ಹಾವೇರಿ

ಮಠಗಳಿಗೆ ಹಣ: ಡಾ. ವಾಲಿಕಾರ ಆಕ್ಷೇಪ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 9
ಸರ್ಕಾರ ಶಿಕ್ಷಣಕ್ಕೆ ಅಗತ್ಯ ಪ್ರಾಶಸ್ತ್ಯ ಕೊಡದೇ ಮಠಮಾನ್ಯಗಳಿಗೆ ಬಜೆಟ್ನಲ್ಲಿ ಹಣ ಮೀಸಲಿರಿಸುತ್ತಿರುವುದು ದುರ್ದೈವದ ಸಂಗತಿ. ಈ ಕುರಿತಂತೆ ಶಿಕ್ಷಣ ತಜ್ಞರು, ಹಿರಿಯ ಸಾಹಿತಿಗಳು, ಪ್ರಾಜ್ಞರು ಯಾರೂ ಸಹ ಪ್ರಶ್ನಿಸದೇ ಇರುವುದು ನಿಜಕ್ಕೂ ಖೇದಕರ ಎಂದು ಕವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ ವಿಷಾದ ವ್ಯಕ್ತಪಡಿಸಿದರು.
ಕವಿವಿ, ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಸಂಯುಕ್ತವಾಗಿ ಹಾವೇರಿಯ ಕವಿವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 17ನೇ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವೇರಿ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ಕುರಿತಂತೆ ಮಾಜಿ ಸಚಿವ ಸಿ.ಎಂ. ಉದಾಸಿ ಆಸಕ್ತಿ ತೋರಿದರೆ ವಿನಃ ಛಲದಿಂದ ಕಾರ್ಯನಿರ್ವಹಿಸಲಿಲ್ಲ. ಇದರಿಂದ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ ಕುಂಠಿತವಾಗಿದೆ. 12 ವರ್ಷಗಳಾದರೂ ಅಭಿವೃದ್ಧಿ ಸಾಧಿಸಿಲ್ಲ. ಈ ಹಿನ್ನೆಲೆಯಲ್ಲಿಯೇ ಇದಕ್ಕೆ ಹೊಸ ಸ್ಪರ್ಶ ನೀಡುವ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದು, ಕಳೆದ 10 ವರ್ಷಗಳಲ್ಲಿ ಕೇಂದ್ರದ ಅಭಿವೃದ್ಧಿಗೆ ಹರಿದುಬಂದಷ್ಟು ಅನುದಾನವನ್ನು ತಾವು ಕೇವಲ ಎರಡು ವರ್ಷಗಳಲ್ಲಿ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ರು. 1 ಕೋಟಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರಲ್ಲದೇ, ನಮ್ಮ ಈ ಕೇಂದ್ರಕ್ಕೆ ಕಟ್ಟಡದ ಅವಶ್ಯಕತೆ ಇಲ್ಲ. ಆದರೆ, ಶಿಕ್ಷಕರ ತೀವ್ರ ಅಗತ್ಯವಿದೆ. ಸರ್ಕಾರಕ್ಕೆ 6 ತಿಂಗಳಿಂದಲೂ 48 ಶಿಕ್ಷಕರ ಅಗತ್ಯತೆ ಕುರಿತಂತೆ ಗಮನಕ್ಕೆ ತಂದಾಗ್ಯೂ ಇದು ಕಾರ್ಯರೂಪಕ್ಕೆ ಬಾರದಿರುವುದು ನೋವುಂಟು ಮಾಡಿದೆ. ಕನಿಷ್ಠ ಪಕ್ಷ 30 ಶಿಕ್ಷಕರ ಅಗತ್ಯ ಪೂರೈಸುವಂತೆ ಮಾಡಿಕೊಂಡ ಮನವಿಯೂ ಪುರಸ್ಕೃತವಾಗಿಲ್ಲ ಎಂದು ವಿಷಾದಿಸಿದರು.
ಪ್ರಸ್ತುತ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸುವ ಕುರಿತಂತೆ ಹಾವೇರಿ ಸ್ನಾತಕೋತ್ತರ ಕೇಂದ್ರವನ್ನು ಸೂಚಿಸುವ ಮೂಲಕ ಈ ಕೇಂದ್ರದ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದೇನೆ. ಇಂಥ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೇಂದ್ರಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡುವ ಉದ್ದೇಶದಿಂದಲೇ ಇಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನ ಕೇಂದ್ರಕ್ಕೆ ಕೀರ್ತಿ ತರುವುದಲ್ಲದೇ ಸಾಹಿತ್ಯ ಹಾಗೂ ಸಂಶೋಧನೆ ಕುರಿತಂತೆ ಆಸಕ್ತಿ ಮೂಡಿಸಿ ಸಂಶೋಧನೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ವೇದಿಕೆ ಕಲ್ಪಿಸಲಿದೆ ಎಂದರು.
