ಮಹಿಳೆ ಮೇಲೆ ಅತ್ಯಾಚಾರ ಖಂಡನೀಯ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.7
ನೆಲ, ಜಲಗಳಿಗೆ ಮಹಿಳೆ ಹೆಸರನ್ನಿಟ್ಟು ದೇವತಾ ಸಮಾನಳೆಂದು ಪೂಜ್ಯ ಭಾವನೆಯಿಂದ ನೋಡುವ ದೇಶದಲ್ಲೇ ಆಕೆಯ ಅತ್ಯಾಚಾರ ಹಾಗೂ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುವುದು ದುರಂತ ಎಂದು ರಾಜ್ಯ ಎಸ್ಎಫ್ಐ ಕಾರ್ಯದರ್ಶಿ ಉಮೇಶ ಹುಳ್ಳಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ಸಮಸ್ಯೆಗಳನ್ನು ಒಡಲಲ್ಲಿ ತುಂಬಿಕೊಂಡ ಮಹಿಳೆ, ಸವಾಲುಗಳನ್ನು ಎದುರಿಸಲು ನಿಸ್ಸಾಯಹಕಳಾಗಿದ್ದಾಳೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯನ್ನು ಸ್ವೇಚ್ಛಾಚಾರದ ಹೆಸರಿನಲ್ಲಿ ಬಂಧಿಸಲಾಗಿದ್ದು, ಆಧುನಿಕತೆ ಹೆಸರಿನಲ್ಲಿ ಸಮಾಜ ದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನಗಳು ಬದಲಾಗಬೇಕಾಗಿದೆ ಎಂದರು.
ಅಸಹಾಯಕ ಮತ್ತು ಅಸಮ ಪರಿಸ್ಥಿತಿಯಲ್ಲಿ ಮಹಿಳೆಯಿದ್ದಾಳೆ. ಆಕೆಯನ್ನು ವೈರುದ್ಧ ಪದಗಳಿಂದ ಗುರುತಿಸಲಾಗುತ್ತಿದ್ದು, ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ ಹಾಗೂ ದೌರ್ಜನ್ಯ ನಡೆಯುತ್ತಿವೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಜರುಗಿದರೂ ರಾಜ್ಯ ಪೊಲೀಸ್ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕಾನೂನಿಗೆ ತಿದ್ದುಪಡಿ ತರುವ ಮೂಲಕ ಇಂತಹ ಪ್ರಕರಣಗಳಿಗೆ ತೆರೆ ಎಳೆಯವಂತೆ ಮನವಿಮಾಡಿದರು.
ಎಸ್ಎಫ್ಐ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ರಾಜ್ಯದ ಶೇ. 53ರಷ್ಟು ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು ಇನ್ನಿತರ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ಸರ್ಕಾರಿ ಶಾಲೆಗಳೆಂದರೆ ವಿದ್ಯಾರ್ಥಿಗಳು ಹಿಂಜರಿಯವಂತಾಗಿದ್ದು, ಖಾಸಗಿ ಶಾಲೆಗಳಿಂದ ಪಾಲಕರು ವಿಮುಖವಾಗುತ್ತಿದ್ದಾರೆ ಎಂದರು.
ಶೇ. 25ರಷ್ಟು ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ, ರಾಷ್ಟ್ರೀಯ ಶಿಕ್ಷಣ ಹಕ್ಕು ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹಿಂದೇಟು ಹಾಕುತ್ತಿದೆ ಎಂದರು.
ರೇಣುಕಾ ಕಹಾರ ಮಾತನಾಡಿ, ಖಾಸಗಿ ವಿವಿ ಸ್ಥಾಪನೆಗೆ ಮುಂದಾಗುವ ಮೂಲಕ ರಾಜ್ಯ ಸರ್ಕಾರ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿದೆ. ಇದರಿಂದ ಬಡ ಹಾಗೂ ಹಿಂದುಳಿದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡಿದ್ದಾರೆ ಎಂದರು.
ಇದೇ ಸಂದರ್ಭ ಬರಗೂರು ರಾಮಚಂದ್ರಪ್ಪ ವಿರಚಿತ ಸ್ವಾಮಿ ವಿವೇಕಾನಂದ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಡಾ. ಐ.ಎ. ಲೋಕಾಪುರ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ವಸಂತಕುಮಾರ ಬ್ಯಾಟಪ್ಪನವರ, ವಿಜಯಕುಮಾರ ಶಿಡ್ಲಣ್ಣನವರ, ವೈ. ವಿನಾಯಕ, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

