ಹಾಸನ

ಸರ್ಕಾರಿ ಶಾಲೆಯಲ್ಲಿ ಪಠ್ಯ ಪುಸ್ತಕ ವಿತರಣೆ

Published On :

ಜಾವಗಲ್: ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಪ್ರಾರಂಭೋತ್ಸವ ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು. ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್ ಮಾತನಾಡಿ, ಸಮವಸ್ತ್ರಗಳು ಮತ್ತು ಪಠ್ಯಪುಸ್ತಕಗಳನ್ನು ಚೊಕ್ಕಟವಾಗಿ ಇಟ್ಟುಕೊಂಡು ಚೆನ್ನಾಗಿ ವ್ಯಾಸಂಗ ಮಾಡಬೇಕೆಂದರು. ಉಪ ಪ್ರಾಂಶುಪಾಲ ಯೋಗೀಶ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸಿ, ಮಕ್ಕಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕೆಂದರು. ಹೋಬಳಿಯಲ್ಲಿ ಜಾವಗಲ್‌ನಲ್ಲಿ ಏಕೈಕ ಸರ್ಕಾರಿಶಾಲೆಯು ಕನ್ನಡ ಮತ್ತು ಆಂಗ್ಲ ಮಾಧ್ಯಮದ ಸೌಲಭ್ಯ ಹಾಗೂ ಬಿ.ಸಿ.ಎಂ ಮತ್ತು ಸಮಾಜ  ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳನ್ನು ಹೊಂದಿದ್ದು ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಜೆ.ವಿ.ರುದ್ರೇಶ್, ಕೆ.ಎಂ ಪುಟ್ಟಶಂಕರಪ್ಪ, ಚಂದ್ರೇಗೌಡ ಮಾತನಾಡಿದರು. ಎಸ್.ಡಿ.ಎಂ.ಸಿ ಸದಸ್ಯರಾದ ನಾಗರಾಜು, ಪುಟ್ಟಸ್ವಾಮಿ, ಪೋಷಕರು ಮತ್ತುಶಿಕ್ಷಕರು ಪಾಲ್ಗೊಂಡಿದ್ದರು.

ನುರಿತ ತಜ್ಞರಿಂದ ರೈತರಿಗೆ ತಾಂತ್ರಿಕ ಮಾಹಿತಿ
ಹಾಸನ: ಹಾಸನ  ಕೃಷಿ ಮಹಾವಿದ್ಯಾಲಯವು  ಚನ್ನರಾಯಪಟ್ಟಣ ಮತ್ತು ಹಾಸನ ಹೆದ್ದಾರಿಯಲ್ಲಿ (ಎನ್‌ಎಚ್-48) ಇದ್ದು ಹಾಸನ ಪಟ್ಟಣದಿಂದ ಸುಮಾರು 20 ಕಿ. ಮೀ. ದೂರದಲ್ಲಿದೆ. ಈ ಸಂಸ್ಥೆಯು ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ನೀಡಲು ಮತ್ತು ರೈತರಿಗೆ ಸುಧಾರಿತ ತಾಂತ್ರಿಕತೆಯನ್ನು ಸೂಕ್ತ ಸಮಯಕ್ಕೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ಈ ಮಹಾ ವಿದ್ಯಾಲಯದಲ್ಲಿ ಬಿ.ಎಸ್ಸಿ. (ಕೃಷಿ), ಬಿ.ಎಸ್ಸಿ. (ಕೃಷಿ ಜೈವಿಕ ತಂತ್ರಜ್ಞಾನ) ಮತ್ತು ಬಿ.ಟೆಕ್.(ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಎನ್ನುವ ಮೂರು ಸ್ನಾತಕ ಪದವಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ರೈತರಿಗೆ ತಾಂತ್ರಿಕ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವನ್ನು ಮಹಾವಿದ್ಯಾಲಯದ  ಆವರಣದಲ್ಲಿ ಕಳೆದ ಫೆ.22 ರಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಉದ್ಘಾಟಿಸಿದ್ದರು.
ಕೇಂದ್ರದಲ್ಲಿ ಮಾಹಿತಿಗಳ ಬಗ್ಗೆ ಸೂಕ್ತ ತಾಂತ್ರಿಕತೆಯನ್ನು ನುರಿತ ತಜ್ಞರಿಂದ ನೀಡಲಾಗುವುದು. ತಸುಧಾರಿತ ತಳಿಗಳು: ಏಕದಳ ಧಾನ್ಯದ ಬೆಳೆಗಳು - ಬತ್ತ, ಕೆಆರ್‌ಹೆಚ್-2, ರಾಗಿ ಎಂಎಲ್-365, ಇಂಡಾಫ್-7, ಎಂಆರ್- ಮುಸುಕಿನ ಜೋಳ ಎನ್‌ಎಹೆಚ್-1137,  ದ್ವಿದಳ ಧಾನ್ಯದ ಬೆಳೆಗಳು -  1. ತೊಗರಿ ಬಿಆರ್‌ಜಿ-1, ಬಿಆರ್‌ಜಿ-2,  ಅವರೆ ಕೆಎ-4,ಸೋಯಾ ಅವರೆ  ಕೆಹೆಚ್‌ಎಸ್‌ಬಿ-2 ಹಾಸನ ಜಿಲ್ಲೆಯಲ್ಲಿ ಬೆಳೆಯುವ ವಿವಿಧ  ಬೆಳೆಗಳ ತಳಿಗಳ ಬೀಜಗಳನ್ನು ರೈತರ  ಬೇಡಿಕೆಗೆ ಅನುಗುಣವಾಗಿ ಕೃಷಿ ಮಾಹಿತಿ ತಂತ್ರಜ್ಞಾನ ಕೇಂದ್ರದ ಮೂಲಕ ಪೂರೈಸಲಾಗುವುದು. ಮಾಹಿತಿಗಾಗಿ ಡಾ.ಮುನಿಸ್ವಾಮಿಗೌಡ, ಮೊ.9972847808, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಸಂಪರ್ಕಿಸುವುದು.

