ಬಾಂಬ್ ದಾಳಿ: ಎಸ್ಎಫ್ಐ ಖಂಡನೆ
ಹಾವೇರಿ: ಹೈದರಾಬಾದ್ ನಗರದ ವಿವಿಧೆಡೆ ನಡೆದ ಬಾಂಬ್ ದಾಳಿಯಲ್ಲಿ 20ಕ್ಕೂ ಜನ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಮಧ್ಯೆ ನರಳುತ್ತಿದ್ದು, ಅದಕ್ಕೆ ಕಾರಣವಾಗಿರುವ ದುಷ್ಕರ್ಮಿಗಳ ದೇಶವಿರೋಧಿ ಕೃತ್ಯವನ್ನು ಎಸ್ಎಫ್ಐ ಜಿಲ್ಲಾ ಸಮಿತಿ ತೀವ್ರ ಖಂಡಿಸಿದೆ. ಇಲ್ಲಿನ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಎದುರು ಪ್ರತಿಭಟನೆ ನಡೆಸಿದ ಎಸ್ಎಫ್ಐ ಕಾರ್ಯಕರ್ತರು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ಒಂದು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸಿ ನಂತರ ಭಯೋತ್ಪಾದಕರ ಕೃತ್ಯ ಖಂಡಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ನಮ್ಮ ದೇಶ ಶಾಂತಿ-ಸೌಹಾರ್ದತೆಯ ಪರಂಪರೆ ಹೊಂದಿದೆ. ವಿಚ್ಛಿದ್ರಕಾರಿ ಶಕ್ತಿಗಳು ಸಾಮರಸ್ಯ, ಸೌಹಾರ್ದ ಹಾಳುಗೆಡವಿ, ಭಯದ ವಾತಾವರಣ ಉಂಟು ಮಾಡಲು ಮುಂದಾಗುತ್ತಿರುವುದು ಅತ್ಯಂತ ಗಂಡಾಂತರಕಾರಿ. ಭಯೋತ್ಪಾದಕರಿಗೆ ಯಾವುದೇ ಧರ್ಮ ಜಾತಿ ಇಲ್ಲ. ಭಯೋತ್ಪಾದಕರ ಕೃತ್ಯಗಳಲ್ಲಿ ಎಲ್ಲ ಧರ್ಮ ಜಾತಿಯ ಅಮಾಯಕರು ಬಲಿಯಾಗುತ್ತಾರೆ. ಆದುದರಿಂದ ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಬೇಕು ಎಂದರು. ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಎಸ್ಎಫ್ಐ ಮುಖಂಡ ವಿನಾಯಕ, ಶಿವನಗೌಡ ಪಾಟೀಲ, ಮಹೇಶ ಸಂಶಿ, ಮೇಘರಾಜ ಕೋಡಿಹಳ್ಳಿ, ಮಲ್ಲಿಕಾರ್ಜುನ, ಹನುಮಂತಗೌಡ ಪಾಟೀಲ, ಹೊಳಲೇಶ, ಬಸವರಾಜ ಊದಗಟ್ಟಿ, ವಿಶಾಲ ಲಿಂಗದಳ್ಳಿ, ನವೀನ, ಸಿದ್ಧರಾಜ ಹಿರೇಮಠ, ಸುಧೀರ, ಬೀರೇಶ, ಶಿವಾಜಿ, ಫಕ್ಕೀರೇಶ ಕಳ್ಳಿಹಾಳ, ಸಂತೋಷ ಬಡಿಗೇರ, ಕಿಶನ್, ಶರೀಫ, ವಿಶ್ವ ಅಂಗಡಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

