ಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ
ಕನ್ನಡಪ್ರಭ ವಾರ್ತೆ ಅರಸೀಕೆರೆ ಮೇ 28
ಪಟ್ಟಣದ ಕಂತೇನಹಳ್ಳಿ ಸಮೀಪವಿರುವ ದೊಡ್ಡಕೆರೆ ಒತ್ತುವರಿಯಾಗಿದ್ದು ಕೂಡಲೇ ಕೆರೆ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್, ಮುಖಂಡ ಜವನಹಳ್ಳಿ ನಿಂಗಪ್ಪ ಇನ್ನಿತರರು ಕೆರೆಯ ಮಧ್ಯಭಾಗದ ನಡುಗಡ್ಡೆಯ ಮೇಲೆ ಬುಧವಾರ ಧರಣಿ ನಡೆಸಿದರು.
ಹೊಯ್ಸಳರ ರಾಣಿ ಉಮಾದೇವಿ ಕಟ್ಟಿಸಿದ ಕೆರೆ ಇಂದು ಭೂಗಳ್ಳರ ಪಾಲಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆಯ ಮೂಲನಕ್ಷೆಯಂತೆ ಆಕ್ರಮಣ ಮಾಡಿರುವುವರನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಐತಿಹಾಸಿಕ ಹಿನ್ನೆಲೆಯುಳ್ಳ ಈ ಕೆರೆಯ ಏರಿಯ ಉದ್ದವು ಸುಮಾರು 1,710 ಮೀ ಇದ್ದು, ಅಚ್ಚುಕಟ್ಟು ಪ್ರದೇಶವು 171.57 ಹೆಕ್ಟೇರ್ ಹಾಗೂ ಜಲಾವೃತ್ತ ಪ್ರದೇಶ 179.20 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಸುಮಾರು 15 ಹೆಕ್ಟೇರಿಗೂ ಹೆಚ್ಚು ಒತ್ತುವರಿ ಮಾಡಿರುವ ನುಂಗಣ್ಣರು ಸಾರ್ವಜನಿಕ ಆಸ್ತಿಯನ್ನೇ ಲಪಟಾಯಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸತೊಡಗಿದ್ದಾರೆ ಎಂದು ಆರೋಪಿಸಿದರು.
ತಾಲೂಕ್ ಕಚೇರಿಯಿಂದ ಒತ್ತುವರಿ ಸಂಬಂಧ ಮಾಹಿತಿ ಕೇಳಿದರೂ ಇದುವರೆಗೂ ನೀಡಿಲ್ಲ. ಸರ್ಕಾರ ರಾಜ್ಯಾದ್ಯಂತ ಕೆರೆ ಒತ್ತುವರಿ ತೆರವಿಗೆ ಮುಂದಾಗಿದ್ದರೆ. ಅರಸೀಕೆರೆ ಕೆರೆ ಒತ್ತುವರಿ ತಡೆಯುವುದು ಮಾತ್ರ ಸಾಧ್ಯವಾಗಿಲ್ಲ ಎಂದು ದೂರಿದರು.
ಪ್ರತಿಭಟನಾ ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಶಿವಕುಮಾರ್ ಧರಣಿನಿರತರನ್ನು ಸಮಾಧಾನಪಡಿಸಿ, ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದ 25 ಎಕರೆ ಜಮೀನನ್ನು ತಹಸೀಲ್ದಾರ್ ನೇತೃತ್ವದಲ್ಲಿ ವಾಪಸ್ ಪಡೆಯಲಾಗಿದೆ. ಇನ್ನಿತರ ಒತ್ತುವರಿಯನ್ನು ಕೂಡಲೇ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

