ಚಳಿಗೂ ಬರವೇ?
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 15
ರಾಜ್ಯದ ಎಲ್ಲ ಭಾಗಗಳಲ್ಲೂ ಜನ ತಾಳಲಾರದ ಚಳಿಯಿಂದ ನಡುಗುತ್ತಿದ್ದರೆ, ರಾಣಿಬೆನ್ನೂರು ತಾಲೂಕು ಅಂಥ ಅನುಭವದಿಂದ ವಂಚಿತವಾಗಿದೆ. ಕುಮದ್ವತಿ ನದಿ ದಡದ ಗ್ರಾಮಗಳನ್ನು ಬಿಟ್ಟರೆ, ಬೇರೆಡೆ ಹೇಳಿಕೊಳ್ಳುವಷ್ಟು ಚಳಿ ಬೀಳದಿರುವ ಕಾರಣ ಹಿಂಗಾರು ಹಾಗೂ ಚಳಿಗಾಲದ ಬೆಳೆಗಳಾದ ಕಡಲೆ, ಬಿಳಿ ಜೋಳ, ಕುಸುಬಿ, ಆಲೂಗೆಡ್ಡೆ, ನವಣೆ ಮುಂತಾದವುಗಳ ಇಳುವರಿ ಕುಸಿಯುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಕುಮದ್ವತಿ ನದಿಯ ದಡದಲ್ಲಿರುವ ಗ್ರಾಮಗಳಾದ ಚಿಕ್ಕಮಾಗನೂರು, ಹಿರೇಮಾಗನೂರು, ಲಿಂಗದಹಳ್ಳಿ, ಮಣಕೂರು, ಮುಷ್ಟೂರು, ಕೋಣನತಲಿ, ನಿಟ್ಟೂರು, ಕುಪ್ಪೆಲೂರು, ಯಲಬಡಗಿ, ಸಣ್ಣಸಂಗಾಪುರ, ತುಂಗಭದ್ರಾ ನದಿ ದಡದಲ್ಲಿರುವ ತುಮ್ಮಿನಕಟ್ಟಿ, ಮಾಳನಾಯಕನಹಳ್ಳಿ, ಕೂಲಿ, ಕೋಟಿಹಾಳ, ನಂದಿಹಳ್ಳಿ, ಮುದೇನೂರು, ಹೊಳಿ ಆನ್ವೇರಿ, ಮಾಕನೂರು, ಕವಲೆತ್ತು, ಕೊಡಿಯಾಲ ಹೊಸಪೇಟೆ, ನಲವಾಗಲ, ನದಿ ಹರಳಹಳ್ಳಿ, ಐರಣಿ, ಹಿರೇಬಿದರಿ, ಮೇಡ್ಲೆರಿ, ಹರನಗಿರಿ, ಕುದರಿಹಾಳ, ಚಿಕ್ಕ ಕುರುವತ್ತಿ, ಚೌಡಯ್ಯದಾನಪುರ ಗ್ರಾಮಸ್ಥರಿಗೆ ಮಾತ್ರ ಚಳಿಯ ಅನುಭವ ಆಗಿದೆ. ಹೀಗಾಗಿ, ರೈತರು ಇಲ್ಲಿ ಹಿಂಗಾರು ಬೆಳೆಗೆ ಹೊಲಗಳನ್ನು ಹದಗೊಳಿಸುತ್ತಿದ್ದಾರೆ.
ನಡುಗಿಸುತ್ತಿದೆ ಚಳಿ...
ತುಂಗಭದ್ರಾ ಮತ್ತು ಕುಮದ್ವತಿ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ ಪಕ್ಕದ ಗ್ರಾಮಗಳಲ್ಲಿ ಚಳಿ ಜನರನ್ನು ನಡುಗಿಸುತ್ತಿದೆ. ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ತಾಜಾ ತರಕಾರಿ ಮಾರಲು ತರುತ್ತಿರುವ ರೈತರು, ನೌಕರರು, ವಿದ್ಯಾರ್ಥಿಗಳು, ಕೂಲಿಕಾರರು ಚಳಿಗೆ ತತ್ತರಿಸಿದ್ದಾರೆ. ಸ್ವೆಟರ್, ಮಫ್ಲರ್, ಟೋಪಿಗಳ ಮೊರೆ ಹೋಗಿ, ಚಳಿಯಿಂದ ರಕ್ಷಣೆ ಪಡೆಯಲು ಹವಣಿಸುತ್ತಿದ್ದಾರೆ. ಕೆಲವರು ಮೈತುಂಬ ಕಂಬಳಿ ಹೊದ್ದುಕೊಂಡು, ಸೂರ್ಯ ಆಗಮಿಸಿ ಚಳಿ ಓಡಿಸಲೆಂದು ಕಾಯುತ್ತಿರುತ್ತಾರೆ. ಮತ್ತೆ ಕೆಲವರು ಬೆಂಕಿ ಕಾಯಿಸುವ ದೃಶ್ಯಗಳು ಹಳ್ಳಿಗಳಲ್ಲಿ ಕಂಡುಬರುತ್ತಿವೆ.
