ಗುಣಮಟ್ಟದ ಶಿಕ್ಷಣದಿಂದ ಅಪರಾಧ ಕುಸಿತ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 8
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಶಿಸ್ತು ಪರಿಪಾಲನೆಯ ಕುರಿತು ಶಿಕ್ಷಕರು ಪಾಠ ಬೋಧಿಸಿದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯವೆಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ ತಿಳಿಸಿದರು. ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ನಂದೀಶ್ವರ ಕನ್ನಡ ಕಾನ್ವೆಂಟ್ ಮತ್ತು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿದರು. ಸುಣಕಲ್ಲಬಿದರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪದ್ಮಪ್ಪ ಪಿ. ಆರ್ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಶಿವಮೊಗ್ಗದ ಕುವೇಂಪು ವಿವಿಯಿಂದ ಡಾಕ್ಟರೆಟ್ ಪದವಿ ಪಡೆದಿದ್ದಕ್ಕೆ ಸನ್ಮಾನಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಲ್ಲ ವಿದ್ಯೆಯನ್ನು ಕಲಿಸಬೇಕೆಂದು ಅಗಡಿತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ. ಎಸ್. ತೆಂಬದ ಸಂಸ್ದೆಯ ಕುರಿತು ಮಾತನಾಡಿದರು. ಎಪಿಎಂಸಿ ಸದಸ್ಯ ಮಂಜಪ್ಪ ಲಿಂಗದಹಳ್ಳಿ, ಪ್ರಾಚಾರ್ಯ ಎಚ್.ಎಂ. ಚಂದ್ರಾಚಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸನ್ಮಾನಿತರಾದ ಡಾ. ಪದ್ಮಪ್ಪ ಪಿ.ಆರ್ ಪ್ರಾಸ್ತಾವಿಕ ಮಾತನಾಡಿದರು.
ಹೋತನಹಳ್ಳಿ: ಇಂದಿನಿಂದ ಶಿವರಾತ್ರಿ ಕಾರ್ಯಕ್ರಮ
ಹಾನಗಲ್ಲ: ಹಾನಗಲ್ಲ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಮಾ. 9ರಿಂದ 11ರ ವರೆಗೆ ಮಹಾಶಿವರಾತ್ರಿ ನಿಮಿತ್ತ ಹನ್ನೊಂದನೆ ಭಾವೈಕ್ಯ ಕಾರ್ಯಕ್ರಮ ಹಾಗೂ ಸಿದ್ಧಾರೂಢ ಮಹಾರಥೊತ್ಸವ ನಡೆಯಲಿದೆ. ಮಾ. 9ರಂದು ಶ್ರೀ ಗುರುಕಲಶ ಸ್ಥಾಪನೆ, ಶ್ರೀಮದ್ ಭಗವದ್ಗೀತಾ ಪಾರಾಯಣ ನಡೆಯಲಿದೆ. 10ರಂದು ಶಿವಮಹಿಮೆಯೊಂದಿಗೆ ಅಖಂಡ ಶಿವಭಜನೆ ಹಾಗೂ ಸಂಜೆ ಪುಷ್ಪರಥೋತ್ಸವ, ಮಹಾಶಿವರಾತ್ರಿ ಜಾಗರಣೆ ನಡೆಯಲಿದೆ. 11ರಂದು ಬ್ರಾಹ್ಮೀ ಮಹೂರ್ತದಲ್ಲಿ ಜಪಯಜ್ಞ, ಶ್ರೀ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಜನೆ, ಅಖಂಡ ಶಿವಭಜನೆ ನಡೆಯಲಿದೆ. ಸಂಜೆ 4ಕ್ಕೆ ಮಹಾರಥೋತ್ಸವ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ನಾಳೆ ನೌಕರರ ಸಭೆ
