ಹಾವೇರಿ

ತತ್ವರಹಿತ ರಾಜಕೀಯದಿಂದ ಒಡಕು

Published On :

ನೀತಿ ಮೌಲ್ಯವಿಲ್ಲದ ಶಿಕ್ಷಣ ಹಾಗೂ ತತ್ವರಹಿತ ರಾಜಕಾರಣದಿಂದ ಪ್ರಸ್ತುತ ಸಮಾಜ ವಿಘಟನೆಯತ್ತ ಸಾಗಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಆಣೂರು ಗ್ರಾಮದಲ್ಲಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀಗಳಿಂದ ಶಿಕ್ಷಣಕ್ಕೆ ಅಡಿಪಾಯ: ಹಣ ಸಂಪಾದನೆಗೆ ಪಡೆಯುವ ಶಿಕ್ಷಣದಿಂದ ಲೌಕಿಕ ಜೀವನದಲ್ಲಿ ಭೋಗದ ಬದುಕು ಸಾಗಿಸಬಹುದು. ಧಾರ್ಮಿಕ ತಳಹದಿ ಹಾಗೂ ನೈತಿಕ ಮೌಲ್ಯವಿಲ್ಲದೇ ಕತ್ತಲೆ ಜಗತ್ತಿನ ಅಪರಾಧಕ್ಕೆ ಕಾರಣವಾಗುತ್ತಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಿದ ಮಠಾಧೀಶರು ಬಹು ಹಿಂದಿನಿಂದಲೂ ವಿದ್ಯಾಕೇಂದ್ರ ಆರಂಭಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿದ್ದಾರೆ ಎಂದರು.
ಗುರು ಹಾಗೂ ಶಿಷ್ಯ ಪರಂಪರೆಯಲ್ಲಿ ಉತ್ತಮ ಸಂಬಂಧಗಳನ್ನು ಹೊಂದಿದ್ದ ಕಾಲದಲ್ಲಿ ಭಕ್ತಿ ಪ್ರಾಧಾನ್ಯ ಶಿಕ್ಷಣದಿಂದ ನೈತಿಕತೆಗೆ ಧಕ್ಕೆ ಬರುತ್ತಿರಲಿಲ್ಲ. ಧಾರ್ಮಿಕ ಮುಖಂಡರೂ ಸಮಾಜದಲ್ಲಿ ನೀತಿ ಪಾಠಗಳ ಕಲಿಸುವಲ್ಲಿ ನಿರತರಾಗಿರುತ್ತಿದ್ದರೂ ಎಂದರು. ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಕ ಗಳಿಕೆಯೇ ಪ್ರಧಾನವಾಗುತ್ತಿದೆ. ಅಂಕಗಳಿಂದಲೆ ವ್ಯಕ್ತಿ ಮೌಲ್ಯವನ್ನು ಗುರುತಿಸಲಾಗುತ್ತಿದೆ. ಶೈಕ್ಷಣಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಹ ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ. ಬದುಕಿನ ಸಾಮರಸ್ಯ ಹಾಗೂ ಸೌಹಾರ್ದ ಭಾವನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಮುಂದಾಗಬೇಕೆಂದರು.
ಆದರ್ಶ ಬದುಕು ಸಾಗಿಸಿ: ವಂಶಾಭಿವೃದ್ಧಿಗೆ ಮದುವೆಗಳು ಅವಶ್ಯಕವಾಗಿವೆ ಆದರೂ ಸಹ ದೇಶದ ಭವಿಷ್ಯದ ದೃಷ್ಟಿಯಿಂದ ಕೇವಲ ಎರಡು ಮಕ್ಕಳನ್ನು ಹೊಂದುವುದು ಉತ್ತಮ. ಸತಿ-ಪತಿಗಳು ಸಂಸಾರದಲ್ಲಿ ಬರುವ ಕಷ್ಟ, ನಷ್ಟವನ್ನು ಸಮನಾಗಿ ಹಂಚಿಕೊಂಡು ಸಾಮರಸ್ಯ ಬದುಕು ಸಾಗಿಸುವ ಮೂಲಕ ಆದರ್ಶವಾಗಿರುವಂತೆ ಸಲಹೆ ನೀಡಿದರು.
ಯುವಕರು ಸದ್ಭಳಕೆಯಾಗಲಿ: ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀಗಳು ಮಾತನಾಡಿ, ಯುವಶಕ್ತಿ ಬಳಕೆ ಮಾಡಿಕೊಂಡ ಜಪಾನ್ ದೇಶ ಇಂದು ಪ್ರಗತಿಶೀಲ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದೇಶ ಹಾಗೂ ಯುವಶಕ್ತಿ ಸದ್ಭಳಕೆ ಮಾಡಿಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ದೇಶ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ ಎಂದರು.
ವರದಕ್ಷಿಣೆಗೆ ಕೈಚಾಚಬೇಡಿ: ಗ್ರಾಮೀಣ ಮಟ್ಟದಲ್ಲಿ ಸಾಮೂಹಿಕ ವಿವಾಹಗಳು ಬಹಳಷ್ಟು ಸಹಕಾರಿಯಾಗಿವೆ. ಇದರಿಂದ ಬಡ ಹಾಗೂ ಮದ್ಯಮ ವರ್ಗದ ಕುಟುಂಬಗಳ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಿದೆ. ವರ್ಷಕ್ಕೊಮ್ಮೆ ಸರ್ವಧರ್ಮದ ಜನರ ವಧು-ವರರ ಸಾಮೂಹಿಕ ವಿವಾಹ ಕಾರ್ಯಕ್ರಮ ಗ್ರಾಮದಲ್ಲಿ ಜರುಗಿದರೆ ಭಾವೈಕ್ಯತೆ ಸಂಕೇತವಾಗಲು ಸಾಧ್ಯವೆಂದ ಶ್ರೀಗಳು, ವರದಕ್ಷಿಣೆಗೆ ಕೈಚಾಚುವುದಿಲ್ಲ ಎಂದು ಪ್ರತಿಜ್ಞೆಗೈಯುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಸುರೇಶಗೌಡ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ನವಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಪುಟ್ಟಪ್ಪ ಗೊರವರ ಗ್ರಾಮಸ್ಥರಾದ ಗುರುಶಾಂತಪ್ಪ ಬಡ್ಡಿಯವರ, ಆರ್.ಎಮ್. ಪಾಟೀಲ, ಚನ್ನವೀರಗೌಡ ಬುಡ್ಡನಗೌಡ್ರ, ಬಸವರಾಜ ಹಲಗೇರಿ. ಮಲ್ಲಿಕಾರ್ಜುನ ಪಾಟೀಲ ಇತರರಿದ್ದರು. ಗದಿಗೆಪ್ಪ ಬಡ್ಡಿಯವರ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.