ಪರಿಹಾರಕ್ಕೆ ಆಗ್ರಹಿಸಿ ಹೆದ್ದಾರಿ ಬಂದ್
ಚನ್ನರಾಯಪಟ್ಟಣ: ಅಪಘಾತವೆಸಗಿದ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಮೃತ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಉದಯಪುರ ಸುತ್ತಮುತ್ತಲ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶವ ರಸ್ತೆಯಲ್ಲಿಟ್ಟು ಧರಣಿ ನಡೆಸಿದ ಘಟನೆ ನಡೆಯಿತು. ಶನಿವಾರ ಸಂಜೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಅಪ್ಪೇನಹಳ್ಳಿ ಗೇಟ್‌ನಲ್ಲಿ ಗ್ರಾಮದ ದೇವರಾಜು ಅವರಿಗೆ  ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರ ನೀಡಲು ಒಪ್ಪದ ಸಾರಿಗೆ ಸಂಸ್ಥೆಯ ವಿರುದ್ಧ  ಉದಯಪುರ ಸುತ್ತಮುತ್ತಲ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನ ನಡೆಸಿದರು. ಅಪಘಾತವೆಸಗಿದೆ ಸಾರಿಗೆ ಸಂಸ್ಥೆಯ ಬಸ್‌ನ್ನು ಚನ್ನರಾಯಪಟ್ಟಣ ಗ್ರಾಮಾಂತರ ಪೋಲಿಸರು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿದ್ದರೂ, ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ನೀಡಲು ಒಪ್ಪದ ಕಾರಣ  ಶನಿವಾರ ಅಪಘಾತದಲ್ಲಿ  ಮೃತಪಟ್ಟ ದುದೈವಿ ದೇವರಾಜು ಮೃತದೇಹವನ್ನು ಹೆದ್ದಾರಿಯಲ್ಲಿಟ್ಟು ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳನ್ನು ಮಾತ್ರ ತಡೆದು ಧರಣಿ ನಡೆಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ ಧರಣಿ ನಿರತರನ್ನು ಮನಮೊಲಿಸಿದರಾದರೂ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಾಗ ಸಾರಿಗೆ ಅಧಿಕಾರಿಗಳನ್ನು ಪೊಲೀಸರು ಕರೆಸಿದ ಸಂದರ್ಭದಲ್ಲಿ 15ಸಾವಿರ ರು.ಗಳನ್ನು ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿದಾಗ ಧರಣಿ ವಾಪಸ್ ಪಡೆದರು.

ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ
ಹಾಸನ: 2014-15ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ 5 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಹಾಗೂ 3 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಒಟ್ಟು 8 ವಿದ್ಯಾರ್ಥಿನಿಲಯಗಳು ಈ ಕೆಳಕಂಡ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿದ್ಯಾರ್ಥಿನಿಲಯಗಳಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಗೆ ಪ್ರವೇಶಾತಿ ಕಲ್ಪಿಸಲಾಗುತ್ತಿದೆ. ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಆಲೂರು ಟೌನ್, ಸಕಲೇಶಪುರ ಟೌನ್, ಚನ್ನರಾಯಪಟ್ಟಣ ಟೌನ್, ಬಂಟೇನಹಳ್ಳಿ ಬೇಲೂರು, ಕೊಣನೂರು, ಅರಕಲಗೂಡು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯ, ಹಾಸನ ಟೌನ್, ಹೊಳೆನರಸೀಪುರ ಟೌನ್. ಅರ್ಜಿ ಸಲ್ಲಿಸಲು  ಜುಲೈ 15 ಕಡೇ ದಿನ.

ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡಿದರೆ ದಂಡ
ಹಾಸನ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದವರಿಗೆ ಸ್ಥಳದಲ್ಲಿಯೇ ದಂಡವನ್ನು ಅಧಿಕಾರಿಗಳು ವಿಧಿಸಿದರು. ನಗರದ ಬಿ.ಎಂ. ರಸ್ತೆ, ಆರ್.ಸಿ. ರಸ್ತೆ ಸೇರಿದಂತೆ ನಾನಾ ಭಾಗಗಳ ಕ್ಯಾಂಟಿನ್ ಹಾಗೂ ಇತರೆ ಸ್ಥಳಗಳಲ್ಲಿ ಸಿಗರೇಟ್ ಮತ್ತು ಬೀಡಿ ಸೇದುವವರನ್ನು ಹಿಡಿದು ಸ್ಥಳದಲ್ಲಿಯೇ ತಂಬಾಕು ಮಾರುವವರಿಗೂ ಹಾಗೂ ಸೇದುವರಿಗೂ ದಂಡ ವಿಧಿಸಿದರು.
ಅಂಗಡಿ, ಹೋಟೇಲ್, ಇತರೆಗಳಲ್ಲಿ ಬೀಡಿ, ಸಿಗರೇಟ್ ಸೇದಿದ ಬಿಡಿ ಭಾಗಗಳು ಬಿದ್ದಿದ್ದರೂ ಅವರಿಗೆ ದಂಡ ವಿಧಿಸಲು ಮುಂದಾದರು. ಆಗೇ ತಂಬಾಕು ಹೆಸರುಳ್ಳ ನಾಮ ಫಲಕ ಹಾಕಿದ ಬೋರ್ಡ್‌ಗಳನ್ನು ತೆರವುಗೊಳಿಸಿದರು. ಇದೆ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಬ್ಬೀರ್ ಅಹಮದ್ಹಾಗೂ ಇತರೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಇದ್ದರು.

ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ
ಮೈಸೂರು: ವಿಶ್ವಮಾನವ ವಿದ್ಯಾರ್ಥಿ ವೇದಿಕೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಿರುವ ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. 2013- 14ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಮಾನವ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಎರಡು ಪರೀಕ್ಷೆಗಳಲ್ಲಿ ಕನ್ನಡದ ವಿಷಯದಲ್ಲಿ ಶೇ.100ಕ್ಕೆ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕುವೆಂಪು ಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಭುಜಗನಪುರ ತಿಳಿಸಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು 2 ಭಾವಚಿತ್ರ, ಕಾಲೇಜಿನ ವಿವರ ಹಾಗೂ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ಎಂ.ಜೆ. ಸುರೇಶ್‌ಗೌಡ, ಸಂಸ್ಥಾಪಕ ಅಧ್ಯಕ್ಷರು, ವಿಶ್ವಮಾನವ ವಿದ್ಯಾರ್ಥಿ ವೇದಿಕೆ, ನಂ.2618, ವಾಲ್ಮೀಕಿ ರಸ್ತೆ, ಒಂಟಿಕೊಪ್ಪಲ್, ಮೈಸೂರು -2 ಈ ವಿಳಾಸಕ್ಕೆ ಸಲ್ಲಿಸಬಹುದು. ಮಾಹಿತಿಗೆ ಮೊ. 9986151966 ಸಂಪರ್ಕಿಸಬಹುದು.

