ಇಂದು ದಾನಮ್ಮದೇವಿ ರಥೋತ್ಸವ
ಬ್ಯಾಡಗಿ: ಪಟ್ಟಣದ ನೆಹರು ನಗರದಲ್ಲಿರುವ ದಾನಮ್ಮದೇವಿ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ಡಿ. 2ರಂದು ಜರುಗಲಿದೆ. ಸಕಲ ವಾದ್ಯ ವೈಭವಗಳೊಂದಿಗೆ ದೇವಸ್ಥಾನದಿಂದ ಸಂಜೆ 5 ಗಂಟೆಗೆ ಪ್ರಾರಂಭವಾಗುವ ರಥೋತ್ಸವವು ಗ್ರಾಮದೆಲ್ಲೆಡೆ ಸಂಚರಿಸಿ ಬಳಿಕ ದೇವಸ್ಥಾನ ತಲುಪಲಿದೆ. ಇದಕ್ಕೂ ಮುನ್ನ ಸಂಜೆ 4ಕ್ಕೆ ದಾನಮ್ಮದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 7ಕ್ಕೆ ಕಾರ್ತಿಕೋತ್ಸವ ನಡೆಯಲಿದೆ.
ಸುಗಮ ಸಂಗೀತ: ದಾನಮ್ಮದೇವಿ ರಥೋತ್ಸವದ ಅಂಗವಾಗಿ ಪ್ರಸಿದ್ಧ ಹಿನ್ನೆಲೆ ಗಾಯಕಿ ಸುಜಾತ ಗುರವ್ ಇವರಿಂದ ಸಂಜೆ 7.30 ಕ್ಕೆ ಸುಗಮ ಸಂಗೀತ ಸೇವೆ ನಡೆಯಲಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ಜರುಗಿದ ಪುರಾಣ ಮಂಗಲೋತ್ಸವಕ್ಕೆ ನಾಳೆ (ಡಿ.2) ತೆರೆ ಬೀಳಲಿದೆ. ದೇವಸ್ಥಾನದ ಆವರಣದಲ್ಲಿ ಮುಂಜಾನೆ 10.30ಕ್ಕೆ ನಡೆಯುವ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ಬಾಲೆಹೊಸೂರಿನ ದಿಂಗಾಲೇಶ್ವರಶ್ರೀಗಳು ವಹಿಸಲಿದ್ದು, ಎಸ್.ಆರ್. ಪಾಟೀಲ, ಪಿ.ಕೆ. ನವಲೆ, ಬಾಬಣ್ಣ ಮೇಲಗಿರಿ, ಮುರಿಗೆಪ್ಪ ಶೆಟ್ಟರ, ಶಿವಲಿಂಗಪ್ಪ ಸಂಕಣ್ಣನವರ, ಮೃತ್ಯುಂಜಯ ಪಾಟೀಲ, ಗುಲಾಬಮ್ಮ ಕಬ್ಬೂರ, ಸಂಕಮ್ಮ ಸಂಕಣ್ಣನವರ, ಸಂಧ್ಯಾರಾಣಿ ದೇಶಪಾಂಡೆ, ಮಾಲತೇಶ ಅರಳಿಮಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇಂದು ಪ್ರತಿಭಟನೆ
ಹಾವೇರಿ: ಜಿಲ್ಲೆಯ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಬಡಜನರ ಅಕ್ರಮ ಸಕ್ರಮ ಜಮೀನುಗಳ ಪಟ್ಟಾ ನೀಡುವುದು ಸೇರಿದಂತೆ ಎ.ಜಿ. ಸದಾಶಿವ ಆಯೋಗದ ವರದಿ ಅನುಷ್ಠಾನ, ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.2ರಂದು ಪ್ರತಿಭಟನಾ ರ್ಯಾಲಿ ಹಾಗೂ ರಾಸ್ತಾ ರೋಖೋ ಹಮ್ಮಿಕೊಂಡಿದೆ. ಇಲ್ಲಿನ ಮುರಘಾಮಠದಿಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಪ್ರತಿಭಟನೆಯು ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಬಸವ್ವನವರ, ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ ಕೋರಿದ್ದಾರೆ.
ಪರಿಹಾರ ನೀಡಲು ಮನವಿ
ಹಿರೇಕೆರೂರು: ತಾಲೂಕಿನ ಮಕರಿ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ಒಡೆದು ಹಾನಿಗೀಡಾದ ರೈತರ ಜಮೀನುಗಳಿಗೆ ಮಾಜಿ ಶಾಸಕ ಬಿ.ಸಿ. ಪಾಟೀಲ ಭೇಟಿ ನೀಡಿ ಪರಿಸೀಲಿಸಿದರು. ಆಗ ರೈತರು ಹಾನಿಗೀಡಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಆರ್.ಎನ್. ಗಂಗೋಳ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಸೇರಿದಂತೆ ನೂರಾರು ರೈತರು ಇದ್ದರು.
ಅತಿಕ್ರಮಣ ತೆರವುಗೊಳಿಸಲು ಆಗ್ರಹ: ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 1
ಇಲ್ಲಿನ ಮುಖ್ಯರಸ್ತೆಯಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136ರಲ್ಲಿನ ಅತಿಕ್ರಮಣ ತೆರವುಗೊಳಿಸಿ ದ್ವಿ-ಮುಖ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ, ಮುಖ್ಯರಸ್ತೆ ಅಗಲೀಕರಣ ಸಮಿತಿಯು ಡಿ. 2ರಿಂದ ಅನಿರ್ಧಿಷ್ಟಾವಧಿವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.