ಹಾನಗಲ್ಲ: ಕರ್ನಾಟಕ ರಾಜ್ಯ ಅನುದಾನ ಸಹಿತ ಶಾಲಾ, ಕಾಲೇಜುಗಳ ಶಿಕ್ಷಕರ ಹಾಗೂ ನೌಕರರ ಆಡಳಿತ ಮಂಡಳಿಗಳ ಸಭೆಯನ್ನು ಮಾ. 10ರಂದು ಹಾವೇರಿಯ ಮಹಿಳಾ ವಿದ್ಯಾಪೀಠದಲ್ಲಿ ಕರೆಯಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ರಾಜ್ಯ ಸರ್ಕಾರ 1987ರಿಂದ 1995ರ ಅವಧಿಯನ್ನು ಅನುದಾನ ಸಹಿತ ಎಂದು ಪರಿಗಣಿಸುವಂತೆ ಒತ್ತಾಯಿಸುವ ಕುರಿತು ಪ್ರಮುಖ ಸಭೆಯಾಗಿದೆ. ಇದೇ ಸಂದರ್ಭದಲ್ಲಿ ಅನುದಾನ ರಹಿತ ಶಾಲಾ, ಕಾಲೇಜುಗಳಿಗೆ ಅನುದಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವರೂ ಆದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ ಎಂದು ಜಿಲ್ಲಾಧ್ಯಕ್ಷ ಗಣೇಶ ವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಹಾನಗಲ್ಲ: ಹಾನಗಲ್ಲ ತಾಲೂಕು ಕಾನೂನು ಮತ್ತು ಮಾನವ ಹಕ್ಕುಗಳ ಕಾಂಗ್ರೆಸ್ ವಿಭಾಗಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಫ್. ಮುದಕಣ್ಣನವರ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಬಸವರಾಜ ಬ್ಯಾತನಾಳ, ಉಪಾಧ್ಯಕ್ಷ ಗುಡ್ಡಪ್ಪ ಕುರುಬರ, ಕಾರ್ಯದರ್ಶಿ ಷಣ್ಮುಖ ಶೇಷಗಿರಿ, ಸದಸ್ಯರಾಗಿ ಬಂಡೋಜಿ ಭೋಸಲೆ, ಸಿರೀನ್ ಉಪ್ಪಿನ್, ಎಸ್.ಕೆ. ಕಾಳಪ್ಪನವರ, ಎಂ.ಪಿ. ಹುಳ್ಳೇರ, ಎಸ್.ವೈ. ಗೌಂಡಿ, ಎಂ.ಎ. ನೆಗಳೂರ, ಬಸವರಾಜ ತಳವಾರ, ನಂಜುಂಡಿ ನಾಯ್ಕ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಸದಸ್ಯರಾಗಿ ಮಂಜುನಾಥ ಕೊಪ್ಪರಸಿಕೊಪ್ಪ, ಎಂ.ಎಲ್ ಲಾಲಖಾನನವರ, ದಿನೇಶ ಲಕಮಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶಸೇವೆಗೆ ಮುಂದಾಗಿ: ಶಿಕ್ಷಕ ಪಿ. ಸಿದ್ದಪ್ಪ ಕರೆ
ಹಿರೇಕೆರೂರು: ದೇಶಾಭಿಮಾನ ಬೆಳೆಸಿಕೊಳ್ಳುವ ಜತೆಗೆ ಉದಾತ್ತ ಸಮಾಜ ಸೇವೆ ಮಾಡುವ ಮೂಲಕ ದೇಶವನ್ನು ಬಲಿಷ್ಠವಾಗಿ ಕಟ್ಟಲು ಯುವ ಜನತೆ ಪಣ ತೊಡಬೇಕು. ದೇಶಸೇವೆಗಾಗಿ ಅರ್ಪಣಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಪಿ. ಸಿದ್ದಪ್ಪ ಕರೆ ನೀಡಿದರು.
ಪಟ್ಟಣದ ಶಾಂತಿಧಾಮದಲ್ಲಿ ಬಿ.ಆರ್. ತಂಬಾಕದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಷಯಕ ಪರಿಷತ್ ಸದಸ್ಯ ಪ್ರೊ ಎಸ್.ಬಿ. ಚೆನ್ನಗೌಡ್ರ ಅಧ್ಯಕ್ಷತೆ ವಹಿಸಿ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಯುವ ಜನತೆ ಸತ್ಯ, ನಿಷ್ಠೆ, ತ್ಯಾಗ, ಬಲಿದಾನ ಇತ್ಯಾದಿ ಗುಣಗಳನ್ನು ರೂಢಿಸಿಕೊಳ್ಳಬೇಕು. ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸಿ, ನಾಯಕತ್ವ ತರಬೇತಿ ನೀಡುತ್ತವೆ ಎಂದರು. ಸಿಪಿಎಸ್ಇ ಶಾಲೆಯ ಪ್ರಾಚಾರ್ಯ ಸಿ.ಎಚ್. ನಂದಿಹಳ್ಳಿ, ಸಿ.ಜಿ. ಕುಲಕರ್ಣಿ, ಎಂ.ಎಸ್. ನಾಗರಾಜಪ್ಪ, ಕೆ.ಎಂ. ಮರಡಿಬಣಕಾರ, ಬಿ.ಎಸ್. ಮಲ್ಲೂರ, ಸಿ.ಆರ್. ದೊದ್ದಿಹಳ್ಳಿ, ಎಸ್.ಎಂ. ಸಾಧಿಕ್, ಡಬ್ಲು.ಐ. ಮಕಾಂದಾರ ಉಪಸ್ಥಿತರಿದ್ದರು.
