ಹಾವೇರಿ

ಉತ್ತಮ ಸರ್ವೀಸ್ ನೀಡದ ರಸ್ತೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಆ. 10
ಸುಗಮ ಸಂಚಾರಕ್ಕಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ-4ರ ದುರವಸ್ಥೆಗೆ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಏನೂ ಕಡಿಮೆಯಿಲ್ಲ. ಮೋಟೆಬೆನ್ನೂರ ಗ್ರಾಮದಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸುಗಮ ಸಂಚಾರಕ್ಕೆ ಉತ್ತಮ ಸರ್ವೀಸ್ ನೀಡಲು ಈ ರಸ್ತೆ ವಿಫಲವಾಗಿದೆ.
ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆಗಳು ಬೇಕು. ಇದಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದ್ದು, ಮಹಾತ್ವಾಕಾಂಕ್ಷಿ ಯೋಜನೆಯೊಂದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸದೆ ಅಕ್ಷರಶಃ ಅಪಘಾತದ ಕೇಂದ್ರವಾಗುತ್ತಿದೆ.
ವಾಸ್ತವ ಅಂಶವನ್ನು ಹತ್ತಿರದಿಂದ ಗಮನಿಸಿದಾಗ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟೇ ಏಕೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದುರಸ್ತಿ ಕಾಣದ ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಮಾಹಿತಿ ಇಲ್ಲದೆ ಮುಂದೆ ಚಲಿಸಿದರೆ ಅಪಘಾತವಾಗುವ ಸಂಭವವಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಜತೆಗೆ ಜನರು ಪ್ರಯಾಣ ಮಾಡಬೇಕಾಗಿದೆ.
ಚಾಲಕರ ಆಕ್ರೋಶ
ಹೆದ್ದಾರಿಯಿಂದ ಬಸ್ಸನ್ನು ಕೆಳಗಿಳಿಸಿ ಮೋಟೆಬೆನ್ನೂರ ಗ್ರಾಮಕ್ಕೆ ಪ್ರವೇಶಿಸದಿದ್ದಲ್ಲಿ ಅಧಿಕಾರಿಗಳಿಂದ ನೋಟಿಸ್ ಪಡೆಯಬೇಕಾಗುತ್ತದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಉದ್ದೇಶದಿಂದ ಬಸ್ಸನ್ನು ಕೆಳಗಿಳಿಸಿದರೆ ಸರ್ವೀಸ್ ರಸ್ತೆಯಲ್ಲಿನ ತಗ್ಗು ಗುಂಡಿಗಳಿಂದ ವಾಹನಕ್ಕೆ ಧಕ್ಕೆ ತಪ್ಪಿದ್ದಲ್ಲ. ರಿಪೇರಿಗೆ ತಗಲುವ ವೆಚ್ಚವನ್ನು ಸಂಬಂಧಿಸಿದ ಚಾಲಕನ ಸಂಬಳದಲ್ಲಿ ಕಡಿತಗೊಳಿಸಲಾಗುತ್ತದೆ. ಸಾರಿಗೆ ಸಂಸ್ಥೆ ಚಾಲಕರು ಮಾತ್ರ ನಿತ್ಯ ಧರ್ಮಸಂಕಟ ಅನುಭವಿಸುತ್ತಿದ್ದಾರೆ. ಅಪಘಾತಕ್ಕೆ ಹಲವಾರು ಕಾರಣಗಳಿದ್ದರೂ ಅವುಗಳಲ್ಲಿ ಸರ್ವೀಸ್ ರಸ್ತೆಯೂ ಒಂದಾಗಿದೆ ಎಂದು ಚಾಲಕರೊಬ್ಬರು ಪತ್ರಿಕೆಗೆ ತಿಳಿಸಿದರು.
ಪರದಾಟ ತಪ್ಪಿಲ್ಲ
ಸುಮಾರು 17 ಸಾವಿರ ಜನಸಂಖ್ಯೆ ಹೊಂದಿರುವ ಮೋಟೆಬೆನ್ನೂರ ಗ್ರಾಮದಿಂದ ರಿಯಾಯಿತಿ ಪಾಸ್ ಹೊಂದಿರುವ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಹಾವೇರಿ, ರಾಣಿಬೆನ್ನೂರು ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಸಾರಿಗೆ ಸಂಸ್ಥೆಯ ಎಲ್ಲ ವೇಗದೂತ ಬಸ್ಸುಗಳಿಗೆ ನಿಲುಗಡೆಗೆ ಅವಕಾಶವಿದ್ದರೂ ಸರ್ವೀಸ್ ರಸ್ತೆ ದುರಸ್ತಿಯಿಂದ ಚಾಲಕರು ಮಾತ್ರ ಹೆದ್ದಾರಿಯಿಂದ ಕೆಳಗಿಳಿಸಲು ಸಿದ್ಧರಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ಶಾಲೆ-ಕಾಲೇಜುಗಳಿಗೆ ತಡವಾಗಿ ತೆರಳುವಂತಾಗಿದೆ. ಅದರಲ್ಲೂ ವಿದ್ಯಾರ್ಥಿನಿಯರ ಗೋಳಂತೂ ಹೇಳ ತೀರದಾಗಿದೆ.
ಕೆಳಗಿಳಿಯದ ಬಸ್
ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮೋಟೆಬೆನ್ನೂರ ಗ್ರಾಮದಲ್ಲಿ ಸೇತುವೆ ನಿರ್ಮಿಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮೇಲ್ಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ವೀಸ್ ರಸ್ತೆ ದುರಸ್ತಿಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿರುವ ಚಾಲಕರು ಸೇತುವೆ ಮೇಲ್ಭಾಗದಲ್ಲಿ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸಿಕೊಳ್ಳುವುದನ್ನು ಮಾಡುತ್ತಿರುವುದು ನಿಯಮಬಾಹಿರ ಎನ್ನುತ್ತಾರೆ ಗ್ರಾಮಸ್ಥ ಎಸ್.ಎಸ್. ಕಿರೇಸೂರ.
ಸಂಘರ್ಷಕ್ಕೆ ದಾರಿ
ಸಾಮಾನು-ಸರಂಜಾಮು ಕೈಯಲ್ಲಿ ಹಿಡಿದುಕೊಂಡು ಕಾಲ್ನಡಿಗೆಯಲ್ಲಿ ಸುಮಾರು ದೂರ ಸಂಚರಿಸಿ ಗ್ರಾಮಕ್ಕೆ ಬರುವುದು ಮಹಿಳೆಯರು, ಮಕ್ಕಳು, ವಯೋವೃದ್ಧರಿಂದ ಸಾಧ್ಯವಾಗದ ಮಾತು. ಹೀಗಾಗಿ ಬಸ್ಸುಗಳನ್ನು ಸೇತುವೆಯಿಂದ ಕೆಳಗಿಳಿಸುವಂತೆ ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕರ ಜತೆ ಸಂಘರ್ಷಕ್ಕಿಳಿಯುವ ದೃಶ್ಯಗಳು ನಿತ್ಯ ಕಾಣಸಿಗುತ್ತವೆ.
ಹೋರಾಟಕ್ಕೆ ಸಿದ್ಧ
ಗ್ರಾಮದಲ್ಲಿ ಕೃಷಿಯೇ ಪ್ರಧಾನವಾಗಿದ್ದು, ಸರ್ವೀಸ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ಎತ್ತಿನ ಗಾಡಿಗಳು ಕೂಡ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮ ಜರುಗಿಸದಿದ್ದರೆ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

- ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.