ಎಬಿವಿಪಿಯಿಂದ ಹೆದ್ದಾರಿ ತಡೆ
ಹಾವೇರಿ: ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ವತಿಯಿಂದ ಮಂಗಳವಾರ ಬೆಳಗ್ಗೆ ಜಿ.ಎಚ್. ಕಾಲೇಜಿನ ಮುಂಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ಕಾರ್ಯಕರ್ತ ಪುಟ್ಟರಾಜ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ದೂರಿದರು.
ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಎಬಿವಿಪಿ ಆಗಸ್ಟ್ ತಿಂಗಳಿನಲ್ಲಿ ವ್ಯಾಪಕ ಜನಾಂದೋಲನ ಅಭಿಯಾನವನ್ನು ಹಂತ ಹಂತವಾಗಿ ನಡೆಸಲಿದೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಜನ ವಿರೋಧಿ ಮತ್ತು ತುಷ್ಟೀಕರಣ ನೀತಿಯ ವಿರುದ್ಧ ಜಾಗೃತಿ ಮೂಡಿಸಲಿದೆ ಎಂದರು.
ಕೇಂದ್ರದ ಯುಪಿಎ ಸರ್ಕಾರ ಹಲವಾರು ಹಗರಣಗಳ ಮೂಲಕ ರು. 12 ಲಕ್ಷ ಕೋಟಿಗೂ ಮೀರಿ ಭ್ರಷ್ಟಾಚಾರ ಎಸಗಿದೆ. ಇದರಲ್ಲಿ ಹಲವಾರು ಸಚಿವರು ಭಾಗಿಯಾಗಿರುವುದು ಸಾಬೀತಾಗಿದೆ. ಜತೆಗೆ, ಕೇಂದ್ರ ಸರ್ಕಾರ ಹಣದುಬ್ಬರ ಮತ್ತು ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ದೂರಿದರು.
ರುಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿದೆ, ಬಡತನ ಸತತವಾಗಿ ವೃದ್ಧಿಯಾಗುತ್ತಿದೆ. ಸರ್ಕಾರ ವಿದೇಶಿ ನೀತಿ ರೂಪಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರ ಜತೆಗೆ ಆಂತರಿಕ ಸುರಕ್ಷೆ ಮತ್ತು ಬಾಹ್ಯ ಸುರಕ್ಷೆಯನ್ನು ಕಾಪಾಡುವಲ್ಲೂ ಎಡವಿದೆ. ಈ ಕುರಿತಂತೆ ಯುವ ಜನತೆ ಮತ್ತು ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆಸುತ್ತಿರುವ ರಾಷ್ಟ್ರವ್ಯಾಪಿ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಆನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು. ಗಣೇಶ ಹೆಬಲಿ, ಪರಮೇಶ ಬಡಿಗೇರ, ಮಾಲತೇಶ, ಮಾಯಪ್ಪ, ಜಗದೀಶ, ಷಣ್ಮುಖ ಲಮಾಣಿ, ಪ್ರಕಾಶ ಲಮಾಣಿ, ಕುಮಾರ ಆರ್., ಶ್ರೀಧರ ದೊಡ್ಡಮನಿ, ನಾಗರಾಜ ಬಡಿಗೇರ, ವೀಣಾ, ಅನ್ನಪೂರ್ಣಾ, ಗಣೇಶ ಕುರಿಯವರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ತಾಲೂಕು ಸಂಚಾಲಕ ನಾಗರಾಜ ಹುರಳಿಕುಪ್ಪಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