ನೆಮ್ಮದಿ ಜೀವನಕ್ಕೆ ಶರಣರ ಸಂದೇಶ
ಹಾವೇರಿ: ಇಂದು ಸಮಾಜ ಆಧುನಿಕರಣದತ್ತ ಮಾರು ಹೋಗಿ ಆಧ್ಯಾತ್ಮ ಮರೆಯಾಗುತ್ತಿದೆ. ನೆಮ್ಮದಿಯ ಜೀವನಕ್ಕಾಗಿ ಆಧ್ಯಾತ್ಮ, ಪ್ರವಚನ, ಶರಣರ ಸಂದೇಶ ಅವಶ್ಯವಾಗಿದೆ. ದೇಶದ ಸಂಪತ್ತು ಆಧ್ಯಾತ್ಮ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ನುಡಿದರು.
ಇಲ್ಲಿನ ಅನ್ನದಾಸೋಹಿ ಸಿಂದಗಿ ಮಠದಲ್ಲಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 33ನೇ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಾಂತವೀರ ಪಟ್ಟಾಧ್ಯಕ್ಷರ ಸಂಸ್ಕೃತಿ- ಸಂಸ್ಕಾರಗಳು ಮೇರು ಶಿಖರ. ಕನ್ನಡ ನಾಡಿನ ಧಾರ್ಮಿಕ ಇತಿಹಾಸದಲ್ಲಿ ಮಂತ್ರಗಳು, ವೇದಗಳು, ಜೋತಿಷ್ಯ ಶಾಸ್ತ್ರಗಳು ಸಮಾಜದಿಂದ ದೂರವಾಗುವ ಸಂದರ್ಭದಲ್ಲಿ ಮತ್ತೆ ಅವುಗಳಿಗೆ ಜೀವ ಸೆಲೆಯಾದವರು ಸಿಂದಗಿಯ ಶಾಂತವೀರರು. ಅವರು ನುಡಿದಂತೆ ನಡೆದು ಆರ್ದಶಪ್ರಾಯರಾಗಿ ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ. ಶಾಂತವೀರ ಶ್ರೀಗಳು ತೋರಿದ ಮಾರ್ಗದಲ್ಲಿ ನಾವೆಲ್ಲ ನಡೆದು ಬದುಕನ್ನು ಹಸನಾಗಿಸಿಕೊಳ್ಳಬೇಕಿದೆ ಎಂದರು. ಬೈರನಹಟ್ಟಿಯ ದೊರೆಸ್ವಾಮಿಮಠದ ಶಾಂತಲಿಂಗ ಶ್ರೀಗಳು, ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ಶೇಗುಣಸಿ ವಿರಕ್ತಮಠದ ಮಹಾಂತದೇವರು ಮಹಾತ್ಮರ ನಡೆ-ನುಡಿ ಕುರಿತಂತೆ ಪ್ರವಚನ ನೀಡಿದರು.
ನಾಶಿ ಸಹೋದರರು ಭಕ್ತಿಪೂರ್ವಕವಾಗಿ ನೀಡಿದ ಶಾಂತವೀರ ಪಟ್ಟಾಧ್ಯಕ್ಷರ ಭಾವಚಿತ್ರಗಳನ್ನು ಹುಕ್ಕೇರಿಮಠದ ಸದಾಶಿವ ಶ್ರೀಗಳು ಬಿಡುಗಡೆಗೊಳಿಸಿದರು. ರಾಜ್ಯಪ್ರಶಸ್ತಿ ಪುರಸ್ಕೃತ ವಾಯಲಿನ್ ವಾದಕ ಹನುಮಂತಪ್ಪ ಕಾಮನಹಳ್ಳಿ, ಸಂಗೀತ ವಿಶಾರದ ನಿಜಗುಣೇಶ ಹೂಗಾರ ಅವರಿಂದ ಸಂಗೀತ ಸೇವೆ ನಡೆಯಿತು. ಸಿಂದಗಿಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ ನಿರ್ವಹಿಸಿದರು.
