ಹಾವೇರಿ

19 ಕಡೆ ವಿಧಾನಸಭೆ ಟಿಕೆಟ್ ತೃಪ್ತಿಕರ: ಡಾ೤ ಕಲಕೋಟಿ

Published On :

ಹಾನಗಲ್ಲ: ಹಾವೇರಿ ಜಿಲ್ಲೆಯಲ್ಲಿ ಶೇ. 90ರಷ್ಟು ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ರಾಜ್ಯದಲ್ಲಿ 28 ವಿಧಾನಸಭಾ ಕ್ಷೇತ್ರ ಕೇಳಿದ್ದೆವು. 19 ಕಡೆ ಅಲ್ಪಸಂಖ್ಯಾತರಿಗೆ ವಿಧಾನಸಭಾ ಟಿಕೆಟ್ ನೀಡಿರುವುದು ತೃಪ್ತಿ ತಂದಿದೆ. ಜಾತಿ, ಧರ್ಮದ ಹೆಸರಿನಿಂದಲೇ ಅಭ್ಯರ್ಥಿಯಾಗಲು ಮುಂದಾಗುವುದು ಸರಿಯಾದ ಕ್ರಮವಲ್ಲ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ೤ ಟಿ.ಎಚ್. ಕಲಕೋಟಿ ತಿಳಿಸಿದರು.
ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಆರಂಭವಾದ ಕ್ಷಣದಿಂದ ಹಾವೇರಿ ಜಿಲ್ಲಾದ್ಯಂತ ಸಂಚರಿಸಿ ಅಲ್ಪಸಂಖ್ಯಾತರ ಆಶಯ ತಿಳಿಯಲಾಗಿದ್ದು, ಶೇ. 90ರಷ್ಟು ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ, ರಕ್ಷಣೆ ನೀಡಬಲ್ಲದು ಎಂಬ ಸತ್ಯ ಎಲ್ಲರಿಗೂ ತಿಳಿದ ವಿಷಯ.
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಅಲ್ಪಸಂಖ್ಯಾತರು ಆಮಿಷಗಳಿಗೊಳಗಾಗಿ ಸದ್ಯ ಯಾವುದೇ ಪಕ್ಷದಲ್ಲಿ ಸೇರ್ಪಡೆಗೊಳ್ಳುತ್ತಿದ್ದರೂ ಕೂಡ ಅವರೆಲ್ಲ ಮತ ಚಲಾಯಿಸುವುದು ಕಾಂಗ್ರೆಸ್ ಪಕ್ಷಕ್ಕೇ ಎಂಬುದು ಖಚಿತ. ಯಾರು ಯಾವ ತಂತ್ರ ಬಳಸಿದರೂ ಕಾಂಗ್ರೆಸ್ ಪಕ್ಷಕ್ಕೆ ಲಾಭ ಎಂದು ಸ್ಪಷ್ಟಪಡಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ವಿಧಾನಸಭೆ ಅಭ್ಯರ್ಥಿಯಾಗಲು ಅವಕಾಶ ನೀಡಿಲ್ಲವಾದರೂ, ಕಾಂಗ್ರೆಸ್ ಪಕ್ಷ ಈ ಲೋಕಸಭಾ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಪ್ರಾಧಾನ್ಯ ನೀಡುತ್ತಿರುವುದನ್ನು ನಾವು ಸ್ಮರಿಸಬೇಕು. ರಾಜ್ಯದಲ್ಲಿ 28 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ನೀಡುವಂತೆ ನಮ್ಮ ಒತ್ತಾಸೆ ಇತ್ತು. ಆದರೆ, ಗೆಲ್ಲುವ 19 ಸ್ಥಾನಗಳನ್ನು ಮುಸ್ಲಿಂ ಸಮುದಾಯಕ್ಕೆ ನೀಡಿರುವುದು ಸಮಾಧಾನ, ತೃಪ್ತಿ ತಂದಿದೆ. ಜಾತಿ-ಧರ್ಮದ ಹೆಸರಿನಲ್ಲೇ ಪಕ್ಷಗಳ ಅಭ್ಯರ್ಥಿಯಾಗುವ ಇಚ್ಛೆ ವ್ಯಕ್ತಪಡಿಸುವ ರೀತಿ ಸರಿಯಲ್ಲ. ಅಭ್ಯರ್ಥಿಯಾಗುವವರ ಸಾಮರ್ಥ್ಯ, ಹಿರಿತನ ಮುಖ್ಯ ಎಂದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚು ಪಾಲು ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಖಚಿತ. ತಮ್ಮ ಸಮಾಜ ಬಂಧುಗಳೇ ಅದ ಯಾಸಿರ್ಖಾನ್ ಪಠಾಣ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇವೆ. ಹಾನಗಲ್ಲ ಕ್ಷೇತ್ರವನ್ನು ಮುಸ್ಲಿಂ ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ಬೇಡಿಕೆ ಇತ್ತು. ಅವರಿಗೆ ಬಿ ಫಾರಂ ಸಿಗದಿರಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಕಾರಣರಲ್ಲ. ಮನೋಹರ ತಹಸೀಲ್ದಾರ್ ಹಿರಿತನ ಆಧರಿಸಿ ಬಿ ಫಾರ್ಮ್ ನೀಡಲಾಗಿದೆ. ಪಠಾಣ 2 ದಿನ ಕಾಲಾವಕಾಶ ಕೇಳಿದ್ದು, ಚುನಾವಣಾ ಪ್ರಚಾರಕ್ಕೆ ಬರುವರೆಂಬ ವಿಶ್ವಾಸವಿದೆ. ತಟಸ್ಥರಾಗಿ ಉಳಿಯಲ್ಲ. ಮನವೊಲಿಸಲು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮುಂದಾಗಿದೆ ಎಂದರು.
ಎ.ಎಂ. ಪಠಾಣ, ಬಾಬಾಜಾನ ಬಂಕಾಪುರ, ಮೆಹಬೂಬ್ಸಾಬ ಮುಲ್ಲಾ, ಮಖಬೂಲ ಅಹಮದ್ ಸರ್ವಿಕೇರಿ, ಜಿ.ವಿ. ಕಂಬಾಳಿಮಠ, ಸಿ.ಎಸ್. ಬಡಿಗೇರ, ನ್ಯಾ. ಎಫ್.ಬಿ. ಮಡಿವಾಳರ, ವೀರೇಶ ಬೈಲವಾಳ, ಸುಭಾಸ್ ತಹಸೀಲ್ದಾರ, ಘನಶ್ಯಾಮ ದೇಶಪಾಂಡೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.