೇ ಬಿಡಲಾಗಿದೆ ಎಂದು ಹೇಳಿದ್ದಾರೆ. ಇಂತಹ ಸಂಧರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ಹಾಗೂ ಕೂಲಿಕಾರರ ವ್ಯವಸಾಯವನ್ನು ಲಾಭದಾಯಕವಾಗುವಂತೆ ಕ್ರಮ ವಹಿಸದೇ, ವ್ಯವಸಾಯವನ್ನೇ ಇವರ ಕೈನಿಂದ ಕಿತ್ತುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ ಪರಭಾರೆ ಮಾಡಲು ಮುಂದಾಗುತ್ತಿವೆ. ವಿರೋಧ ಪಕ್ಷಗಳು ಅವುಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುತ್ತಿವೆ. ಚಿಲ್ಲರೇ ವ್ಯಾಪಾರದಲ್ಲಿ ಬಹುರಾಷ್ಟ್ರೀಯ ಬಂಡವಾಳಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ಒಪ್ಪಿರುವುದು ಮತ್ತು ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರುತ್ತಿರುವುದು, ರೈತರ ಹಾಗೂ ವ್ಯವಸಾಯ ಸೇವ ಸಹಕಾರ ಸಂಘಗಳು ಮತ್ತು ಬ್ಯಾಂಕ್ಗಳ ರೈತರೊಂದಿಗೆ ವ್ಯವಹರಿಸುವ ಅಧಿಕಾರವನ್ನು ಮೊಟಕುಗೊಳಿಸಿ ಹಾಳು ಮಾಡಲು ಮುಂದಾಗಿರುವುದು, ಬಡವರ ಸಾಗುವಳಿಯ ಸರ್ಕಾರಿ ಜಮೀನಿಗೆ ಹಕ್ಕುಪತ್ರ ನೀಡದೇ ಅವರನ್ನು ಒಕ್ಕಲೆಬ್ಬಿಸಲು ಕ್ರಮ ಕೈಗೊಳ್ಳುತ್ತಿರುವುದು, ಭೂ ಸುಧಾರಣಾ ಕಾನೂನಿಗೆ ಕಂಪನಿಗಳ ಪರವಾಗಿ ತಿದ್ದುಪಡಿ ತರಲು ಯತ್ನಿಸುತ್ತಿರುವುದು, ಕೃಷಿರಂಗದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪನಿಗಳನ್ನು ಆಹ್ವಾನಿಸುತ್ತಿರುವುದು ಎಲ್ಲವೂ, ಕಂಪನಿ ಕೃಷಿ, ಗುತ್ತಿಗೆ ಕೃಷಿ, ಮುಂಗಡ ವ್ಯಾಪಾರದ ಕೃಷಿಯನ್ನು ಜಾರಿಗೆ ತರುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
45 ಲಕ್ಷ ಎಕರೆಗೂ ಅಧಿಕ ಪ್ರದೇಶವನ್ನು ಅಭಿವೃದ್ದಿ ಪಡಿಸಿದ ಸುಮಾರು 20 ಲಕ್ಷ ಕುಟುಂಬಗಳು ರಾಜ್ಯದಲ್ಲಿದ್ದು, ಅವರನ್ನು ಗುರುತಿಸಿ, ಬೆನ್ನು ತಟ್ಟಿ ಆ ಜಮೀನುಗಳಿಗೆ ಹಕ್ಕು ಪತ್ರ ಮತ್ತಿತರೇ ನೆರವು ನೀಡಿ ಬೆಂಬಲಿಸುವ ಬದಲು, ಬಿಬಿಎಂಪಿ, ಮಹಾನಗರ ಪಾಲಿಕೆ, ನಗರಸಭೆ ವ್ಯಾಪ್ತಿಯ 18 ಕಿ.ಮೀ. 05 ಕಿ.ಮೀ. ಒಳಗಿವೆ ಎಂದು, ಇಲ್ಲವೇ ಗೋಮಾಳವೆಂದು, ಅರಣ್ಯವೆಂದು ಸಲ್ಲದ ನೆಪ ಆ ಬಡವರನ್ನು ಒಕ್ಕಲೆಬ್ಬಿಸಿ ಸದರಿ ಜನರು ಅಭಿವೃಧ್ದಿ ಪಡಿಸಿದ ಜಮೀನುಗಳನ್ನು ಭೂ ಬ್ಯಾಂಕ್ಗೆ ಸೇರಿಸಿ, ಕೈಗಾರಿಕೆಗಳಿಗೆ ಅಥವಾ ಕಂಪನಿ ಕೃಷಿಗೆ ನೀಡುವ ಹುನ್ನಾರ ನಡೆಸಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಮತ್ತು ಕೂಲಿಕಾರರ ವಿರೋಧಿ ನಿಲುವನ್ನು ವಿರೋದಿಸಿ ಮತ್ತು ಕಂಪನಿ ಕೃಷಿಯನ್ನು ಹೊಡೆದೋಡಿಸಲು ಮತ್ತು ರೈತರು ಹಾಗೂ ಕೂಲಿಕಾರರ ಕೃಷಿಯನ್ನು ಸಂರಕ್ಷಿಸಲು, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂ. 2 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