ಪಟ್ಟಣದ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಮುಖ್ಯರಸ್ತೆ ಅಗಲೀಕರಣ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮುಖ್ಯರಸ್ತೆ ಅಕ್ಕಪಕ್ಕದ ಜಾಗವನ್ನು ಸಾರ್ವಜನಿಕರು ಅತಿಕ್ರಮಿಸಿಕೊಂಡಿದ್ದು, ಇದರಿಂದ ಸುಗಮ ಸಂಚಾರ ಅಸಾಧ್ಯವಾಗಿದೆ.
ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಸಮಿತಿಯ ಅಧ್ಯಕ್ಷ ಸುರೇಶ ಛಲವಾದಿ ಹಾಗೂ ಕಾರ್ಯದರ್ಶಿ ಜಿನ್ನಾ ಹಲಗೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ
ಹಾವೇರಿ: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಆಹಾರ ಧಾನ್ಯಗಳಾದ ಗೋವಿನಜೋಳ, ಬತ್ತ, ರಾಗಿ ಮುಂತಾದ ಕಾಳುಕಡಿಯನ್ನು ರಾಜ್ಯ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ಖರೀದಿಸಿ ಅವುಗಳನ್ನು ಸಾಗಿಸಲು ಸರ್ಕಾರ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸುವಂತೆ ಕೆಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಎಫ್. ಕಟ್ಟೆಗೌಡರ ಆಗ್ರಹಿಸಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕೇವಲ ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡುವ ದುರುದ್ದೇಶದಿಂದ ಈ ಟೆಂಡರ್ ಕರೆದಿದ್ದು, ಇದರಿಂದ ಅನೇಕ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗಲಿದೆ. ಈ ಟೆಂಡರ್ನಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಜಿಲ್ಲೆಗಳಲ್ಲಿ 2 ರಿಂದ ರು. 3.5 ಕೋಟಿ ವ್ಯವಹಾರ ನಡೆಸಿದ ಬಗ್ಗೆ ದಾಖಲೆ ಒದಗಿಸಲು ಹೇಳಲಾಗಿದೆ. ಆದರೆ, ಹಾವೇರಿ ಮತ್ತು ಮೈಸೂರು ಜಿಲ್ಲೆಯಲ್ಲಿ ಮಾತ್ರ ಟೆಂಡರ್ನಲ್ಲಿ ಪಾಲ್ಗೊಳ್ಳಲು ರು. 13 ಕೋಟಿ ವ್ಯವಹಾರ ನಡೆಸಿರಬೇಕು ಎಂಬ ಕಟ್ಟಳೆ ವಿಧಿಸಲಾಗಿದೆ. ಇದು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಸರ್ಕಾರದ ಈ ದ್ವಂದ್ವ ನೀತಿ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದರು.
ನಾಳೆ ಶ್ರೀಗಳಿಂದ ಪಾದಯಾತ್ರೆ
ಬ್ಯಾಡಗಿ: ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗ ಶ್ರೀಗಳು ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಡಿ. 3ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ನಡೆಸಲಿದ್ದಾರೆ.ಆದಿಕೇಶವ ದೇವಸ್ಥಾನದಿಂದ ಪ್ರಾರಂಭವಾಗುವ ಪಾದಯಾತ್ರೆ ಗ್ರಾಮದೆಲ್ಲೆಡೆ ಸಂಚರಿಸುವುದು, ಬಳಿಕ ದೇವಸ್ಥಾನದ ಆವರಣದಲ್ಲಿ ನಡೆಯುವ ಪಂಚಮಸಾಲಿ ಸಮಾಜದ ಸಭೆಯಲ್ಲಿ ಹರಿಹರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಮಠದ ಕಟ್ಟಡದ ಕುರಿತು ಚರ್ಚೆ ನಡೆಯಲಿದೆ. ತಾಲೂಕಾಧ್ಯಕ್ಷ ನಾಗನಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸುವರು. ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಗೌರಾವಾಧ್ಯಕ್ಷ ಬಾವಿಬೆಟ್ಟಪ್ಪ, ಬಿ.ಸಿ. ಉಮಾಪತಿ ಹಾಗೂ ಜಿಲ್ಲಾಧ್ಯಕ್ಷ ಎಸ್.ಆರ್. ಅಂಗಡಿ, ಸಮಾಜದ ಮುಖಂಡರು ಉಪಸ್ಥಿತರಿರುವರು. ಪಂಚಮಸಾಲಿ ಯುವ ಘಟಕ, ಹರಸೈನ್ಯದ ಕಾರ್ಯಕರ್ತರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಶಂಕರಗೌಡ ಪಾಟೀಲ ಕೋರಿದ್ದಾರೆ.
ಸಚಿವ ಸ್ಥಾನ ನೀಡಿ: ಮನವಿ
ಶಿಗ್ಗಾಂವಿ: ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅನುಭವ ಹೊಂದಿರುವ ಹಾನಗಲ್ಲ ಶಾಸಕ ಮನೋಹರ ಎಸ್. ತಹಶೀಲ್ದಾರಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಪ್ರಕಾಶ ಮಾರುತಿ ಹಾದಿಮನಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಸಿಎಂ ಸಿದ್ದರಾಮನಯ್ಯ, ಸಚಿವ ಸತೀಶ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

