ಹಾವೇರಿ

ಕಾಲೇಜಿಗೆ ಸೌಲಭ್ಯ ಕಲ್ಪಿಸಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 19
ಡಿಪ್ಲೊಮಾ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಎದುರು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
3 ವರ್ಷದ ಡಿಪ್ಲೊಮಾ ಕೋರ್ಸ್ ಪದವಿ ರೀತಿಯಲ್ಲಿ ಸಂಪೂರ್ಣವಾಗಿ ಮೂರು ವರ್ಷ ಮುಂದಿನ ತರಗತಿಗಳಿಗೆ ಹಾಜರಾಗಲು (ಪ್ರವೇಶ ಪಡೆಯಲು) ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಅವೈಜ್ಞಾನಿಕ ಹಾಗೂ ಹೊಸ ಪಠ್ಯಕ್ರಮ ಸರಳೀಕರಿಸಬೇಕು. ಒಂದು ಸೆಮಿಸ್ಟರ್‌ನಲ್ಲಿ ಕನಿಷ್ಠ 4 ತಿಂಗಳು ಕಡ್ಡಾಯವಾಗಿ ತರಗತಿಗಳು ನಡೆಯುವಂತೆ ಕ್ರಮವಹಿಸಬೇಕು, ಪರೀಕ್ಷಾ ಮರು ಮೌಲ್ಯಮಾಪನ, ಜೆರಾಕ್ಸ್ ಪ್ರತಿ ಇನ್ನಿತರ ಶುಲ್ಕಗಳನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರವೇಶ ಪ್ರಕ್ರಿಯೆ ಸಂದರ್ಭ ಸೀಟು ಹಂಚಿಕೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಬೇಕು.
ಗ್ರಂಥಾಲಯ, ಪ್ರಯೋಗಾಲಯ, ಅರ್ಹ ಉಪನ್ಯಾಸಕರು ಇನ್ನಿತರ ಮೂಲಸೌಲಭ್ಯಗಳಿಂದ ವಂಚಿತರಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸೆಮಿಸ್ಟರ್ ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುವುದನ್ನು ನಿಲ್ಲಿಸಬೇಕು, ಪರೀಕ್ಷಾ ಮೌಲ್ಯಮಾಪನ ಸರಿಯಾಗಿ ಮಾಡಬೇಕು, ಶೀಘ್ರ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಬೇಕು.
ಏಕಕಾಲದಲ್ಲಿ 2-3 ಪರೀಕ್ಷೆಗಳನ್ನು ನಿಗದಿ ಮಾಡುವುದನ್ನು ಕೈಬಿಡಬೇಕು, ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳನ್ನು ನೀಡಿ, ಹಣ ನೀಡದಿರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುತ್ತಿರುವ ಕ್ರಮವನ್ನು ಹಾಗೂ ಶಿಕ್ಷಣದ ವ್ಯಾಪಾರೀಕರಣ ತಡೆಗಟ್ಟಲು ಡಿಟಿಇಯು ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಖಾಸಗಿ ಪಾಲಿಟೆಕ್ನಿಕ್‌ಗಳ ಮಾನ್ಯತೆ ರದ್ದುಗೊಳಿಸಿ, ಖಾಸಗಿ ಪಾಲಿಟೆಕ್ನಿಕ್‌ಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಗತ್ಯವಿರುವ ಕಡೆ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು ಸ್ಥಾಪಿಸಿ ಮತ್ತು ಈಗಿರುವ ಎಲ್ಲಾ ಕಾಲೇಜುಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು, ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ, ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ, ಚಂದ್ರು ಪೂಜಾರಿ, ಬಸವರಾಜ ವಡ್ಡರ, ಮಲ್ಲಿಕಾರ್ಜುನ ಹಿರೇಮಠ, ಶೀತಲ ಹನಮನಹಳ್ಳಿ, ಆನಂದ, ಶ್ರೀಕಾಂತ ಮಲ್ಲಾಡದ, ಹಾಲೇಶ, ಪ್ರಶಾಂತ, ವಿನಯ, ಸಿದ್ದು, ವಿಶಾಲ್ ಎಸ್.ಎಸ್, ವೀರೇಶ. ಎಸ್, ಸುನೀಲ. ವಿ.ಜಿ, ನಾಗರಾಜ ಗಾಣಿಗೇರ, ಚಂದ್ರು ಶಂಕ್ರಪ್ಪನವರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.