ಹಾವೇರಿ

ಗ್ರಾಪಂಗಳಿಗೆ ಕರ ವಸೂಲಿಯೇ ಭಾರ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 20
ಜಿಲ್ಲೆಯ ಗ್ರಾಮ ಪಂಚಾಯ್ತಿಗಳು ಶಾಸನಬದ್ಧ ಅನುದಾನ ಬಳಕೆಗಷ್ಟೇ ಸೀಮಿತವಾಗುತ್ತಿದ್ದು, ತನ್ನ ವ್ಯಾಪ್ತಿಯ ನೀರಿನ ಕರ ಹಾಗೂ ತೆರಿಗೆ ವಸೂಲಿ ಮಾಡುವಲ್ಲಿ ಉದಾಸೀನತೆ ತೋರುತ್ತಿವೆ. ಇದರ ಪರಿಣಾಮವಾಗಿ ಸುಮಾರು ರು. 37 ಕೋಟಿಗೂ ಹೆಚ್ಚು ಕರ ವಸೂಲಿ ಬಾಕಿ ಉಳಿದಿದೆ.
ವಿವಿಧ ಯೋಜನೆಗಳಲ್ಲಿ ಗ್ರಾಪಂಗಳಿಗೆ ಈಗ ಯಥೇಚ್ಛವಾಗಿ ಅನುದಾನ ಹರಿದು ಬರುತ್ತಿದೆ. ಉದ್ಯೋಗ ಖಾತ್ರಿ, ಗ್ರಾಮೀಣ ರಸ್ತೆ, ನೈರ್ಮಲ್ಯ, ಕುಡಿವ ನೀರು, ವಸತಿ ಯೋಜನೆಗಳು ಗ್ರಾಪಂಗಳಿಂದಲೇ ಅನುಷ್ಠಾನಗೊಳ್ಳುತ್ತಿದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪ್ರತಿ ಪಂಚಾಯ್ತಿಗೂ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ಹೀಗೆ ಅನುದಾನ ಬರುತ್ತಿರುವುದರಿಂದ ಗ್ರಾಪಂಗಳು ತನ್ನ ವ್ಯಾಪ್ತಿಯ ನಿವಾಸಿಗಳಿಂದ ನೀರಿನ ಕರ ಹಾಗೂ ತೆರಿಗೆ ವಸೂಲಿಯತ್ತ ಗಮನ ನೀಡುತ್ತಿಲ್ಲ. ಇದರಿಂದ ಸ್ಥಳೀಯ ಅಭಿವೃದ್ಧಿಗೆ ಅನುದಾನದ ಕೊರತೆ ಕಾಡುತ್ತಿದೆ. ಸಣ್ಣಪುಟ್ಟ ಕಾಮಗಾರಿ ಕೈಗೊಳ್ಳಬೇಕಿದ್ದರೂ ಸರ್ಕಾರದ ಕಡೆ ಮುಖ ಮಾಡುವಂತಾಗಿದೆ.
ರು. 25 ಕೋಟಿ ತೆರಿಗೆ ಬಾಕಿ
ಜಿಲ್ಲೆಯ 208 ಗ್ರಾಪಂಗಳಿಂದ ರು. 25.26 ಕೋಟಿ ತೆರಿಗೆ ಬಾಕಿಯಿದೆ. ಹಿಂದಿನ ಬಾಕಿ ಸೇರಿದಂತೆ ಈ ವರ್ಷ ಒಟ್ಟು ಬರಬೇಕಿದ್ದ ರು. 29.67 ಕೋಟಿ ತೆರಿಗೆ ಪೈಕಿ ಕಳೆದ ನವೆಂಬರ್‌ವರೆಗೆ ಕೇವಲ ರು. 4.40 ಕೋಟಿ ಸಂಗ್ರಹಿಸಲಾಗಿದೆ. ಅಂದರೆ ಶೇ. 15ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಣಿಬೆನ್ನೂರು ತಾಲೂಕಿನ 35 ಪಂಚಾಯ್ತಿಗಳಲ್ಲಿ ಅತಿ ಹೆಚ್ಚು ರು. 7.54 ಕೋಟಿ ತೆರಿಗೆ ವಸೂಲಿ ಬಾಕಿಯಿದೆ.