ಅಲ್ಲಮ ಹುಟ್ಟಿದ ಬಳ್ಳಿಗಾವಿ ಬಹು ಹಿಂದೆಯೆ ವಿಶ್ವವಿದ್ಯಾಲಯ ಸ್ಥಾನದಲ್ಲಿತ್ತು. ಇದರಿಂದಾಗಿಯೇ ಅಲ್ಲಿ ಹುಟ್ಟಿದ ಅಲ್ಲಮಪ್ರಭು ಶ್ರೇಷ್ಠ ವ್ಯಕ್ತಿ ಹಾಗೂ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಯಿತು. ಈ ಕುರಿತಂತೆ ಆಳವಾದ ಸಂಶೋಧನಗೆಳು ಜರುಗಬೇಕಿದೆ. ಆದರೆ, ತಾವೊಬ್ಬ ಗಣಿತತಜ್ಞ ಆಗಿರುವುದರಿಂದ ಇದು ಇತರರಿಗೆ ಇರುಸುಮುರುಸು ಉಂಟುಮಾಡಿ ಮುಜುಗರದ ಸ್ಥಿತಿ ತರುವುದರಿಂದ ತಾವು ಈ ಕುರಿತಂತೆ ಚರ್ಚಿಸುವುದಿಲ್ಲ ಎನ್ನುವ ಮೂಲಕ ಸಂಶೋಧನೆಗಳು ಕೈಗೊಳ್ಳಬೇಕಾದ ಜರುಗುವ ಅಗತ್ಯತೆಯನ್ನು ತೋರಿದರು.
ಸಮ್ಮೇಳನಾಧ್ಯಕ್ಷ ಡಾ. ಶ್ರೀನಿವಾಸ ರಿತ್ತಿ ಮಾತನಾಡಿ, ತಿರುಳ್ಗನ್ನಡ ನಾಡಿನ ವ್ಯಾಪ್ತಿ ಕುರಿತಂತೆ ಇಂದಿಗೂ ಗೊಂದಲಗಳಿವೆ. ಈ ಕುರಿತಂತೆ ಮೊಟ್ಟಮೊದಲಿಗೆ ಪ್ರಶ್ನೆ ಕೇಳಿ ಉತ್ತರಿಸಿದವರು ನಾ.ಶ್ರೀ. ರಾಜಪುರೋಹಿತ. ಆದರೆ, ಅದು ಇಂದಿಗೂ ಸಮರ್ಪಕ ಎನಿಸಿಲ್ಲ ಎಂದ ಅವರು, ಕವಿರಾಜ ಮಾರ್ಗ ಒಂದು ಲಕ್ಷಣ ಗ್ರಂಥ, ಶಾಸ್ತ್ರ ಗ್ರಂಥವಾಗಿದೆ ಎಂದು ನುಡಿದರಲ್ಲದೇ ಕವಿರಾಜ ಮಾರ್ಗದಲ್ಲಿ ಹಲವಾರು ಅಂಶಗಳಲ್ಲಿನ ಔಚಿತ್ಯ, ಪ್ರಮಾಣಬದ್ಧತೆ, ಪ್ರಾಮಾಣಿಕತೆ ಹಾಗೂ ನೈಜತೆ ಇಂದಿಗೂ ಪ್ರಶ್ನಾರ್ಹವಾಗಿದೆ. ಈ ಕುರಿತಂತೆ ಹತ್ತು ಹಲವಾರು ಲೇಖಕರು ಪ್ರಶ್ನೆಗಳನ್ನು ಮಾಡಿದ್ದರೂ ಉತ್ತರ ಸಮರ್ಪಕವಾಗಿ ಯಾರಿಂದಲೂ ದೊರೆತಿಲ್ಲ. ಇದರಿಂದಾಗಿ ತಿರುಳ್ಗನ್ನಡ ನಾಡಿನ ವ್ಯಾಪ್ತಿ ವಿಸ್ತಾರ ಇಂದಿಗೂ ಚರ್ಚಾಸ್ಪದವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಜೆ.ಎಂ. ನಾಗಯ್ಯ, ಡಾ. ಪಿ.ಕೆ. ರಾಠೋಡ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಕುಳ್ಳಿರಿಸಿ ವಾದ್ಯವೈಭವ, ವಿದ್ಯಾರ್ಥಿ ಕನ್ಯಾಮಣಿಗಳ ಪೂರ್ಣಕುಂಭಮೇಳಗಳೊಂದಿಗೆ ಕೇಂದ್ರದ ಆವರಣದಲ್ಲೇ ಮೆರವಣಿಗೆ ನಡೆಸಲಾಯಿತು. ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ ಸ್ವಾಗತಿಸಿದರು.
 ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷೆ ಡಾ.ಮಧು ವೆಂಕಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸದಾಶಿವ ದೊಡ್ಡಮನಿ ನಿರ್ವಹಿಸಿದರು. ಡಾ. ಕೃಷ್ಣಾ ನಾಯಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.