ಶಾಲೆಯತ್ತ ಮುಖ ಮಾಡಿದ ಮಕ್ಕಳು...
ಕ.ಪ್ರ. ವಾರ್ತೆ ಹಾಸನ ಮೇ 31
ಬೇಸಿಗೆ ರಜೆಯ ಮಜ ಮುಗಿದು ಶನಿವಾರದಿಂದ ಜಿಲ್ಲಾದ್ಯಂತ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಪ್ರಾರಂಭವಾಗಿರುವುದರಿಂದ ತಳಿರು ತೋರಣಗಳನ್ನು ಕಟ್ಟಿ ಶಾಲೆಗಳನ್ನು ಪ್ರಾರಂಭಿಸಿವೆ. ಅಗತ್ಯ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಈಗಾಗಲೇ ಇಲಾಖೆಗೆ ವಿತರಿಸಿದೆ. ಶಾಲಾ ಮಕ್ಕಳು ಬೇಸಿಗೆಯ ರಜೆಯನ್ನು ಮುಗಿಸಿ ಸಮವಸ್ತ್ರ ಧರಿಸಿ, ಬ್ಯಾಗ್ಗಳನ್ನು ಹಿಡಿದು ಶಾಲೆಗೆ ತೆರಳಿದ್ದಾರೆ.
ಇಲಾಖೆಯು 2014-15ನೇ ಸಾಲಿಗೆ ಪಠ್ಯ ಪುಸ್ತಕ ವಿತರಣೆಗಾಗಿ ಸರ್ಕಾರದ ಮುಂದೆ ಉಚಿತ 12,41,840 ಪಠ್ಯ ಪುಸ್ತಕಗಳು ಮತ್ತು 3,08,647 ಮಾರಾಟ ಪಠ್ಯ ಪುಸ್ತಕಗಳು ಸೇರಿದಂತೆ 15,50,487 ಪುಸ್ತಕಗಳ ಬೇಡಿಕೆಯನ್ನು ಇಡಲಾಗಿತ್ತು. ಈ ಪೈಕಿ 11,18,021 ಉಚಿತ ಪುಸ್ತಕಗಳು ಮತ್ತು 2,44,999 ಮಾರಾಟ ಪುಸ್ತಕಗಳು ಸೇರಿದಂತೆ ಒಟ್ಟಾರೆಯಾಗಿ 13,63,020 ಪುಸ್ತಕಗಳು ಈಗಾಗಲೇ ಸರಬರಾಜಾಗಿದೆ. 1,23,819 ಉಚಿತ ಪುಸ್ತಕಗಳು ಮತ್ತು 63,648 ಮಾರಾಟ ಪುಸ್ತಕಗಳು ಸೇರಿದಂತೆ 1,87,467 ಪುಸ್ತಕಗಳು ಬಾಕಿ ಬರಬೇಕಾಗಿದೆ. ತಾಲೂಕು ವಾರಿನಂತೆ ಆಲೂರಿಗೆ 62,919 ಉಚಿತ ಮತ್ತು 10,397 ಮಾರಾಟ ಪುಸ್ತಕಗಳು ಸೇರಿದಂತೆ 73,316 ಪುಸ್ತಕಗಳು ಸರಬರಾಜು ಆಗಿದೆ. ಅರಕಲಗೂಡಿಗೆ 1,56,909 ಉಚಿತ ಮತ್ತು 25,359 ಮಾರಾಟ ಪುಸ್ತುಗಳು ಸೇರಿದಂತೆ 1,82,268 ಪುಸ್ತಕಗಳು ಸರಬರಾಜು ಆಗಿದೆ. ಅರಸೀಕೆರೆಗೆ 1,81,681 ಉಚಿತ ಮತ್ತು 34,400 ಮಾರಾಟ ಪುಸ್ತಕಗಳು ಸೇರಿದಂತೆ 2,16,081 ಪುಸ್ತಕಗಳು ಸರಬರಾಜು ಆಗಿದೆ. ಬೇಲೂರಿಗೆ 1,28,847 ಉಚಿತ ಮತ್ತು 22,204 ಮಾರಾಟ ಪುಸ್ತಕ ಸೇರಿದಂತೆ 1,51,051 ಪುಸ್ತಕಗಳು ಸರಬರಾಜು ಆಗಿದೆ.
ಚನ್ನರಾಯಪಟ್ಟಣಕ್ಕೆ 1,79,855 ಉಚಿತ ಮತ್ತು 36,503 ಮಾರಾಟ ಪುಸ್ತಕ ಸೇರಿದಂತೆ 2,16,358 ಪುಸ್ತಕಗಳು ಸರಬರಾಜಾಗಿದೆ. ಹಾಸನಕ್ಕೆ 1,99,242 ಉಚಿತ ಮತ್ತು 75,381 ಮಾರಾಟ ಪುಸ್ತಕ ಸೇರಿದಂತೆ 2,74,623 ಪುಸ್ತಕಗಳು ಸರಬರಾಜು ಆಗಿದೆ. ಹೊಳೆನರಸೀಪುರಕ್ಕೆ 1,39,555 ಉಚಿತ ಮತ್ತು 17,093 ಮಾರಾಟ ಪುಸ್ತಕ ಸೇರಿದಂತೆ 1,56,648 ಪುಸ್ತಕಗಳು ಸರಬರಾಜು ಆಗಿದೆ ಮತ್ತು ಸಕಲೇಶಪುರ ತಾಲೂಕಿಗೆ 69,013 ಉಚಿತ ಮತ್ತು 14,502 ಮಾರಾಟ ಪುಸ್ತಕ ಸೇರಿದಂತೆ 83,515 ಪುಸ್ತಕಗಳು ಸರಬರಾಜು ಆಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು ತಿಳಿಸಿದ್ದಾರೆ.
