ಬಿಸಿಯೂಟಕ್ಕೆ ಚಾಲನೆ
ಹಾನಗಲ್ಲ: ಪಟ್ಟಣದ ಸೇಂಟ್ ಜೋಸೆಫ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ಯೋಜನೆಗೆ ಸ್ಥಳೀಯ ಕರ್ನಾಟಕ ಬ್ಯಾಂಕ್ ಶಾಖಾಧಿಕಾರಿ ಸುಧಾಕರ ಶೇಠ ಚಾಲನೆ ನೀಡಿದರು. ಅಕ್ಷರ ದಾಸೋಹ ಊಟದ ಬಗ್ಗೆ ಗೌರವ-ಭಕ್ತಿ ಇರಲಿ. ವಿದ್ಯಾರ್ಥಿಗಳೆಲ್ಲ ಬ್ಯಾಂಕಿನಲ್ಲಿ ಖಾತೆ ತೆಗೆದು ಉಳಿತಾಯಕ್ಕೆ ಮುಂದಾದರೆ ಮುಂದೆ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಬಲ್ಲದು. ಪಾಲಕರು ನೀಡಿದ ಚಿಲ್ಲರೆ ಕಾಸನ್ನು ಅನವಶ್ಯಕವಾಗಿ ಖರ್ಚು ಮಾಡದೆ ಕೂಡಿಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಉಪಶಾಖಾಧಿಕಾರಿ ರಾಜು, ಮುಖ್ಯೋಪಾಧ್ಯಾಯ ಎಸ್.ಸಿ. ಶೆಟ್ಟರ ಹಾಗೂ ಸಿಬ್ಬಂದಿ ಇದ್ದರು. ಶಿಕ್ಷಕ ಬಿ.ಎಸ್. ಲಮಾಣಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಯು.ಬಿ. ಹೇರೂರ ನಿರೂಪಿಸಿದರು.
ಗೊಬ್ಬರ ಮಾರಾಟ: ಸೂಚನೆ
ರಾಣಿಬೆನ್ನೂರು: ನಾಲ್ಕು ದಿನಗಳ ಹಿಂದೆ ಕೃಷಿ ಇಲಾಖೆ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರವೇ ಗೊಬ್ಬರ ವ್ಯಾಪಾರಸ್ಧರು ರಸಗೊಬ್ಬರ ಮಾರಬೇಕು. ಗೊಬ್ಬರದ ಜತೆಗೆ ಲಿಂಕ್ ಗೊಬ್ಬರವನ್ನು ಪಡೆಯುವಂತೆ ರೈತರಿಗೆ ಒತ್ತಡ ಹೇರುವುದಾಗಲಿ ಅಥವಾ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿರುವುದಾಗಲಿ ಕಂಡು ಬಂದಲ್ಲಿ ಸರ್ಕಾರದ ನಿಯಮನುಸಾರ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಾಗನಗೌಡ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಸಾಯಿಮಠ ಶ್ರೀಗಳಿಗೆ ಶ್ರದ್ಧಾಂಜಲಿ
ಹಾವೇರಿ: ಮರಾಠಾ ಸಮಾಜದ ಸ್ವಾಮೀಜಿ, ಬೆಂಗಳೂರಿನ ಗೋಸಾಯಿಮಠದ ಶ್ರೀ ಸುರೇಶ್ವರಾನಂದ ಮಹಾಸ್ವಾಮಿಗಳು ಇತ್ತೀಚೆಗೆ ಅಪಘಾತದಲ್ಲಿ ದೈವಾಧೀನರಾದ ಪ್ರಯುಕ್ತ ಹಾವೇರಿ ಜಿಲ್ಲಾ ಮರಾಠಾ ಮುಖಂಡರು ಭಾನುವಾರ ಸಭೆ ಸೇರಿ, ಶ್ರದ್ಧಾಂಜಲಿ ಅರ್ಪಿಸಿದರು. ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ಎಂ.ಎನ್. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲಪ್ಪ ಕಿತ್ತೂರ, ರವಿ ಮಾಂಡ್ರೆ, ರಾಮಣ್ಣ ಮಾಸನಕಟ್ಟಿ, ವಿಷ್ಣು ಜಾಧವ, ಸುಭಾಸ್ ಚವ್ಹಾಣ, ಉಮೇಶ ವಾಘ, ದೇವರಾಜ ಗುಂಡೆ, ಪ್ರಕಾಶ ಆರ್. ಮುಂಜೋಜಿ, ಶಿವಾಜಿ ಅಂಚಿ, ರಘುವೀರ ಕೆ. ಚವ್ಹಾಣ, ಆರ್.ಕೆ. ಗುಂಡೆ, ಕೃಷ್ಣಾ ಸಾಳುಂಕೆ ಇದ್ದರು.
ಸೈಕಲ್ ಸವಾರ ಸಾವು
ಹಾನಗಲ್ಲ: ದೇವರ ಪೂಜೆ ಮಾಡಿ ಬೈಸಿಕಲ್ ಮೇಲೆ ಮನೆಗೆ ಮರುಳುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಮೂಡೂರು ಗ್ರಾಮದಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ 9.30ಕ್ಕೆ ಮೂಡೂರಿನ ರುದ್ರಪ್ಪ ಸೋಮಪ್ಪ ಪೂಜಾರ (55) ಸಮೀಪದ ಅಜಗುಂಡಿಕೊಪ್ಪದ ಬಸವೇಶ್ವರ ದೇವಸ್ಥಾನದ ಪೂಜೆ ಮುಗಿಸಿ ಮರಳುವಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ರುದ್ರಪ್ಪನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆಂದು ಮೃತನ ಸಹೋದರ ನಾಗಲಿಂಗಪ್ಪ ಪೂಜಾರ ಹಾನಗಲ್ಲ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

