ಹಾವೇರಿ

ಸಂವಿಧಾನ ಸಾಮಾಜಿಕ ನ್ಯಾಯದ ಭಾಗ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 27
ಪ್ರಸ್ತುತ ಸಂವಿಧಾನದ ರೂಪುರೇಷೆಗಳು ಪೌರೋಹಿತ್ಯ ವರ್ಗದ ಅನಿಷ್ಟ ಸಂಪ್ರದಾಯದ ವಿರುದ್ಧ ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾರಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮುಂದುವರಿದ ಭಾಗವೆಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಹದೇವ ಮೈಲಾರ ಸಭಾಭವನದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜನರಿಗೆ ಅಗೋಚರವಾದ ಶಕ್ತಿಯೊಂದನ್ನು ತೋರ್ಪಡಿಸುವ ಮೂಲಕ ಸಮಾಜವನ್ನು ನಿಯಂತ್ರಣದಲ್ಲಿಟ್ಟುಕೊಂಡು ಪೌರೋಹಿತ್ಯ ವರ್ಗವು ಅಪ್ರತ್ಯಕ್ಷವಾಗಿ ರಾಜ್ಯಭಾರ ಮಾಡುತ್ತಾ ಬಂದಿದೆ. ಕಟ್ಟುಪಾಡು, ಕಂದಾಚಾರಗಳ ವ್ಯವಸ್ಥೆಗೆ ನಲುಗಿದ ಜನರು ಪೌರೋಹಿತ್ಯ ವರ್ಗದ ದಾಸರಾಗುವ ಮೂಲಕ ಸ್ವಾತಂತ್ರ್ಯ ಕಳೆದುಕೊಂಡು ಉದಾಹರಣೆಗಳಿವೆ ಎಂದರು. ಪೌರೋಹಿತ್ಯ ವರ್ಗವು ಶೋಷಿತರು ಹಾಗೂ ಉಳ್ಳವರ ನಡುವೆ ಬೃಹತ್ ಕಂದರ ನಿರ್ಮಿಸಿದ್ದು ಇದರಿಂದ ಇವರೀರ್ವರ ನಡುವೆ ಶೀತಲ ಸಮರ ನಡೆಯುವಂತೆ ಮಾಡಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ವರ್ಗ ಪದ್ಧತಿ ಜೀವಂತವಾಗಿರಿಸುವ ಪ್ರಯತ್ನದಲ್ಲಿ ಮುಂದಾದ ಪೌರೋಹಿತ್ಯ ವರ್ಗವು ಪ್ರಸ್ತುತ ಸಮಾಜದಲ್ಲಿ ಮೇಲು, ಕೀಳೆಂಬ ಸ್ತರಗಳನ್ನು ನಿರ್ಮಿಸಿದ್ದು, ಅದೇ ಅಂತಿಮ ಸತ್ಯವೆಂಬಂತೆ ಬಿಂಬಿಸುತ್ತಿದೆ ಎಂದರು.
ಇವೆಲ್ಲವುಗಳನ್ನು ಧಿಕ್ಕರಿಸಿ ಹಡಪದ ಅಪ್ಪಣ್ಣ ಸೇರಿದಂತೆ ಬಸವಾದಿ ಶರಣರು ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ತತ್ವದಡಿ, ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಮಾಜದ ಜನರಿಗೆ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕಾಯಕ ತತ್ವ-ಸಿದ್ಧಾಂತಗಳು ಪ್ರಸ್ತುತ ಸಮಾಜಕ್ಕೆ ಅನ್ವಯಿಸುತ್ತಿದ್ದು, ಜನರು ಅವುಗಳ ಪಾಲನೆಯಲ್ಲಿ ತೊಡಗಿದಾಗ ಇಡೀ ದೇಶವೇ ಸುಭಿಕ್ಷವಾಗಿರಲು ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಶಿಕ್ಷಣರತ್ನ ಪುರಸ್ಕೃತ ನವೋದಯ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಅವರನ್ನು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಹಾಲೇಶ ಕಾಯಕದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಗೊರವರ, ಪುಟ್ಟನಗೌಡ ಪಾಟೀಲ, ವಿಎಸ್‌ಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಬಸಪ್ಪ ಕುಳೇನೂರು, ಗುಡ್ಡಪ್ಪ ಮಲ್ಲೂರು, ದುಂಡೆಪ್ಪ ಕಾಯಕದ, ನ್ಯಾಯವಾದಿ ವನಿತಾ ಗುತ್ತಲ ಇನ್ನಿತರರು ಉಪಸ್ಥಿತರಿದ್ದರು. ಸಿ.ಜಿ. ಮಲ್ಲೂರ ಹಾಗೂ ಎಂ. ವಿಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.