ಹಾವೇರಿ ತಾಲೂಕಿನ 31 ಗ್ರಾಪಂಗಳಿಂದ ರು. 4.44 ಕೋಟಿ, ಬ್ಯಾಡಗಿಯ 20 ಪಂಚಾಯ್ತಿಗಳಿಂದ ರು. 1.51 ಕೋಟಿ, ಹಿರೇಕೆರೂರು ತಾಲೂಕಿನ 37 ಗ್ರಾಪಂಗಳಿಂದ ರು. 3.46 ಕೋಟಿ, ಹಾನಗಲ್ಲ ತಾಲೂಕಿನ 40 ಗ್ರಾಪಂಗಳಿಂದ ರು. 5.21 ಕೋಟಿ, ಶಿಗ್ಗಾಂವಿ ತಾಲೂಕಿನ 25 ಪಂಚಾಯ್ತಿಗಳಿಂದ ರು. 2.90 ಕೋಟಿ ಹಾಗೂ ಸವಣೂರು ತಾಲೂಕಿನ 20 ಗ್ರಾಪಂಗಳಿಂದ ರು. 54.65 ಲಕ್ಷ ಬಾಕಿಯಿದೆ. ಸವಣೂರು ತಾಲೂಕಿನಲ್ಲಿ ಮಾತ್ರ ಶೇ. 36ರಷ್ಟು ತೆರಿಗೆ ವಸೂಲಿಯಾಗಿದೆ. ಉಳಿದ ಎಲ್ಲತಾಲೂಕುಗಳ ಸಾಧನೆ ಕಳಪೆಯಾಗಿದೆ.
ರು. 11.85 ಕೋಟಿ ನೀರಿನ ಕರ: ನೀರಿನ ಕರ ವಸೂಲಿಯಲ್ಲೂ ಗ್ರಾಪಂಗಳು ಹಿಂದೆ ಬಿದ್ದಿವೆ. 208 ಗ್ರಾಪಂಗಳಿಂದ ರು. 11.85 ಕೋಟಿ ನೀರಿನ ಕರ ವಸೂಲಿ ಬಾಕಿಯಿದೆ. ಇದುವರೆಗೆ ರು. 1.89 ಕೋಟಿ ಕರ ವಸೂಲಿ ಮಾಡಿದ್ದು, ಶೇ. 13ರಷ್ಟು ಸಾಧನೆ ಮಾಡಲಾಗಿದೆ.
ಪ್ರತಿ ಪಂಚಾಯ್ತಿ ಅಡಳಿತ ನೋಡಿಕೊಳ್ಳಲು ಪಿಡಿಒ, ಕಾರ್ಯದರ್ಶಿ, ಆಡಳಿತ ಮಂಡಳಿ ಇದ್ದರೂ ತನಗೆ ಬರಬೇಕಿದ್ದ ಸಂಪನ್ಮೂಲ ಕ್ರೋಡೀಕರಿಸಲು ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದ ಸರ್ಕಾರದ ಮೇಲೆ ಇನ್ನಷ್ಟು ಹೊರೆ ಬೀಳುವಂತಾಗಿದೆ. ಪಂಚಾಯ್ತಿಗಳಿಂದ ವಿದ್ಯುತ್ ಬಿಲ್ ತುಂಬುವುದೂ ಸಾಧ್ಯವಾಗದಂತಾಗಿದೆ. ಆದ್ದರಿಂದ ಶಾಸನಬದ್ಧ ಅನುದಾನದಲ್ಲೇ ವಿದ್ಯುತ್ ಬಿಲ್ ತುಂಬುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜನವರಿಗೆ ಶೇ. 75 ವಸೂಲಿ ಗುರಿ: ಸಿಇಒ
ಪಂಚಾಯ್ತಿಗಳು ತೆರಿಗೆ ಹಾಗೂ ನೀರಿನ ಕರ ವಸೂಲಿಯಲ್ಲಿ ಉದಾಸೀನತೆ ತೋರುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಸಮರ್ಪಕ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಡಿ. 13ರಂದು ಸುತ್ತೋಲೆ ಹೊರಡಿಸಿ, ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಡಿಸೆಂಬರ್ ಕೊನೆಗೆ ಶೇ. 65ರಷ್ಟು ಹಾಗೂ ಜನವರಿ ವೇಳೆಗೆ ಶೇ. 75ರಷ್ಟು ಗುರಿ ಸಾಧಿಸುವಂತೆ ತಿಳಿಸಿದ್ದಾರೆ. ಇದಕ್ಕಾಗಿ ಕರ ವಸೂಲಿ ಮಾಸಾಚರಣೆ ಹಮ್ಮಿಕೊಂಡು, ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಬಿಲ್ ಕಲೆಕ್ಟರ್‌ಗಳಿಗೆ ಗುರಿ ನಿಗದಿಪಡಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಪಿಡಿಒಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.