ಬೇಡಿಕೆ: ವಿದ್ಯುತ್ ಗುತ್ತಿಗೆ ನೌಕರರ ಪ್ರತಿಭಟನೆ
ಹಾವೇರಿ: ಕನಿಷ್ಠ ವೇತನವಿಲ್ಲದೇ, ಖಾಸಗಿ ಸ್ವಯಂಸೇವಾ ಸಂಸ್ಥೆಗಳಲ್ಲಿ 10-15 ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ವಿತರಣಾ ಆಪರೇಟರ್ಗಳು ಹಾಗೂ ಸಹಾಯಕ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಹೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಗೆ ಮನವಿ ನೀಡಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಟಿಯುಸಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಹಾವೇರಿ ತಾಲೂಕಿನ ಹೊಸರಿತ್ತಿ, ರಾಣಿಬೆನ್ನೂರು ತಾಲೂಕಿನ ಹಲಗೇರಿಯ ಹೆಸ್ಕಾಂನ ವಿದ್ಯುತ್ ಸರಬರಾಜು ಉಪ ಕೇಂದ್ರಗಳಲ್ಲಿ ವಿದ್ಯುತ್ ಆಪರೇಟರ್ ಮತ್ತು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕಿದ್ದು ಕೂಡಲೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಜಿಲ್ಲೆಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಗುತ್ತಿಗೆದಾರರನ್ನು ಕೂಡಲೇ ಸಭೆ ಕರೆದು ಚರ್ಚಿಸಬೇಕೆಂದು ಆಗ್ರಹಿಸಿದರು. 2011ರ ನವೆಂಬರ್ವರೆಗಿನ ಟೆಂಡರ್ ಪ್ರಕಾರ ಆಪರೇಟರ್ಗಳಿಗೆ ರು. 4014 ಮತ್ತು ಸಹಾಯಕರಿಗೆ ರು. 3314 ವೇತನವಿದ್ದು, ಇದುವರೆಗೂ ಯಾವುದೇ ವಿದ್ಯುತ್ ಕೇಂದ್ರಗಳಲ್ಲಿ ಈ ರೀತಿಯಾಗಿ ವೇತನ ಪಾವತಿ ಮಾಡಿಲ್ಲ. ಅಲ್ಲದೇ ಆಯಾ ಕಾರ್ಮಿಕರ ಖಾತೆಗಳಿಗೆ ವೇತನವನ್ನು ಜಮಾ ಮಾಡುವಂತೆ ನಿರ್ದೇಶನವಿದ್ದರೂ ಸಹ ಅವರ ಖಾತೆಗಳಿಗೆ ಕೇವಲ ರು. 2700 ಹಾಗೂ ರು. 2900 ಗಳನ್ನು ಮಾತ್ರವೇ ವೇತನವಾಗಿ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಇದರಿಂದ ಕುಟುಂಬವನ್ನು ಸಲುಹುವುದು ಸಾಧ್ಯವಿಲ್ಲ. ಕಾರಣ ಕೂಡಲೇ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಹೆಸ್ಕಾಂ ಕಂಪನಿಯಿಂದಲೇ ವೇತನ ಪಾವತಿಯಾಗುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಈ ಕುರಿತ ಮನವಿಯನ್ನು ಹೆಸ್ಕಾಂ ಅಧಿಕಾರಿಗಳಿಗೆ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾ ಅಧೀಕ್ಷಕರು ಈ ಕುರಿತಂತೆ ಮನವಿಯನ್ನು ನೌಕರರ ಸಂಘಟನೆ ಹಾಗೂ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಿ.ಎಸ್. ಬೆನಕನಹಳ್ಳಿ, ಎಸ್.ಎಸ್. ಕುಮರಿ, ಬಿ.ಜೆ. ಮಾಲಶೆಟ್ಟರ, ಎಸ್.ಡಿ. ಮ್ಯಾಗೇರಿ, ಸಿ.ಎಚ್. ದಾವಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