ಮಂಡ್ಯ ರಮೇಶ್‌ಗೆ ಆರ್ಯಭಟ ಪ್ರಶಸ್ತಿ
ಮೈಸೂರು: ರಂಗಭೂಮಿ ಸೇವೆಗಾಗಿ ಹೆಸರಾಂತ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಅವರಿಗೆ ಈ ಬಾರಿಯ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಗ್ರಾಮೀಣ ಹವ್ಯಾಸಿ ರಂಗಭೂಮಿ, ನಿನಾಸಂ, ರಂಗಾಯಣ ಮುಂತಾದ ಅನೇಕ ಸಂಸ್ಥೆಗಳಲ್ಲಿ ದುಡಿದು ಅನುಭವ ಗಳಿಸಿರುವ ಮಂಡ್ಯ ರಮೇಶ್, ಚಲನಚಿತ್ರಗಳಲ್ಲಿಯೂ ಹಾಸ್ಯ ನಟರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಆರ್ಯಭಟ ಸಂಸ್ಥೆಯು ಜೂ. 22 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್ ಪ್ರಶಸ್ತಿ ಸ್ವೀಕರಿಸುವರು.

ವೀರಶೈವ ಮಹಾಸಭಾ ಯುವ ಘಟಕದಿಂದ ರಕ್ತದಾನ ಶಿಬಿರ
ಬೇಲೂರು: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದವತಿಂದ ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿ ಹಾಗೂ ಸಿದ್ದಗಂಗಾ ಶ್ರೀ 107 ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ ಸುಮಾರು 48 ಯುವಕರು ಉಚಿತ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಸಫಲತೆಗೆ ಕಾರಣವಾದರು. ಯುವ ಘಟಕದ ಅಧ್ಯಕ್ಷ ಹೆಬ್ಬಾಳು ಉಮಾಶಂಕರ್ ಮಾತನಾಡಿ, ದಾನದಲ್ಲಿ ರಕ್ತದಾನ ಮಾಡುವದು ಶ್ರೇಷ್ಠವಾಗಿದೆ. ರಕ್ತದಾನ ಮನುಷ್ಯನ ಆರೋಗ್ಯ ವೃದ್ಧಿಗೆ ಮೂಲ ಕಾರಣ, ಪ್ರತಿಯೊಬ್ಬರು ಜಾತಿ ಭೇದವಿಲ್ಲದೆ ದಾನ ಮಾಡುವ ಏಕೈಕ ದಾನ ರಕ್ತದಾನವೆಂದರು.ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನರಸೇಗೌಡ ಮಾತನಾಡಿ, 17 ವಯೋವುತಿಯಿಂದ 67 ವಯಸ್ಸಿನಲ್ಲಿ ತನಕ ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೆ ಹಾಗೂ ಮಹಿಳೆಯರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ಎಂದರು.ರೇಣುಕುಮಾರ್, ಅಡಗೂರು ಆನಂದ್, ಕೆ.ಎಸ್.ಲಿಂಗೇಶ್, ಡಾ.ನರಸೇಗೌಡ  ವೀರಶೈವ ಸಿ.ಎಂ. ನಿಂಗರಾಜು, ರಾಜಶೇಖರ್ ಇದ್ದರು.