ಸಂಜೆ ಹಾಗೂ ರಾತ್ರಿ ಚಳಿಯಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಹಾಗೂ ನಾಲಗೆಗೆ ರುಚಿ ನೀಡಲು ರೈತರು ಮನೆಗಳಲ್ಲಿ ಬಿಳಿ ಜೋಳ, ಹೈಬ್ರೀಡ್ ಜೋಳದ ಹುರಿಗಾಳುಗಳನ್ನು, ಹುರುಳಿ ಕಾಳು, ಹುಣಿಸೆ ಬೀಜಗಳನ್ನು ಮೆಲ್ಲುತ್ತಿರುತ್ತಾರೆ. ನಗರದ ಜನತೆ ಖಾರಾ ಮಂಡಕ್ಕಿ ಜತೆಗೆ ಬಿಸಿ ಮಿರ್ಚಿ ಮೊರೆ ಹೋಗಿದ್ದಾರೆ. ವಿವಿಧ ವೃತ್ತಗಳಲ್ಲಿ ಗೋಭಿ ಮಂಚೂರಿ, ಪಾನಿಪೂರಿ ಮಾರಾಟವೂ ಬಿರುಸಿನಿಂದ ಸಾಗಿದೆ.
ಹಲವೆಡೆ ಚಳಿ ಮಾಯ
ಆದರೆ, ನದಿಗಳಿಂದ ದೂರದಲ್ಲಿರುವ ಗ್ರಾಮಗಳಲ್ಲಿ ಚಳಿಯ ವಾತಾವರಣ ಮಾಯವಾಗಿದೆ. ಮುಂಗಾರಿನಲ್ಲಿ ಬಿತ್ತಿದ್ದ ಹತ್ತಿ, ಗೋವಿನಜೋಳ ಕಳಪೆ ಬಿತ್ತನೆ ಹಾಗೂ ಅಸಮರ್ಪಕ ಮಳೆಯಿಂದಾಗಿ ಸರಿಯಾಗಿ ಕೈಗೆ ಬರಲಿಲ್ಲ. ಸಾಕಷ್ಟು ಮಳೆ ಬೀಳದೆ ಕೆರೆಗಳಲ್ಲೂ ನೀರು ಸಂಗ್ರಹಗೊಂಡಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಆಗುತ್ತದೆ. ಇನ್ನು ಹಿಂಗಾರು ಬೆಳೆಗೇನು ಮಾಡೋಣ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ಚಳಿಗಾಲದಲ್ಲಿ ಜನರು ಅಸ್ತಮಾ, ಕೆಮ್ಮು, ನೆಗಡಿ ತೊಂದರೆಗಳಿಂದಲೂ ಬಳಲುತ್ತಿದ್ದಾರೆ. ದಕ್ಷಿಣಾಯನ ಕಾಲ ಬೇರೆ. ರಾತ್ರಿ ದೀರ್ಘವಾಗಿರುತ್ತದೆ. ಹೀಗಾಗಿ, ಚಹಾ-ಕಾಫಿ ಸೇವನೆ ಪ್ರಮಾಣವೂ ಹೆಚ್ಚಿದೆ.
ರಾಣಿಬೆನ್ನೂರಿನ ಬೀದಿಗಳಲ್ಲಿ ವ್ಯಾಪಾರಸ್ಥರು ಸ್ವೆಟರ್, ಮಫ್ಲರ್, ಜರ್ಕಿನ್ ಹಾಗೂ ಟೋಪಿಗಳ ವಿಕ್ರಯದಲ್ಲಿ ತೊಡಗಿದ್ದಾರೆ. ಆದರೆ, ನಗರದಲ್ಲಿ ಚಳಿ ಅಷ್ಟಾಗಿಲ್ಲದೆ, ಮುಂಜಾನೆ ವಾಕಿಂಗ್ ಬರುವವರೂ ಸ್ವೆಟರ್, ಮಫ್ಲರ್ಗಳಿಲ್ಲದೆ ಹೊರಗೆ ಆರಾಮವಾಗಿ ಅಡ್ಡಾಡುತ್ತಾರೆ.
-ಸಾಬ್ಜನ್ ಇಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

