ಹಾವೇರಿ

ಚುನಾವಣಾ ಅಕ್ರಮ: ಸೀರೆ, ತಟ್ಟೆ ವಶ

Published On :

ಹಾವೇರಿ: ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ರಾಣಿಬೆನ್ನೂರಿನ ದೇವಸ್ಥಾನವೊಂದರಲ್ಲಿ ಮತದಾರರಿಗೆಂದು ವಿತರಿಸಲು ಸಂಗ್ರಹಿಸಲಾಗಿದ್ದ ಸುಮಾರು 21,900 ಮೌಲ್ಯದ 219 ಸೀರೆ, ತಟ್ಟೆಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ತಹಸೀಲ್ದಾರ್ ಕೆ.ಎಚ್. ಶಿವಕುಮಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಾಮಗ್ರಿಗಳು ಆರ್. ಶಂಕರ್ ಅವರಿಗೆ ಸೇರಿವೆ ಎನ್ನಲಾಗಿದೆ. ಶಂಕರ್ ರಾಣಿಬೆನ್ನೂರು ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತಂತೆ ಅವರ ಮೇಲೆ ರಾಣಿಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲಾದರೂ ಹೋರಾಟಕ್ಕೆ ಸಿದ್ಧ
ಧಾರವಾಡ: ರಾಜಕಾರಣಕ್ಕೆ ಸೇರಿದ ಮೇಲೆ ಚುನಾವಣೆ ಎದುರಿಸಲೇಬೇಕು. ಅಂತೆಯೇ, ಕಳೆದ ಮಾ.18ರಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿದ್ದು ಯಾವ ರಣರಂಗದಲ್ಲಾದರೂ ಹೋರಾಟಕ್ಕೆ ಸಿದ್ಧ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ತಿಳಿಸಿದರು. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಇನ್‌ಸಿಗ್ನಿಯಾ 2013 ಉದ್ಘಾಟನೆ ಮುಂಚೆ ಪತ್ರಕರ್ತರೊಂದಿಗೆ ಮಾತನಾಡಿ, ಬಾಗಲಕೋಟ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಬೆಂಬಲಿಗರ ತೀವ್ರ ಒತ್ತಾಯವಿದೆ. ಆದರೆ, ನನಗೆ ಇದೇ ಕ್ಷೇತ್ರದಿಂದ ಟಿಕೆಟ್ ಕೊಡಿ ಎಂದು ಮುಖಂಡರಲ್ಲಿ ಕೇಳಿಕೊಂಡಿಲ್ಲ ಎಂದರು.
ಅತ್ತೆ, ಸೊಸೆ ನೀರುಪಾಲು
ಚಿಕ್ಕಬಳ್ಳಾಪುರ: ಗ್ರಾಮದ ಸಮೀಪದಲ್ಲಿರುವ ಚೆಕ್ ಡ್ಯಾಮ್ ನೀರಿನಲ್ಲಿ ತಮ್ಮ ಕುರಿಗಳನ್ನು ತೊಳೆದು ಅವುಗಳಿಗೆ ನೀರು ಕುಡಿಸಲು ಹೋಗಿದ್ದ ಅತ್ತೆ, ಸೊಸೆ ಇಬ್ಬರು ನೀರುಪಾಲಾಗಿದ್ದಾರೆ. ತಾಲೂಕಿನ ಅಜ್ಜವಾರ ಗ್ರಾಮದ ಶಿವಪ್ಪ ಎಂಬುವವರ ಮಗಳು ಶೋಭಾ (21) ಮತ್ತು ಅಕ್ಕ ನಾರಾಯಣಮ್ಮ (48) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ. 
ಈಜಲು ಹೋಗಿ ವಿದ್ಯಾರ್ಥಿ ಸಾವು
ರಾಮನಗರ: ಔತಣ ಕೂಟದಲ್ಲಿ ಊಟ ಮುಗಿಸಿ ಈಜಲು ಹೋದ ಕಾಲೇಜು ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗವಿಕೆರೆಯಲ್ಲಿ ಬುಧವಾರ ಸಂಭವಿಸಿದೆ. ಬೆಂಗಳೂರು ಸಮೀಪದ ಜೈನ್ ಕಾಲೇಜಿನ ಮೊದಲ ವರ್ಷದ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದ ರಿಜ್ವಾನ್(20) ಮೃತ  ವಿದ್ಯಾರ್ಥಿ.
ನಾರಾಯಣ ಆಸ್ಪತ್ರೆಗೆ ಪ್ರಶಸ್ತಿ
ಲಂಡನ್: ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯು 2013ನೇ ಬೋಲ್ಡ್‌ನೆಸ್ ಇನ್ ಬಿಸಿನೆಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಾನ್ಶಿಯಲ್ ಟೈಮ್ಸ್ ಮತ್ತು ಆರ್ಸೆಲಾರ್ ಮಿತ್ತಲ್ ನೀಡುವ ಈ ಪ್ರಶಸ್ತಿಯ ಟಾಪ್ 7ರಲ್ಲಿ ನಾರಾಯಣ ಹೃದಯಾಲಯ ಹಾಗೂ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಪ್ರಶಸ್ತಿ ಗಿಟ್ಟಿಸಿಕೊಂಡಿವೆ. ಲಂಡನ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್‌ನಲ್ಲಿ ಬುಧವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ನಾರಾಯಣ ಹೃದಯಾಲಯ ಆಸ್ಪತ್ರೆಗೆ 'ಕಾರ್ಪೊರೇಟ್ ಹೊಣೆಗಾರಿಕೆ ಪ್ರಶಸ್ತಿ' ನೀಡಲಾಗಿದೆ. ಈ ಆಸ್ಪತ್ರೆಯ ಬೆಂಗಳೂರು ಕಾರ್ಡಿಯಾಕ್ ಘಟಕವು ವಿಶ್ವದ ಪ್ರಮುಖ ಹೃದಯಾಲಯಗಳಲ್ಲಿ ಒಂದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.