ಹಾವೇರಿ

226 ಶಂಕಿತ ಡೆಂಘೀ ಜ್ವರ ಪತ್ತೆ

Published On :

ಹಾವೇರಿ: ತಾಲೂಕಿನಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ ಒಟ್ಟು 226 ಶಂಕಿತ ಡೆಂಘೀ ಜ್ವರ ಪತ್ತೆಯಾಗಿದ್ದು, ಈ ಪೈಕಿ 15 ಜನರು ಗುಣಮುಖರಾಗಿದ್ದರೆ, 1 ಮಗು ಡೆಂಘೀ ಜ್ವರಕ್ಕೆ ಬಲಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರು ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಉಪಾಧ್ಯಕ್ಷ ಬಸಪ್ಪ ಕಳಸೂರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ತಾಲೂಕಿನ ಕುರುಬಗೊಂಡದ ಬಾಲಕನಿಗೆ ಜ್ವರ ಕಂಡು ಬಂದಾಗ ಆತನ ಪಾಲಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಉಪಚಾರ ಫಲಕಾರಿಯಾಗದೆ ಬಾಲಕ ಡೆಂಘೀಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದರು. ತಾಲೂಕಿನಾದ್ಯಂತ ಲಾರ್ವಾ ಸರ್ವೆಯನ್ನು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಡೆಂಘೀ ಕಾಯಿಲೆ ಹರಡುವುದು ಈಜಿಪ್ಟೈ ಈಡಿಸ್ ಸೊಳ್ಳೆಯಿಂದ. ಗ್ರಾಮೀಣ ಪ್ರದೇಶದಲ್ಲಿ ಜನರಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರಕುತ್ತಿಲ್ಲ ಎಂದು ಡಾ. ಕುಂದೂರ ಆತಂಕ ವ್ಯಕ್ತಪಡಿಸಿದರು.
ಜನರು ಸಿಮೆಂಟ್ ತೊಟ್ಟೆಯನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಟೈರ್, ತೆಂಗಿನ ಚಿಪ್ಪು, ಕಸದ ಗುಂಡಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಅಂದಾಗ ಅದರ ನಿಯಂತ್ರಣ ಸಾಧ್ಯ ಎಂದರು. ಸಂಶಯಾಸ್ಪದ ಡೆಂಘೀ ಕಂಡುಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆಗೆಯಲಾಗಿದೆ. ಅಲ್ಲಿ ಶಂಕಿತ ಡೆಂಘೀ ಎಂದು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸಾ ತಜ್ಞರು ಒಬ್ಬರೇ ಇದ್ದು, ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಇದೆ ಎಂದರು.
ಡೆಂಘೀ ಬಾಧಿತರಲ್ಲಿ ರಕ್ತಕಣಗಳು ಕಡಿಮೆಯಾಗದಂತೆ ಅವರು ನಿಶ್ಯಕ್ತರಾಗುತ್ತಾರೆ. ಡೆಂಘೀ ಕಾಯಿಲೆ ಪತ್ತೆ ಹಚ್ಚಲು ವೈದ್ಯಕೀಯ ಕಾಲೇಜ್‌ಗಳು ಇದ್ದ ಕಡೆ ಮಾತ್ರ ಘಟಕಗಳಿವೆ. ಇಲ್ಲಿನ ಘಟಕಗಳಿಂದ ಶಂಕಿತ ಎಂದು ಗುರುತಿಸಬಹುದಾಗಿದೆ. ಶಂಕಿತರನ್ನು ಹುಬ್ಬಳ್ಳಿ, ದಾವಣಗೆರೆಗೆ 108 ಹಾಗೂ ಜಿಲ್ಲಾಸ್ಪತ್ರೆಯ ಆಂಬ್ಯುಲೆನ್ಸ್‌ಗಳಿಂದ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ ಎಂದೂ ಡಾ. ಕುಂದೂರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಉಪಾಧ್ಯಕ್ಷ ಬಸವರಾಜ ಕಳಸೂರು, ತಾಲೂಕಿನಲ್ಲಿ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಿದೆ. ಡೆಂಘೀ ಜ್ವರ ಬಾಧಿತರ ಬಗ್ಗೆ ಅಧಿಕಾರಿಗಳು ಸರಿಯಾಗಿ ಅಂಕಿ-ಸಂಖ್ಯೆ ನೀಡುತ್ತಿಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಜಾಗೃತಿ ವಹಿಸಬೇಕೆಂದರು. ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಕೈಗೊಂಡು ಡೆಂಘೀ ಜ್ವರ ನಿಯಂತ್ರಣದಲ್ಲಿಡಬೇಕು. ಹುಬ್ಬಳ್ಳಿ-ದಾವಣಗೆರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಂಘೀ ಬಾಧಿತರ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದರು.  ತಾಲೂಕಿನಲ್ಲಿ ಮಲೇರಿಯಾಕ್ಕೆ ಸಂಬಂಧಿಸಿದಂತೆ 4764 ಜನರ ರಕ್ತ ತಪಾಸಣೆ ಮಾಡಲಾಗಿದೆ. ಇದರಲ್ಲಿ 7 ಜನರಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ. ಅವರ ಮನೆಯ ಬಾಗಿಲಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಕುಂದೂರ ತಿಳಿಸಿದರು.
ತಾಪಂ ಇಓ ದೇಶಪಾಂಡೆ, ಡೆಂಘೀ ಜ್ವರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.