14ರಂದು ಕೆಡಿಪಿ ಸಭೆ
ಹಾವೇರಿ: ಜಿಲ್ಲಾ ಪಂಚಾಯ್ತಿಯ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಮಾ. 14ರಂದು ಬೆಳಗ್ಗೆ 11ಕ್ಕೆ ಜಿಪಂ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸುವರೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ ತಿಳಿಸಿದ್ದಾರೆ.
ಮತ ಎಣಿಕೆ: ಶಾಂತಿ ಕಾಪಾಡಲು ಮನವಿ
ಹಾವೇರಿ: ನಗರ, ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2013ಕ್ಕೆ ಸಂಬಂಧಿಸಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಾ. 11ರಂದು ಮತ ಎಣಿಕೆ ಜರುಗಲಿದೆ. ಮತ ಎಣಿಕೆಯ ನಂತರ ವಿಜೇತರಾದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ಮೆರವಣಿಗೆ ಹಾಗೂ ವಿಜಯೋತ್ಸವ ಮಾಡದಂತೆ ಪ್ರಭಾರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ನಡೆಯಲಿರುವ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿ ಪ್ರದೇಶದಲ್ಲಿ ಮಾ. 11ರಂದು ಯಾವುದೇ ಮೆರವಣಿಗೆ ಹಾಗೂ ವಿಜಯೋತ್ಸವವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನಸಿಂಗ್ ರಾಥೋರ್ ತಿಳಿಸಿದ್ದಾರೆ.
ಬೆಳವಣಿಗೆಗೆ ಪರೀಕ್ಷೆಗಳು ಅವಶ್ಯ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 8
ಹಾವೇರಿ ತಾಲೂಕು ಮಟ್ಟದ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ ಪರೀಕ್ಷೆ ಪೂರ್ವ ತಯಾರಿ ತರಬೇತಿ ಕಾರ್ಯಕ್ರಮ ತಾಪಂ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಂಯೋಜಕ ನಾರಾಯಣ ಕರೆವ್ವನವರ, ಮಾ. 17ರಂದು ನಡೆಯುವ ಸಾಕ್ಷರತಾ ಪರೀಕ್ಷೆಗಳು ಮಹತ್ವದಾಗಿದ್ದು, ಬದುಕಿನಲ್ಲಿ ಬೆಳವಣಿಗೆಗೆ ಪರೀಕ್ಷೆಗಳು ಬೇಕೆಂದರು. ಮುಖ್ಯ ಅತಿಥಿಗಳಾಗಿ ಎಸ್.ಎನ್. ಪಾಟೀಲ. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎಸ್.ಎಸ್. ಮಡ್ಲೂರ, ಆರ್.ಕೆ. ಹಿರೇಮಠ ಮತ್ತು ತಾಲೂಕು ಸಂಯೋಜಕಿ ಎಸ್.ಬಿ. ನೇರಲಿಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪರೀಕ್ಷೆ ಪೂರ್ವತಯಾರಿ ತರಬೇತಿ ನೀಡಲಾಯಿತು. ಮಧುಮತಿ ದೇಸಾಯಿ ಹಾಗೂ ತಂಡದವರು ಪ್ರಾರ್ಥಿಸಿದರು. ಪುಟ್ಟಪ್ಪ ಕೋರಿ ಹಾಗೂ ಸಂಗಡಿಗರು ಸಾಕ್ಷರ ಗೀತೆ ಹಾಡಿದರು. ತಾಲೂಕು ಸಂಯೋಜಕಿ ಯಲ್ಲವ್ವ ಚಲವಾದಿ ಸ್ವಾಗತಿಸಿದರು. ಗಣೇಶ ಪತ್ತಾರ ವಂದಿಸಿದರು.