ಇಬ್ಬರು ನಾಪತ್ತೆ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಿಂದ ಇಬ್ಬರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ  ಚಾಮುಡಿಹಳ್ಳಿಗ್ರಾಮದ ವಾಸಿ ಮಣಿ ಎಂಬವರ ಪತಿ  ಕೃಷ್ಣೇಗೌಡ (35) ಎಂಬವರು ಈಗ್ಗೆ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದು, ಮೇ 15 ರಂದು ಬೆಳಗ್ಗೆ 9 ರಲ್ಲಿ   ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರ, ಗೋಧಿಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗಿಳಿ ಹಸಿರು ಮತ್ತು ಬಿಳಿ ಮಿಶ್ರಿತ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು ಎಂದು ಅವರ ಪತ್ನಿ  ಮಣಿ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲೂಕು  ಬೈರಂಬೂದಿ ಗ್ರಾಮದ ವಾಸಿ ಪುಟ್ಟಸ್ವಾಮಿಶೆಟ್ಟಿ ಎಂಬವರ ಪುತ್ರಿ ಸರಸ್ವತಿ (19) ಅವರು ಅರಸೀಕೆರೆ ನಗರದ ಅನಂತ ಸದ್ವಿದ್ಯಾ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಅರಸೀಕೆರೆ ಸಮಾಜ ಕಲ್ಯಾಣ ಹಾಸ್ಟೆಲ್‌ನಲ್ಲಿ ಇದ್ದರು. ಮೇ 17 ರಂದು ಹಾಸ್ಟೆಲ್‌ನಿಂದ ಹೊರಗೆ ಹೋದವಳು ವಾಪಸ್ಸು ಬಾರದೆ ಮತ್ತು ಊರಿಗೂ ಬಾರದೆ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಎಣ್ಣೆಗೆಂಪ್ಪು ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ.  ಮನೆಯಿಂದ ಹೋಗುವಾಗ  ಕೆಂಪು ಬಣ್ಣದ ಚೂಡಿದಾರ ಧರಿಸಿದ್ದರು ಎಂದು ತಂದೆ ಪುಟ್ಟಸ್ವಾಮಿಶೆಟ್ಟಿ ಪಟ್ಟಣ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಐಟಿಐ ಗೆ ಅರ್ಜಿ ಆಹ್ವಾನ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್, ಎಮ್‌ಆರ್‌ಎಸಿ ಮುಂತಾದ ವೃತ್ತಿಗಳ ತರಬೇತಿಗಾಗಿ ಎಸ್ಸೆಸ್ಸೆಲ್ಸಿ ಅಥವಾ  ಪಿಯುಸಿ   ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಜೂನ್ 5ರೊಳಗಾಗಿ ಈ ಸಂಸ್ಥೆಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅಥವಾ www.emptrg.kar.nic.in  ಈ ವೆಬ್‌ಸೈಟ್‌ಗೆ ಅರ್ಜಿ ಸಲ್ಲಿಸುವಂತೆ ಪ್ರಾಂಶುಪಾಲರು ಕೋರಿದ್ದಾರೆ.

ಕಂದೂರು ಹೋಬಳಿಯಲ್ಲಿ ಜನಸ್ಪಂದನ ಸಭೆ ಇಂದು
ಹಾಸನ: ಆಲೂರು ತಾಲೂಕು ಕುಂದೂರು ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಹಂಚೂರು ಗ್ರಾಪಂ ಆವರಣದಲ್ಲಿ ಜೂನ್ 2ರಂದು ಬೆಳಗ್ಗೆ 10 ಕ್ಕೆ  ಹಮ್ಮಿಕೊಳ್ಳಲಾಗಿದೆ ಎಂದು  ತಾಲ್ಲೂಕು ತಹಸೀಲ್ದಾರ್ ತಿಳಿಸಿದ್ದಾರೆ.

ಬಸ್ ಡಿಕ್ಕಿ: ಪಾದಚಾರಿ ಸಾವು
ಹಾಸನ: ಕೆಎಸ್‌ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ತಾಲೂಕಿನ ಉದಯಪುರದಲ್ಲಿ ನಡೆದಿದೆ. ಅಪ್ಪೇನಹಳ್ಳಿಗ್ರಾಮದ ದೇವರಾಜು (35) ಮೃತಪಟ್ಟ ದುರ್ದೈವಿ. ಡಿಕ್ಕಿ ಹೊಡೆದ ಬಸ್ ನಿಲ್ಲಿಸದೆ  ಪರಾರಿಯಾಗಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.