ಅರಕಲಗೂಡು ತಾಲೂಕಿನ ಗಂಜಲಗೂಡಿನ ಶ್ರೀಲಕ್ಷ್ಮಿ ವಿದ್ಯಾಲಯ (6-7ನೇ ತರಗತಿ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ), ರಾಮನಾಥಪುರ ಹೋಬಳಿಯ ಕೋಟವಾಳಿನ ಬೆನಕ ಪ್ರಾಥಮಿಕ ಶಾಲೆ (6-7ನೇ ತರಗತಿ ಕನ್ನಡ ಮಾಧ್ಯಮ ಮತ್ತ ಆಂಗ್ಲಮಾಧ್ಯಮ), ಕೊಣನೂರು ಹೋಬಳಿಯ ಕಾವೇರಿ ಪ್ರಾಥಮಿಕ ಶಾಲೆ (6-7ನೇ ತರಗತಿ ಕನ್ನಡ ಮಾಧ್ಯಮ), ಹಾಸನದ ಕೆ.ಆರ್.ಪುರದ ಎಪಿಎ ಕಿರಿಯ ಪ್ರಾಥಮಿಕತ ಶಾಲೆ (1-5ನೇ ತರಗತಿ ಕನ್ನಡ ಮಾಧ್ಯಮ), ಉತ್ತರ ಬಡಾವಣೆಯ ಸಾವಿತ್ರಿ ಕಾನ್ವೆಂಟ್ (6-7ನೇ ತರಗತಿ ಆಂಗ್ಲ ಮಾಧ್ಯಮ), ಸಕಲೇಶಪುರದ ಸೆಂಟ್ ಆಗ್ನೇಸ್ ಕಿರಿಯ ಪ್ರಾಥಮಿಕ ಶಾಲೆ (6-7ನೇ ತರಗತಿ ಆಂಗ್ಲ ಮಾಧ್ಯಮ) ಮತ್ತು ಬಾಳ್ಳುಪೇಟೆಯ ಬ್ಲಾಸಂ ಕಿರಿಯ ಪ್ರಾಥಮಿಕ ಶಾಲೆ (6-7ನೇ ತರಗತಿ ಆಂಗ್ಲ ಮಾಧ್ಯಮ)ಗಳು ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳಾಗಿದ್ದು, ಇಲ್ಲಿ ದಾಖಲಾಗದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
-ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ
ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಆರಂಭೋತ್ಸವ
ಜಾವಗಲ್: ಜಾವಗಲ್ ಹೋಬಳಿಯಾದ್ಯಂತ ಶನಿವಾರದಂದು ಎಲ್ಲ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳು ಪುನಾರಂಭ ಗೊಂಡವು. ಬಹುತೇಕ ಶಾಲೆಗಳ ಮುಂಭಾಗವನ್ನು ತಳಿರು ತೋರಣಗಳಿಂದ ಶೃಂಗರಿಸಿ ಶಿಕ್ಷಕ ವರ್ಗದವರನ್ನು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. ಜಾವಗಲ್ ಸರ್ಕಾರಿ ಮಾದರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ವಿಶ್ವ ತಂಬಾಕು ವಿರೋಧಿ ದಿನವನ್ನು ಆಚರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಶಾಲಾಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ರಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ವ್ಯಾಸಂಗ ಮಾಡಬೇಕೆಂದು ತಿಳಿಸಿದರು.
ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಮಾತನಾಡಿ, ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತಿದ್ದು, ಅವುಗಳ ಸದ್ಬಳಕೆಯಾಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚಾಗಿ ಮಕ್ಕಳನ್ನು ಸೇರಿಸುವಂತೆ ಪೋಷಕರು ಆದ್ಯತೆ ನೀಡಬೇಕೆಂದರು.
ಸಹ ಶಿಕ್ಷಕ ಕೆ.ಎಸ್.ಸುರೇಶ್ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪಾರಿಣಾಮಗಳು ಮತ್ತು ಪರಿಸರ ಹಾಳಾಗುವ ಬಗ್ಗೆ ತಿಳಿಸಿ ಮಕ್ಕಳು ತಂಬಾಕು ಸೇವನೆಯಂತಹ ದುಶ್ಚಟಕ್ಕೆ ಬಲಿಯಾಗಬಾರದು ಹಾಗೂ ತಂಬಾಕಿನಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದರು.
ಮುಖ್ಯ ಶಿಕ್ಷಕ ಎಚ್.ಆರ್.ಶಿವಣ್ಣ ಮಾತನಾಡಿ, 4ನೇ ಮತ್ತು 7ನೇ ತರಗತಿಯ ತಲಾ 1 ಪಠ್ಯ ಪುಸ್ತಕವನ್ನು ಹೊರತು ಪಡಿಸಿ 1ರಿಂದ7ನೇ ತರಗತಿವರೆಗೆ ಎಲ್ಲ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ದಾನೇಗೌಡ, ಸರಸ್ವತಿ ಮಾತನಾಡಿದರು. ಹಾಲಪ್ಪ, ಧರ್ಮಪ್ಪ, ಸರ್ವಮಂಗಳ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