ಇಂದಿನಿಂದ ಆಯುಷ್ ಆರೋಗ್ಯ ತರಬೇತಿ
ಹಾವೇರಿ: ಬೆಂಗಳೂರು ಆಯುಷ್ ಇಲಾಖೆ, ಜಿಪಂ, ಹಾವೇರಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್ ಸಹಯೋಗದಲ್ಲಿ ಮಾ.9ರಿಂದ 16ರ ವರೆಗೆ ಸಂಜೆ 5ರಿಂದ ರಾತ್ರಿ 9ರ ವರೆಗೆ ನಗರದ ಹೋಟೆಲ್ ತಾರಾ ಪ್ಲಾಜಾದ 2ನೇ ಮಹಡಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಆಯುಷ್ ಆರೋಗ್ಯ ತರಬೇತಿ ಜರುಗಲಿದೆ. ಪ್ರಭಾರಿ ಜಿಲ್ಲಾಧಿಕಾರಿ ಜಿ. ಜಗದೀಶ ಕಾರ್ಯಾಗಾರದ ಉದ್ಘಾಟಿಸದ್ದು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಎಸ್. ಕಬಾಡೆ ಅಧ್ಯಕ್ಷತೆ ವಹಿಸುವರು. ಜಿಪಂ ಮುಖ್ಯ ಯೋಜನಾಧಿಕಾರಿ ಬಸನಗೌಡ್ರ ಹಾಗೂ ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರ ಬಾಬುರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಎಸ್. ಕಬಾಡೆ ತಿಳಿಸಿದ್ದಾರೆ. ಮಧುಮೇಹ ವ್ಯಕ್ತಿಗಳು ತಮ್ಮ ಹೆಸರು ನೋಂದಾಯಿಸಲು ದೂರವಾಣಿ, 08384-226414, 225414, ಮೊ -9243600276ಗೆ ಸಂಪರ್ಕಿಸಬಹುದು. 40-50 ವರ್ಷದ ಪುರುಷರು ಹಾಗೂ ಮಹಿಳೆಯರು ಹೆಸರು ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ತಿಳಿಸಿದ್ದಾರೆ.
ಟ್ಯಾಂಕರ್ ಅಪಘಾತ: ಗಾಯ
ರಾಣಿಬೆನ್ನೂರು: ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಹಿರೇಬಿದರಿ-ಅರೆಮಲ್ಲಾಪುರ ರಸ್ತೆ ಮೇಲೆ ಸೇವಾಕೇಂದ್ರದ ಸಮೀಪ ವೇಗವಾಗಿ ಚಲಿಸುತ್ತಿದ್ದ ಸ್ವರಾಜ್ ಮಜ್ಡಾ ಟ್ಯಾಂಕರ್ ಲಾರಿ ರಸ್ತೆ ಬದಿಗೆ ನಿಂತಿದ್ದ ಕಾವ್ಯ ಬಸವರಾಜಪ್ಪ ನಾಗರಜ್ಜಿ(2)ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದಾಳೆ. ಅಪಘಾತಕ್ಕೆ ಕಾರಣನಾದ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ವಿರುದ್ಧ ಅರೆಮಲ್ಲಾಪುರದ ನಾಗಲಿಂಗಪ್ಪ ಶಿ. ಹಲವಾಗಲ ಎಂಬುವವರು ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆಮಿಷ: ಪ್ರಕರಣ ದಾಖಲು
ಶಿಗ್ಗಾಂವಿ: ಇಲ್ಲಿನ ಪುರಸಭೆ ಚುನಾವಣೆಯ ವಾರ್ಡ್ 20ಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಹೆಚ್.ಎನ್. ಬಂಡಿವಡ್ಡರ ಪರ ಮತ ಹಾಕುವಂತೆ ಆಮಿಷ ಒಡ್ಡಿದ ಘಟನೆ ಜರುಗಿದೆ. ಆಮಿಷಕ್ಕೊಳಪಡಿಸಿದವರನ್ನು ಶಿಗ್ಗಾಂವಿಯ ಪ್ರಕಾಶ ಎನ್. ಹಾದಿಮನಿ, ಕಡಹಳ್ಳಿನೀರಲಗಿಯ ಸೋಮಲಿಂಗ ಡಿ. ಹಿರಿಯಣ್ಣನವರ, ಚಿಕ್ಕಹರಕುಣಿಯ ಗಿರೀಶ ಲಕ್ಷ್ಮಣ ದೊಡ್ಡಮನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಇಂಡಿಕಾ ಕಾರಿನಲ್ಲಿ ರು. 10, ರು. 5 ಮುಖಬೆಲೆಯ ನೋಟುಗಳನ್ನು ಹಂಚಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾಗಿ ಬಸನಗೌಡ ಎಸ್. ಪಾಟೀಲ ಅವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇಂಡಿಕಾ ಕಾರಿನಲ್ಲಿದ್ದ ರು. 2200 ವಶಕ್ಕೆ ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಕಡೆಯವರು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಠಾಣೆ ಪಿಎಸ್ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

