ರೈತರನ್ನು ಸರ್ಕಾರ ವಂಚಿಸುತ್ತಿದೆ: ವಡವಟ್ಟಿ ಖೇದ
ಶಿಗ್ಗಾಂವಿ: ಎಲ್ಲ ಸರ್ಕಾರಗಳೂ ರೈತನನ್ನು ವಂಚಿಸುತ್ತಾ ಬಂದಿವೆ. ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತಂದು ರೈತಪರ ಸರ್ಕಾರ ಎಂದು ಹೇಳಿಕೊಳ್ಳುತ್ತಾ ಸಾಲದಿಂದ ರೈತನನ್ನು ಮುಕ್ತಗೊಳಿಸದ ಪ್ರಭುತ್ವಕ್ಕೆ ಪ್ರತಿಯೊಬ್ಬ ರೈತ ಧಿಕ್ಕಾರ ಹಾಕುತ್ತಿದ್ದಾನೆ ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹಾರುದ್ರಪ್ಪ ವಡವಟ್ಟಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸೋಮವಾರ ನಡೆದ ಕೃಷಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃಷಿಕರಿಗೆ ಕೃಷಿಯೇ ಆಧಾರ ಹೊರತು ಸರ್ಕಾರಗಳಲ್ಲ. ಇದನ್ನು ರೈತರು ಅರ್ಥ ಮಾಡಿಕೊಂಡು ಮುಂದಿನ ಹೆಜ್ಜೆಯಿಡಬೇಕು ಎಂದು ಹೇಳಿದರು.
ಭಾರತೀಯ ಕೃಷಿಕ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಸುರೇಶ ಕುನ್ನೂರು ಮಾತನಾಡಿ, ಸರ್ಕಾರಗಳ ರೈತ ವಿರೋಧಿ ನೀತಿಯಿಂದ ಹಾಗೂ ಮಾರುಕಟ್ಟೆಯ ವ್ಯವಸ್ಥೆಯಿಂದ ಕೃಷಿ ಮೇಲೆ ಕೀಳರಿಮೆ ಉಂಟಾಗಿ ಲಕ್ಷಾಂತರ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.
ಸರ್ಕಾರಗಳು ಅಗತ್ಯ ಸೌಲಭ್ಯವನ್ನು ನೀಡದಿರುವುದು ಎಲ್ಲರಲ್ಲೂ ಆಕ್ರೋಶ ಮೂಡಿಸಿದೆ. ಅದು ಮೂಡುವುದು ಅಗತ್ಯವೂ ಆಗಿದೆ. ಬೇಡಿಕೆಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ. ಯುವ ರೈತ ಸಂಘಟನೆಗಳು ಜನ್ಮ ತಾಳುವ ಮೂಲಕ ಸರ್ಕಾರಗಳ ವಿರುದ್ಧ ಸಿಡಿದೇಳುವಂತಾಗಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಸಂಗನಬಸವ ಶ್ರೀಗಳು ಮಾತನಾಡಿ, ರೈತರಲ್ಲಿ ಕೃಷಿ ಕುರಿತು ಸಮಗ್ರ ಮಾಹಿತಿಯ ಕೊರತೆಯಿದೆ. ಸರ್ಕಾರ ಮಾಹಿತಿ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು. ಹತ್ತಿ ಬೆಳೆಗೆ ಬೆಲೆ ಇಲ್ಲ. ಆದರೆ ಅದರಿಂದ ತಯಾರಿಸಿದ ಬಟ್ಟೆಗೆ ಬೆಲೆ ಇದೆ. ಇದು ಸರ್ಕಾರದ ನೀತಿಯ ಫಲ. ರೈತರಲ್ಲಿ ಸ್ವಾವಲಂಬನೆ ಮೂಡಬೇಕು ಎಂದರು.
ಕೃಷಿ ಉತ್ಸವದ ಅಧ್ಯಕ್ಷ ಬಸವರಾಜ ಹೆಸರೂರು ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ, ಗುಜರಾತ್ ಅಂಬುಜಾ ಕಂಪನಿ ಉಪಾಧ್ಯಕ್ಷ ಉಮೇಶ್ ಪಾಂಡೆ, ಬಸು ಟೇಬ್ರಿವಾಲಾ ಮುಂತಾದವರು ಉಪಸ್ಥಿತರಿದ್ದರು.
--
ವಿದ್ಯಾರ್ಥಿ ವಿರೋಧಿ ನೀತಿ: ಎಸ್ಸೆಫ್ಐ ಖಂಡನೆ
ಶಿಗ್ಗಾಂವಿ: ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ಮಾತಾ ಕಾಳಿಕಾದೇವಿ ಐಟಿಐ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಸುಭಾಸ ಮಾದರ ಮಾತನಾಡಿ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ) ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಸರ್ಕಾರ ಹೊರಟಿದೆ. ಕಾಯ್ದೆ ಜಾರಿ ಮಾಡುವ ಮೂಲಕ ವೃತ್ತಿ ಶಿಕ್ಷಣದ ಕನಸಿಗೆ ತಣ್ಣೀರೆರಚಿದೆ. ತಾಂತ್ರಿಕ, ವೈದ್ಯ ಕೋರ್ಸ್ಗಳ ಶುಲ್ಕ ಹೆಚ್ಚಿಸುವ ಜತೆಗೆ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲೂ ಮುಂದಾಗಿದೆ ಎಂದು ಆರೋಪಿಸಿದರು. ಸಂತೋಷ ಹಿರೇಹೊಳಿ, ಮಹೇಶ ಗುಬ್ಬಿ, ಪರಶುರಾಮ ನಿಂಗಪ್ಪನವರ, ಸುನೀಲ ಲಮಾಣಿ, ಶ್ರೀಕಾಂತ ವಾಲ್ಮೀಕಿ, ವಿಜಯ ಗುದ್ನೂರ, ಸುನೀಲ ಲಮಾಣಿ, ಜಗದೀಶ ವಾಲ್ಮೀಕಿ, ನಿತೀನ, ಅನಿಲ, ನಾಗರಾಜ ಹಡಪದ, ವೀರಯ್ಯ ಹಿರೇಮಠ, ಎಂ.ಡಿ. ಪೂಜಾರ, ಶಿವಕುಮಾರ ಗಡಪದ, ಗಣೇಶ ಅತಡಕರ, ಎಸ್.ವಿ. ಹಿರೇಮಠ, ಶಶಿಕುಮಾರ, ಅಬ್ದುಲ್ ಅಚಿ, ಪ್ರವೀಣ ಬಿ., ಎಸ್.ಐ. ಬಳಿಗೇರ, ಎಸ್.ಎಸ್. ಹಿರೇಮಠ ಇದ್ದರು.
ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿಗ್ಗಾಂವಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರಾದ ಕಾವ್ಯಾ ಕುರುಬರ, ಕಾವ್ಯ ಉಪ್ಪಾರ, ಪ್ರೀತಿ ದೋಶಗೇರ, ಚನ್ನವ್ವ ಗಾಜಿ, ಜ್ಯೋತಿ ಕಣಜೇರ, ಹೃತಿಕಾ ಕಲಾಲ ದೇಶಭಕ್ತಿಗೀತೆ, ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಆರ್.ವಿ. ಪಾಟೀಲ, ಸಂಗೀತ ಶಿಕ್ಷಕಿ ಗೋದಾವರಿ ಕಟ್ಟಿ, ಶಾಲೆಯ ಸಿಬ್ಬಂದಿ ಹಾಗೂ ಪಾಲಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

