ಹಾವೇರಿ

ರೈತರು ಸಂಘಟಿತರಾದರೆ ಸೌಲಭ್ಯ ಲಭ್ಯ

Published On :

ಶಿಗ್ಗಾಂವಿ: ರೈತರು ತಮ್ಮ ಹಕ್ಕುಗಳನ್ನು ಬೇಡಿ ಪಡೆಯವುದಕ್ಕಿಂತ ಹೋರಾಡಿ ಪಡೆಯಲು ಸಂಘಟಿತರಾಗಬೇಕು. ಕೃಷಿ ಸೌಲಭ್ಯ ನೀಡುವಲ್ಲಿ ಆಗುತ್ತಿರುವ ಭ್ರಷ್ಟಾಚಾರ ತಡೆಗೆ ರೈತ ಸಮೂಹ ಪ್ರಬಲ ಸಂಘಟನೆಯಾಗುವುದು ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದ ಮಾಮ್ಲೇ ದೇಸಾಯಿ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಕೃಷಿ ಪಂಪ್‌ಸೆಟ್ ಬಳಕೆದಾರರ ರೈತ ಸಂಘದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಂಪ್‌ಸೆಟ್ ಬಳಕೆದಾರರು ನಿತ್ಯ ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಪರದಾಡುತ್ತಿದ್ದಾರೆ. ರೈತ ಈ ನಾಡಿನ ಅನ್ನದಾತ ಎಂದು ಹೇಳುವ ಸರ್ಕಾರ ಆತನ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರೈತ ಸಮೂಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ವಿತರಿಸುವ ಜತೆಗೆ ಕ್ರಮಬದ್ದವಾಗಿ ವಿದ್ಯುತ್ ವಿತರಿಸಬೇಕು. ವನ್ಯ ಪ್ರಾಣಿಗಳಿಂದ ಬೆಳೆಗಳ ಹಾನಿ ತಡೆಯಿರಿ ಎಂಬ ಹಲವು ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ರೈತರ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಅದೋಗತಿಗೆ ತಲುಪುತ್ತಿದೆ ಎಂದು ಬೇವಿನಮರದ ದೂರಿದರು.
ರಾಜ್ಯದಲ್ಲಿ ಸುಮಾರು ಏಳು ಜಿಲ್ಲೆಗಳಲ್ಲಿ ಕನಕ ಬಿಟಿ ಹತ್ತಿ ಬೆಳೆಯಲಾಗುತ್ತಿದೆ. ಅದರಲ್ಲಿ ಹಾವೇರಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕನಕ ಬಿಟಿ ಹತ್ತಿ ಬೆಳೆಯಲಾಗುತ್ತಿದೆ. ಈ ಹತ್ತಿ ಬೀಜ ಕಳಪೆ ಎಂದು ಸಂಶೋಧಕರು, ತಜ್ಞರು ಪರಿಶೀಲಿಸಿ ಕಳಪೆ ಬೀಜದಿಂದ ಹಾನಿಯಾಗಿದೆ ಎಂಬ ವರದಿ ನೀಡಿದರೂ ಸರ್ಕಾರ ಮತ್ತು ಕಂಪನಿಗಳು ಈವರೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕೃಷಿ ಪಂಪ್‌ಸೆಟ್ ಬಳಕೆದಾರರ ರೈತ ಸಂಘದ ಅಧ್ಯಕ್ಷ ಡಾ.ಬಿ.ಎಚ್. ವೀರಣ್ಣ ಮಾತನಾಡಿ, ರೈತರು ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಏಪ್ರಿಲ್ 2002ರಿಂದ 2008ರ ಜುಲೈ ತಿಂಗಳೊಳಗಿನ ಪಂಪ್‌ಸೆಟ್ ಬಳಕೆದಾರರ ಬಾಕಿ ಮತ್ತು ಬಜ್ಜಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಪಂಜಾಬ, ಕೇರಳ ಹಾಗೂ ತಮಿಳುನಾಡಿನ ಮಾದರಿಯಲ್ಲಿ ಉಚಿತ ವಿದ್ಯುತ್ ವಿತರಣೆ ಮಾಡಬೇಕು. ಅನಿಯಮಿತ ಲೋಡ್ ಶೆಡ್ಡಿಂಗ್ ತಡೆಯಬೇಕು. ಕನಿಷ್ಟ 12 ಗಂಟೆ ನಿಯಮಿತ ತ್ರೀಫೇಸ್ ವಿದ್ಯುತ್ ಪೂರೈಸಬೇಕು. ಪಂಪ್‌ಸೆಟ್‌ಗಳಿಗೆ ಸೋಲಾರ ವ್ಯವಸ್ಥೆ ಕಲ್ಪಿಸಬೇಕು ಎಂದು ವೀರಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಎಫ್.ಸಿ. ಪಾಟೀಲ, ಶಂಕರಗೌಡ ಪಾಟೀಲ, ತಾಪಂ ಸದಸ್ಯ ನಿಂಗಪ್ಪ ಜವಳಿ, ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯ ಅಬ್ದುಲ್‌ಕರಿಂ ಮೊಗಲಲ್ಲಿ, ಎಂ.ಎಚ್. ಚೋಟೆಪ್ಪನವರ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.