ಹಾವೇರಿ

ಪ್ರಚಾರ ಭರಾಟೆ: ಸಂಕಷ್ಟದಲ್ಲಿ ಪಕ್ಷೇತರರು!

Published On :

- ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 2
ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ಗುರುವಾರ ತುರುಸಿನ ಪ್ರಚಾರ ಕೈಗೊಂಡರು.
ಚುನಾವಣೆಗೆ ತಿಂಗಳ ಕಾಲಾವಧಿ ಲಭ್ಯವಾಗಿದ್ದರಿಂದ ಪ್ರತಿ ಮನೆ-ಮನೆಗೆ ತೆರಳಿ ಮತ ಯಾಚಿಸಲು ಸಾಧ್ಯವಾಗಿರಲಿಲ್ಲ ಎಂಬ ಅಳಕು ಬಹುತೇಕ ಅಭ್ಯರ್ಥಿಗಳಲ್ಲಿ ಕಂಡಿತು.
ಪಕ್ಷೇತರರ ಸಂಕಟ: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ಕಡಿಮೆ ಕಾಲಾವಧಿಯ ಎಫೆಕ್ಟ್ ಅಷ್ಟೊಂದು ಆಗದಿದ್ದರೂ ಪಕ್ಷೇತರ ಅಭ್ಯರ್ಥಿಗಳಿಗೆ ಮಾತ್ರ ಭಾರಿ ಹೊಡೆತ ನೀಡಿದಂತಾಗಿದೆ. ಇಡೀ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಶಿಗ್ಗಾಂವಿ ವಿಧಾನಸಭೆ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೊರತುಪಡಿಸಿದರೆ ಉಳಿದವರೆಲ್ಲರೂ ರಾಜಕೀಯಕ್ಕೆ ಹೊಸಬರೆ.
ಈ ಸನ್ನಿವೇಶ ಕೇವಲ ಬಿಜೆಪಿಯಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲೂ ಇದೆ. ಆದಾಗ್ಯೂ ಪಕ್ಷದ ಹೆಸರು ಹಾಗೂ ಚಿಹ್ನೆಗಳು ಮತದಾರರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದು, ಸ್ವಲ್ಪಮಟ್ಟಿಗೆ ತಮಗೆ ಪ್ಲಸ್ ಆಗಲಿವೆ ಎಂಬ ಲೆಕ್ಕಾಚಾರ ಪಕ್ಷಗಳ ಅಭ್ಯರ್ಥಿಗಳದ್ದು.
ಆದರೆ, ಪಕ್ಷೇತರರಾಗಿ ಕಣಕ್ಕಿಳಿದಿರುವ ಅಭ್ಯರ್ಥಿಗಳು ಆಯಾ ಕ್ಷೇತ್ರದ ಮತದಾರರಿಗೆ ಅಷ್ಟೊಂದು ಪರಿಚಯಸ್ಥ ಮುಖಗಳಾಗಿಲ್ಲ. ಒಂದೊಮ್ಮೆ ಪರಿಚಯಸ್ಥ ಮುಖಗಳಿದ್ದರೂ, ಸದ್ಯ ಅವರು ಚುನಾವಣೆಯಲ್ಲಿ ಪಡೆದಿರುವ ಚಿಹ್ನೆಗಳ ಬಗ್ಗೆ ಜನತೆಗೆ ಸ್ಪಷ್ಟ ಕಲ್ಪನೆ ಇಲ್ಲ ಎಂಬುದನ್ನು ಅಲ್ಲಗಳೆಯಲಾಗದು. ಇದುವೇ ತಮ್ಮ ಗೆಲವಿನ ರೇಸ್ಗೆ ಅಡ್ಡಿಯನ್ನುಂಟು ಮಾಡಬಹುದೆಂಬ ಕೊರಗು ಪಕ್ಷೇತರರದ್ದಾಗಿದೆ.
ಕುತೂಹಲಕ್ಕೆ ಕಾರಣ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹಾನಗಲ್ ಹಾಗೂ ಹಿರೇಕೆರೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಮಾಜಿ ಶಾಸಕರು-ಸಚಿವರಾಗಿದ್ದಾರೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರೇ ಹೊಸಬರಾಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮಾಜಿಗಳ ವೈಯಕ್ತಿಕ ವರ್ಚಸ್ಸು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಮೈಕ್ಗಳ ಭರಾಟೆ: ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಜಿಲ್ಲಾದ್ಯಂತ ಮೈಕ್ಗಳ ಮೂಲಕ ಬೆಳಗ್ಗೆಯಿಂದ ಸಂಜೆವರೆಗೂ ಭರ್ಜರಿ ಪ್ರಚಾರ ನಡೆಸಿದರು. ಇದು ಜನಸಾಮಾನ್ಯರಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಕರಪತ್ರ ಹಂಚಿಕೆ ಮೇಲೆಯೂ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದ್ದರ ಪರಿಣಾಮ ಮೈಕ್ನಿಂದ ಪ್ರಚಾರ ಕೈಗೊಳ್ಳಲು ಅಭ್ಯರ್ಥಿಗಳು ಹಪಹಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು.
ತಂತ್ರಜ್ಞಾನದ ಮೊರೆ: ಕೆಲ ಅಭ್ಯರ್ಥಿಗಳು ತಂತ್ರಜ್ಞಾನ ಉಪಯೋಗ ಪಡೆಯಲು ಮುಂದಾಗಿದ್ದು ಕಂಡು ಬಂದಿತು. ಆಯಾ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲದೇ ಅವರ ಸಂಬಂಧಿಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಎಸ್ಎಂಎಸ್ ಮೂಲಕ ವಿನಂತಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಇದರಿಂದಾಗಿ ಕ್ಷೇತ್ರಾದ್ಯಂತ ಗುರುವಾರ, ಮೊಬೈಲ್ ಎಸ್ಎಂಎಸ್ ಕ್ರಾಂತಿಯೇ ನಡೆಯುತ್ತಿದೆಯೋ ಎಂಬಂತೆ ಭಾಸವಾಯಿತು. ಅಲ್ಲದೇ, ಧ್ವನಿ ಮುದ್ರಿತ ಸಂದೇಶಗಳು ಸಹ ಆಗಾಗ ಮತದಾರರ ಮೊಬೈಲ್ಗೆ ಕರೆ ಬರುತ್ತಿರುವುದು ಸ್ವಲ್ಪಮಟ್ಟಿಗೆ ಗ್ರಾಹಕರ ಕೋಪಕ್ಕೂ ಕಾರಣವಾಯಿತು.
ಮತ್ತೊಂದು ಸುತ್ತು:  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಮತ್ತೊಂದು ಸುತ್ತು ತಮ್ಮ ಪಕ್ಷಗಳ ಹಿರಿಯ ನಾಯಕರನ್ನು ಕ್ಷೇತ್ರಕ್ಕೆ ಕರೆತಂದು ಪ್ರಚಾರ ಕಾರ್ಯ ನಡೆಸಬೇಕೆಂಬ ಉತ್ಕಟ ಆಸೆಯಿಂದ ಇಡೀ ದಿನ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು. ಒಟ್ಟಾರೆ, ಏನೇ ಇರಲಿ ಇಂದು (ಶುಕ್ರವಾರ) ಬಹಿರಂಗ ಪ್ರಚಾರಕ್ಕೆ ಕೊನೆ ಬೀಳಲಿದ್ದು, ಚುನಾವಣೆಯ ಕತ್ತಲ ರಾತ್ರಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ಪ್ರಕ್ರಿಯೆ ರಾಜಕೀಯ ಪಕ್ಷಗಳ ನಾಯಕರಿಂದ ಹಿಡಿದು ಮತದಾರರ ನಿದ್ದೆಗೆಡಿಸಿದ್ದು ಸುಳ್ಳಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.